ರಸ್ತೆ ಮಾಡುವ ಉದ್ದೇಶಕ್ಕೆ ಇಲ್ಲಿರುವ ದೇವಾಲಯ ಸ್ಥಳಾಂತರ ಮಾಡಲು ಬಹಳ ಒತ್ತಡವಿದೆ. ಈ ಹಿಂದಿನ ಶಾಸಕರು ಹಾಗೂ ಬಿಬಿಎಂಪಿಯವರು ಇದಕ್ಕೆ ಒಪ್ಪಿಕೊಂಡಿದ್ದಾರೆ. ಗಣೇಶನನ್ನು ಸ್ಥಳಾಂತರ ಮಾಡಿ ಶಾಪ ಪಡೆಯಲು ನಾನು ತಯಾರಿಲ್ಲ. ನೀವು ಏನಾದರೂ ಬೇರೆ ವ್ಯವಸ್ಥೆ ಮಾಡಿಕೊಳ್ಳಿ, ದೇವಸ್ಥಾನ ಸ್ಥಳಾಂತರ ವಿಚಾರದಲ್ಲಿ ನಾನು ಕೈ ಹಾಕುವುದಿಲ್ಲ ಎಂದು ಬ್ರಿಗೇಡ್ ಸಂಸ್ಥೆಗೆ ಹೇಳುತ್ತೇನೆ.
ನಿಮಗೆ, ನನಗೆ ಹಾಗೂ ರಾಜ್ಯಕ್ಕೆ ಬಂದಿರುವ ವಿಘ್ನ ನಿವಾರಣೆ ಮಾಡಲಿ ಎಂದು ವಿಜಯಕ್ಕೆ ನಾಯಕ ವಿನಾಯಕನನ್ನು ಪೂಜೆ ಮಾಡಿ ಬಂದಿದ್ದೇನೆ.
ಕುಡಿಯುವ ನೀರು, ಟ್ರಾಫಿಕ್ ಸಮಸ್ಯೆ ಬಗ್ಗೆ ನೀವು ನನ್ನ ಗಮನ ಸೆಳೆದಿದ್ದೀರಿ. ಈ ಭಾಗದಲ್ಲಿ ಟನಲ್ ರಸ್ತೆ ನಿರ್ಮಾಣ ಮಾಡಲು ಸಾಧ್ಯವೇ ಎಂದು ನಾನು ಪರೀಕ್ಷೆ ನಡೆಸುತ್ತಿದ್ದೇನೆ. ಈ ಬಗ್ಗೆ ಕೆಲವು ಪ್ರಸ್ತಾವನೆ ಬಂದಿವೆ. ಉತ್ತರ ಕರ್ನಾಟಕ ಭಾಗಕ್ಕೆ ಈ ಮಾರ್ಗವಾಗಿ ಹೋಗಬೇಕು. ಇಲ್ಲಿ ವರ್ತುಲ ರಸ್ತೆ ಸಂಪರ್ಕ ಇದ್ದು ಬಹಳ ಮುಖ್ಯವಾದ ಜಂಕ್ಷನ್ ಆಗಿದೆ.
ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ನಾವು ನಮ್ಮ ನೀರು ನಮ್ಮ ಹಕ್ಕು ಹೋರಾಟ ಮಾಡಿದ್ದೇವೆ. ಅದು ಒಂದು ಹಂತಕ್ಕೆ ಬಂದಿದ್ದು, ಕಾವೇರಿ ಐದನೇ ಹಂತದ ಯೋಜನೆ ಮೇ ಅಂತ್ಯದ ವೇಳೆಗೆ ಮುಕ್ತಾಯವಾಗಿ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ.
