ಬೆಂಗಳೂರು: ತಂದೆ-ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪರಾರಿಯಾಗಿದ್ದ ಆರೋಪಿ ಮಗನನ್ನು ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
26 ವರ್ಷದ ಶರತ್ ಬಂಧಿತ ಆರೋಪಿಯಾಗಿದ್ದು, ರಾಡ್ ನಿಂದ ಹೊಡೆದು ಅಪ್ಪ-ಅಮ್ಮನನ್ನ ಹತ್ಯೆ ಮಾಡಿ ಈತ ಪರಾರಿಯಾಗಿದ್ದ.
ಬ್ಯಾಟರಾಯನಪುರ ನಿವಾಸಿ ಭಾಸ್ಕರ್ ಹಾಗೂ ಶಾಂತಾ ಅವರನ್ನು ತಲೆಗೆ ರಾಡ್ನಿಂದ ಹೊಡೆದು ಜುಲೈ 17ರಂದು ಕೊಲೆ ಮಾಡಲಾಗಿತ್ತು. ಕೃತ್ಯ ಎಸಗಿ ಪರಾರಿಯಾಗಿದ್ದ ಶರತ್, ಮಂಗಳೂರು ಮೂಲಕ ಮಡಿಕೇರಿಗೆ ಹೋಗಿ ಅರಣ್ಯದಲ್ಲಿ ತಲೆಮರೆಸಿಕೊಂಡಿದ್ದ.ಈತನನ್ನು ಪತ್ತೆ ಮಾಡಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ ಎಂದು ವರದಿಯಾಗಿದೆ.
ಮಂಗಳೂರಿನ ಮೂಲದ ಭಾಸ್ಕರ್-ಶಾಂತಾ, ಬ್ಯಾಟರಾಯನಪುರದಲ್ಲಿ 12 ವರ್ಷಗಳಿಂದ ವಾಸವಿದ್ದರು. ಭಾಸ್ಕರ್, ಹೋಟೆಲ್ವೊಂದರಲ್ಲಿ ಕ್ಯಾಷಿಯರ್ ಆಗಿದ್ದರು. ಶಾಂತಾ ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು. ಹಿರಿಯ ಮಗ ಸಜಿತ್, ಪದವೀಧರ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡನೇ ಮಗ ಶರತ್, ಪಿಯುಸಿ ಓದಿದ್ದು, ಕೆಲಸವಿಲ್ಲದೇ ಮನೆಯಲ್ಲಿರುತ್ತಿದ್ದ ಎಂದು ತಿಳಿಸಿವೆ.
ಸೋಮವಾರ ಸಂಜೆ ತಂದೆ- ತಾಯಿ ಜೊತೆ ಜಗಳ ತೆಗೆದಿದ್ದ ಆರೋಪಿ ತಲೆಗೆ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಮನೆ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದ.
ಬಂಧಿತ ಶರತ್, ತಂದೆ-ತಾಯಿ, ನನ್ನ ಹಾಗೂ ಅಣ್ಣನ ನಡುವೆ ತಾರತಮ್ಯ ