ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಎಸ್.ಸಿ ಮತ್ತು ಎಸ್.ಟಿ ಸಮುದಾಯಗಳ ರಾಜ್ಯ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಪಾಲ್ಗೊಂಡು ಬಳ್ಳಾರಿ ಜಿಲ್ಲೆಯಲ್ಲಿ ಎಸ್.ಸಿ ಮತ್ತು ಎಸ್.ಟಿ ದೌರ್ಜನ್ಯ ಪ್ರಕರಣಗಳ ಬಗ್ಗೆ ಚರ್ಚಿಸಿದರು.
ವಿಶೇಷವಾಗಿ ನಡೆದ ಸಭೆಯಲ್ಲಿ ಇನ್ನು ಮುಂದೆ ಪ್ರತಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಎಲ್ಲಾ ಶಾಸಕರು ಮಾಸಿಕ ಸಭೆ ಮತ್ತು ತ್ರೈಮಾಸಿಕ ಕೆ.ಡಿ.ಪಿ ಸಭೆಗಳಲ್ಲಿ ಎಸ್.ಸಿ ಮತ್ತು ಎಸ್.ಟಿ ದೌರ್ಜನ್ಯ ಪ್ರಕರಣ ಬಗ್ಗೆ ಪರಿಶೀಲನಾ ವರದಿಯ ಬಗ್ಗೆ ಚರ್ಚೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ಇಡೀ ರಾಜ್ಯದಲ್ಲಿ ಯಾವುದೇ ಪೊಲೀಸ್ ಠಾಣೆಯ ಅಧಿಕಾರಿಗಳು ಎಸ್.ಸಿ & ಎಸ್.ಟಿ ಕ್ಷೇತ್ರದ ಶಾಸಕರು ಕರೆ ಮಾಡಿದ ಸಂದರ್ಭದಲ್ಲಿ ದುರ್ವರ್ತನೆ ತೋರಿಸಿದಲ್ಲಿ ಅಂತಹ ಅಧಿಕಾರಿಗಳನ್ನು ವಜಾಗೊಳಿಸಿ ಎಂದು ಮುಖ್ಯಮಂತ್ರಿಗಳು ಹಿರಿಯ ಪೊಲೀಸ್ ಅಧಿಕಾರಿಗೆ ಖಡಕ್ ಆದೇಶ ನೀಡಿದರು.
ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಹೆಚ್. ಕೆ. ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್. ಸಿ ಮಹದೇವಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಡಾ. ಪ್ರಿಯಾಂಕ್ ಖರ್ಗೆ, ಸಹಕಾರ ಇಲಾಖೆ ಸಚಿವ ಕೆ.ಎನ್. ರಾಜಣ್ಣ, ಅಬಕಾರಿ ಸಚಿವ ಆರ್. ಬಿ ತಿಮ್ಮಾಪುರ ಸೇರಿದಂತೆ ರಾಜ್ಯದ ಎಸ್.ಸಿ & ಎಸ್.ಟಿ ಮೀಸಲು ಕ್ಷೇತ್ರದ ಶಾಸಕರು ಉಪಸ್ಥಿತರಿದ್ದರು.