ಸಿಎಸ್ಆರ್ ನಿಧಿಯನ್ನು ಗ್ರಾಮೀಣ ಭಾಗದ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಮೀಸಲಿಡಿ:

ಉದ್ಯಮಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ

ಬೆಂಗಳೂರು: “ನಮ್ಮ ರಾಜ್ಯದಲ್ಲಿ ಹೊಸ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದೇವೆ. ಗ್ರಾಮೀಣ ಭಾಗದ ಶಾಲೆಗಳ ಗುಣಮಟ್ಟ ಸುಧಾರಣೆಗೆ ಸಿಎಸ್ಆರ್ ನಿಧಿಯನ್ನು ಮೀಸಲಿಡಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಉದ್ಯಮಿಗಳಿಗೆ ಕರೆ ನೀಡಿದರು.

ಬೆಂಗಳೂರು ಮುಖ್ಯ ಅರಮನೆಯಲ್ಲಿ ನಡೆದ ಬೆಂಗಳೂರು ಟೆಕ್ ಸಮ್ಮೇಳನದಲ್ಲಿ ಶಿವಕುಮಾರ್ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಿಷ್ಟು:

 

“ಗ್ರಾಮೀಣ ಭಾಗದ ಶಾಲೆಗಳ ಗುಣಮಟ್ಟ ಹೆಚ್ಚಿದರೆ ಆ ಭಾಗದ ಮಕ್ಕಳು ಕೂಡ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ನೆರವಾಗುತ್ತದೆ. ಈ ಬಗ್ಗೆ ಪ್ರೇಮ್ ಜೀ ಸೇರಿದಂತೆ ಹಲವರ ಜತೆ ಚರ್ಚೆ ಮಾಡಿದ್ದು, ಈಗಾಗಲೇ 2 ಸಾವಿರ ಕೋಟಿ ಹಣವನ್ನು ಈ ಉದ್ದೇಶಕ್ಕೆ ನೀಡಲು ಅವರು ಮುಂದಾಗಿದ್ದಾರೆ. ನಾವೆಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡೋಣ. 

ರಾಜ್ಯದಲ್ಲಿ ನೂತನ ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಲಾಗಿದೆ. ಆದರೂ ಉದ್ಯಮದಾರರಿಗೆ ರಾಜ್ಯ ಸರ್ಕಾರ ಯಾವ ಸವಲತ್ತು ಹಾಗೂ ಪ್ರೋತ್ಸಾಹ ಸಿಗುತ್ತದೆ ಎಂಬುದು ಮುಖ್ಯವಾಗುತ್ತದೆ.

ಉದ್ಯಮಿಗಳು, ಬಂಡವಾಳ ಹೂಡಿಕೆದಾರರು ಬಲಿಷ್ಠವಾದರೆ, ಸರ್ಕಾರ ಬಲಿಷ್ಠವಾಗುತ್ತದೆ. ನೀವು ದುರ್ಬಲರಾದರೆ ನಾವು ದುರ್ಬಲವಾಗುತ್ತೇವೆ. ನೀವು ಆರ್ಥಿಕವಾಗಿ ಸಧೃಡವಾದರೆ ರಾಜ್ಯ ಕೂಡ ಆರ್ಥಿಕವಾಗಿ ಸಧೃಡವಾಗುತ್ತದೆ ಎಂದು ನಾವು ನಂಬಿದ್ದೇವೆ.

 

ನಾನು ಬಹಳ ವರ್ಷಗಳಿಂದ ಸಚಿವನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಮೊದಲ ಬಾರಿಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವದಲ್ಲಿ ಪಾಲ್ಗೊಂಡ ನಾರಾಯಣ ಮೂರ್ತಿ ಹಾಗೂ ಅಜೀಂ ಪ್ರೇಮ್ ಜಿ ಅವರು ಇದಕ್ಕೆ ದೇಶದಲ್ಲೇ ಒಂದು ಹೊಸ ರೂಪ ನೀಡಿದರು. 

ನಂತರ ವಿಶ್ವದ ಪ್ರಮುಖ ನಾಯಕರು ಬೆಂಗಳೂರಿಗೆ ಬರಲು ಆರಂಭಿಸಿದರು. ಬೆಂಗಳೂರಿಗೆ ಸಾವಿರಾರು ಬಹುರಾಷ್ಟ್ರೀಯ ಕಂಪನಿಗಳು ಕಾಲಿಟ್ಟವು. ಅವರು ಇಲ್ಲಿ ವ್ಯಾಪಾರ ವ್ಯವಹಾರ ಮಾಡುತ್ತಿದ್ದಾರೆ. ನಾನು ಅಜೀಂ ಪ್ರೇಮ್ ಜೀ ಅವರ ಜತೆ ಚರ್ಚೆ ಮಾಡುವಾಗ ಅವರು ಒಂದು ವಿಚಾರ ಹೇಳಿದರು. ನಮ್ಮಲ್ಲಿ 5 ಮಿಲಿಯನ್ (50 ಲಕ್ಷ) ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ 2 ಮಿಲಿಯನ್ ನಷ್ಟು ಐಟಿ ಉದ್ಯೋಗಸ್ಥರು ಬೆಂಗಳೂರಿನಲ್ಲಿದ್ದಾರೆ.

ತಂತ್ರಜ್ಞಾನದ ಬೆಳವಣಿಗೆಯಲ್ಲಿ ಬೆಂಗಳೂರು ಜಾಗತಿಕ ಮಟ್ಟದಲ್ಲೇ ತನ್ನದೇ ಆದ ಹೆಸರು ಸಂಪಾದಿಸಿದೆ. ನಮ್ಮಲ್ಲಿ 300ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳು ಬೆಂಗಳೂರಿನಲ್ಲಿವೆ. ಇಡೀ ರಾಜ್ಯದಲ್ಲಿ 70ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ. ಈ ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾನವಸಂಪನ್ಮೂಲ ಉತ್ಪಾದನೆ ಬೇರೆ ಯಾವುದೇ ರಾಜ್ಯಗಳಲ್ಲಿ ಆಗುತ್ತಿಲ್ಲ. ಆ ಮೂಲಕ ಇಡೀ ವಿಶ್ವಕ್ಕೆ ಶಕ್ತಿ ನೀಡುತ್ತಿದ್ದೇವೆ.

 

ನಮ್ಮ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ. ನಾವು ನಿಮ್ಮೆಲ್ಲರಿಗೂ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡುತ್ತೇವೆ. ನಮ್ಮ ರಾಜ್ಯದಲ್ಲಿ ತಾಂತ್ರಿಕ ವಿಚಾರವಾಗಿ ಕ್ಷಮತೆ ಹೊಂದಿರುವ ಮಾನವ ಸಂಪನ್ಮೂಲವಿದೆ ಎಂಬ ಭರವಸೆಯನ್ನು ನಾನು ನೀಡಬಲ್ಲೆ. ನಿಮ್ಮಲ್ಲಿ ಏನಾದರೂ ಸಮಸ್ಯೆ, ತೊಂದರೆ ಇದ್ದರೆ ಅವುಗಳನ್ನು ಹೇಳಿ. ನಾವು ನಿಮ್ಮ ಜತೆ ಕೈಜೋಡಿಸಿ ಕೆಲಸ ಮಾಡುತ್ತೇವೆ. ನೀವು ಉದ್ಯೋಗ ಸೃಷ್ಟಿಸಿ, ತೆರಿಗೆ ಪಾವತಿಸಿ ರಾಜ್ಯಕ್ಕೆ ಶಕ್ತಿ ತುಂಬುತ್ತಿದ್ದೀರಿ. ದೇಶದ ತೆರಿಗೆ ಪಾವತಿಯಲ್ಲಿ ಕರ್ನಾಟಕ ಶೇ.37ರಷ್ಟು ಪಾಲನ್ನು ಹೊಂದಿದ್ದು, ಈ ಶಕ್ತಿಯನ್ನು ನೀವು ತುಂಬಿದ್ದೀರಿ. 

ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಈ ಟೆಕ್ ಸಮಿಟ್ ನಡೆದಿದ್ದು, ಅವರು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರು ಬಹಳ ಉತ್ಸುಕತೆಯಿಂದ ಈ ಇಲಾಖೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈ ಬೆಂಗಳೂರಿನ ಸಮ್ಮೇಳನದಲ್ಲಿ ನೀವು ನಿಮ್ಮ ಅಭಿಪ್ರಾಯ, ಆಲೋಚನೆ, ಸಮಸ್ಯೆ ಎಲ್ಲವನ್ನು ಹಂಚಿಕೊಳ್ಳಿ. ನಾವು ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇವೆ.

 

ಮಾಹಿತಿ ತಂತ್ರಜ್ಞಾನ ನೀತಿ ರೂಪಿಸಿದ ಮೊದಲ ರಾಜ್ಯ ಕರ್ನಾಟಕ. ಈಗ ನಾವು ಜೈವಿಕ ಇಂಧನ, ಅನ್ವೇಷಣಾ ನೀತಿಯನ್ನು ರೂಪಿಸಿದ್ದೇವೆ. ಈ ಸಮ್ಮೇಳನದಲ್ಲಿ ನಿಮ್ಮ ಸಲಹೆಗಳನ್ನು ನಾವು ನಿರೀಕ್ಷಿಸುತ್ತೇವೆ. ನಾವು ನಿಮ್ಮ ಜತೆ ಇರುತ್ತೇವೆ ಎಂಬ ವಾಗ್ದಾನ ನೀಡುತ್ತಾ ನಿಮ್ಮೆಲ್ಲರಿಗೂ ಶುಭ ಕೋರುತ್ತೇನೆ.”

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top