ಡಿ.ಕೆ ಸುರೇಶ್ ಇಲ್ಲಿನ ಸಂಸದರಾಗಿರುವುದು, ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿರುವುದರಿಂದ ನಿಮಗೆ ಅನುಕೂಲವಾಗಲಿದೆ. ನಾನೇ ನೀರಾವರಿ ಸಚಿವನೂ ಆಗಿದ್ದೇನೆ. ನನ್ನ ಕಾಲದಲ್ಲಿ ಈ ನೀರಿನ ಸಮಸ್ಯೆ ಬಗೆಹರಿಯದಿದ್ದರೆ ಇನ್ಯಾವುದೇ ಕಾಲದಲ್ಲೂ ಬಗೆಹರಿಯುವುದಿಲ್ಲ.
ನಾವು ಕೊಟ್ಟ ಮಾತಿನಂತೆ ನಡೆದುಕೊಂಡು ಮಾತು ಉಳಿಸಿಕೊಂಡಿದ್ದೇವೆ. ನಮ್ಮ ಗ್ಯಾರಂಟಿ ಬಗ್ಗೆ ಮೋದಿ ಅವರು ಲೇವಡಿ ಮಾಡುತ್ತಿದ್ದರು. ನಾವು ಗ್ಯಾರಂಟಿ ಘೋಷಣೆ ಮಾಡಿ, ಜಾರಿ ಮಾಡಿದ ನಂತರ ಮೋದಿ ಅವರು ಈಗ ತಮ್ಮ ಗ್ಯಾರಂಟಿ ಎಂದು ಪ್ರಚಾರ ಪಡೆಯುತ್ತಿದ್ದಾರೆ.
ಅವರು ಏನಾದರೂ ಮಾಡಿಕೊಳ್ಳಲಿ. ನಿಮಗೆ ನೀರು ಕೊಟ್ಟು, ನಿಮ್ಮ ರಸ್ತೆ ಹಾಗೂ ಇತರೆ ಸಮಸ್ಯೆಯನ್ನು ನಾವು ಬಗೆಹರಿಸುತ್ತೆವೆ ಹೊರತು, ದೆಹಲಿಯಿಂದ ನಿಮ್ಮ ಸಮಸ್ಯೆ ಬಗೆಹರಿಯುವುದಿಲ್ಲ.
ಮೋದಿ ಅಲೆ ಇದ್ದಾಗಲೇ ಸುರೇಶ್ ಅವರು 2.30 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಈಗ ಮೋದಿ ಹಾಗೂ ಬಿಜೆಪಿ ಅಲೆ ಇಲ್ಲ. ನೀವೆಲ್ಲರೂ ಶ್ರದ್ಧೆಯಿಂದ ನಮಗೆ ಮತ ನೀಡಬೇಕು. ನೀವು ನಮಗೆ ಸಹಾಯ ಮಾಡಿದಾಗ ಮಾತ್ರ ನಾವು ನಿಮಗೆ ಸಹಾಯ ಮಾಡಬಹುದು.
ಬೆಂಗಳೂರಿನ ಘನತೆ ಹೆಚ್ಚಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ಕೆಂಗಲ್ ಹನುಮಂತಯ್ಯ, ಎಸ್.ಎಂ ಕೃಷ್ಣ ಅವರ ಕೊಡುಗೆ ಜೊತೆಗೆ, ನಮ್ಮದೇ ಆದ ಕಾಣಿಕೆ ನೀಡಲು ಮುಂದಾಗಿದ್ದೇವೆ. ಬೆಂಗಳೂರು ಖಾಸಗಿ ಬಿಲ್ಡರ್ಸ್ ಗಳು ಮಾಡಿರುವ ಬಡಾವಣೆಗಳು ಹೆಚ್ಚಾಗಿವೆ. ಇದು ಯೋಜಿತ ನಗರವಲ್ಲ. ಹೀಗಾಗಿ ಬೆಂಗಳೂರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇನೆ.
ನೀವು ಸಲ್ಲಿಸಿರುವ ಬೇಡಿಕೆ ಬಗ್ಗೆ ಗಮನ ಹರಿಸುತ್ತೇನೆ. ಈ ವಿಚಾರವಾಗಿ ಅಧಿಕಾರಿಗಳನ್ನು ನಿಮ್ಮ ಬಳಿಗೆ ಕಳುಹಿಸಿಕೊಡುತ್ತೇನೆ. ನಾನು ಕೂಡ ಮತ್ತೊಮ್ಮೆ ಬಂದು ನಿಮ್ಮ ಜೊತೆ ಚರ್ಚೆ ಮಾಡುತ್ತೇನೆ.
ಇಲ್ಲಿ ಬಂದಿರುವ ನೀವು ಮಾತ್ರವಲ್ಲ, ನಿಮ್ಮ ಸ್ನೇಹಿತರು, ಬಂಧು ಬಳಗದವರಿಗೆ ಸುರೇಶ್ ಅವರಿಗೆ ಮತ ಹಾಕುವಂತೆ ಹೇಳಬೇಕು. ನಿಮ್ಮ ಸಮಸ್ಯೆ ಬಗೆಹರಿಸಲು ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದಿದೆ.
ಸುರೇಶ್ ರಾಜ್ಯದ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿ, ಕೋವಿಡ್ ಸಮಯದಲ್ಲಿ ಜನರಿಗೆ ಆಸರೆಯಾಗಿ ನಿಂತ ಏಕೈಕ ಸಂಸದರಾಗಿದ್ದಾರೆ. ನಾನು ನನ್ನ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಮಾಡದಿದ್ದರೂ ನಮ್ಮ ಕ್ಷೇತ್ರದ ಜನ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಿದರು.
ಎದುರಾಳಿ ಪಕ್ಷದ ಯಾವುದೇ ಅಭ್ಯರ್ಥಿ ಈ ರೀತಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುವ ಧೈರ್ಯ ನೀಡುವುದಿಲ್ಲ. ಅವರನ್ನು ನಂಬಿಕೊಂಡರೆ ಏನೂ ಆಗುವುದಿಲ್ಲ. ಹೀಗಾಗಿ ಸುರೇಶ್ ಹಾಗೂ ಹಸ್ತದ ಗುರುತಿಗೆ ಮತ ಹಾಕಿ. ನೀವು ನಮಗೆ ಪ್ರೀತಿ ವಿಶ್ವಾಸ ಕೊಟ್ಟಿದ್ದು, ಮತವನ್ನು ನೀಡಿ ಶಕ್ತಿ ತುಂಬಬೇಕು.
ಗ್ಯಾರಂಟಿ ಚೆಕ್ ಗೆ ನಾನು ಸಿದ್ದರಾಮಯ್ಯ ಅವರು ಸಹಿ ಹಾಕಿದ್ದು, ಅದಕ್ಕಾಗಿ ಪ್ರತಿ ವರ್ಷ 52 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಅಪಾರ್ಟ್ಮೆಂಟ್ ನಿವಾಸಿಗಳಲ್ಲೂ ಕೆಲವರಿಗೆ ಈ ಯೋಜನೆಯ ಲಾಭ ಸಿಗುತ್ತಿದೆ. ನಾವು ನುಡಿದಂತೆ ನಡೆಯುತ್ತೇವೆ ಎಂದು ಇಡೀ ದೇಶಕ್ಕೆ ಸಾಬೀತಾಗಿದೆ.
ಅದೇ ರೀತಿ ನಿಮ್ಮ ಸಮಸ್ಯೆಗಳಿಗೂ ನಾವು ಪರಿಹಾರ ನೀಡುತ್ತೇವೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡುತ್ತೇನೆ. ಇಲ್ಲಿ ವಿದ್ಯಾವಂತ, ಬುದ್ಧಿವಂತ ಹಾಗೂ ಪ್ರಜ್ಞಾವಂತರು ಇದ್ದೀರಿ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುಸುಮಾ ಅವರು ಇಲ್ಲಿ ಸ್ಪರ್ಧೆ ಮಾಡಿದ್ದರು. ನೀವೆಲ್ಲರೂ ಸೇರಿ ಅವರಿಗೆ ಶಕ್ತಿ ನೀಡಬೇಕಿತ್ತು. ನೀವು ಅವರನ್ನು ಗೆಲ್ಲಿಸಿದ್ದರೆ, ಅವರು ಮುಂದೆ ನಿಂತು ನಿಮ್ಮ ಸಮಸ್ಯೆ ಬಗೆಹರಿಸುತ್ತಿದ್ದರು.
ಈ ಬಾರಿ ಚುನಾವಣೆಯಲ್ಲಿ ನನ್ನ ಸಹೋದರ ಡಿ.ಕೆ. ಸುರೇಶ್ ಪರವಾಗಿ ಮತಯಾಚನೆ ಮಾಡಲು ಬಂದಿದ್ದೇನೆ. ನಿಮಗೆ ಈ ಕ್ಲಬ್ ಹೌಸ್ ಪೂರ್ಣಗೊಳಿಸಿ ನಿಮಗೆ ಹಸ್ತಾಂತರಿಸುವವರೆಗೂ ನಾನು ಪ್ರಮಾಣಪತ್ರ ನೀಡುವುದಿಲ್ಲ. ಆದರೆ ನೀವೆಲ್ಲಾ ಸೇರಿ ಇಲ್ಲಿರುವ ಮತಗಳನ್ನು ಸುರೇಶ್ ಅವರಿಗೆ ಹಾಕಿಸಬೇಕು. ನಾನು ಕೊಟ್ಟ ಭರವಸೆ ಈಡೆರಿಸುತ್ತೇನೇ, ನೀವು ನಿಮ್ಮ ಭರವಸೆ ಈಡೇರಿಸಿ. ಇದು ನಮ್ಮ ನಡುವಣ ಒಪ್ಪಂದ.
ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ ಹಾಗೂ ಆನೇಕಲ್ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ. ಇಲ್ಲಿನ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ರೈಲ್ವೆ ಮಾರ್ಗದ ಬಳಿ ಅಂಡರ್ ಪಾಸ್ ಮಾಡಲು ಡಿ.ಕೆ. ಸುರೇಶ್ ನನಗೆ ಹೇಳಿದ್ದು, ಇದರ ಡಿಪಿಆರ್ ಮಾಡಲಾಗುತ್ತಿದೆ. ಮೋದಿ ಮುಖ ನೋಡಿ ಮತ ಹಾಕುವುದಾದರೆ ಮೋದಿ ಅವರಿಂದಲೇ ಕೆಲಸ ಮಾಡಿಸಿಕೊಳ್ಳಿ ನಮ್ಮ ಅಭ್ಯಂತರವಿಲ್ಲ. ನಮ್ಮ ಮೇಲೆ ವಿಶ್ವಾಸ ಇಟ್ಟು ನಮ್ಮ ಪರ ನಿಂತರೆ, ನಾವು ಮುಂದೆ ನಿಂತು ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ.
ನಿಮ್ಮ ಸಮಸ್ಯೆ ನಮ್ಮ ಸಮಸ್ಯೆ. ನಮ್ಮ ಶಕ್ತಿಯೇ ನಿಮ್ಮ ಶಕ್ತಿ. ಹೀಗಾಗಿ ನಮ್ಮ ಕೈಗೆ ಶಕ್ತಿ ಕೊಡಿ. ಡಿ.ಕೆ ಸುರೇಶ್ ಬಗ್ಗೆ ನಾನು ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ರಾಜ್ಯದಲ್ಲಿರುವ ಅತ್ಯಂತ ನಿಷ್ಠಾವಂತ ಹಾಗೂ ಕಾರ್ಯಪ್ರವೃತ್ತರಾದ ಸಂಸದರು ಡಿ.ಕೆ. ಸುರೇಶ್. ಅವರು ಅಭಿವೃದ್ಧಿಗೆ ಹಾಗೂ ಜನರಿಗೆ ಸಮಯ ಕೊಟ್ಟಷ್ಟು ಬೇರೆಯವರು ಕೊಟ್ಟಿಲ್ಲ. ನೀವೆಲ್ಲ ಸೇರಿ ನಮಗೆ ಶಕ್ತಿ ನೀಡಬೇಕು.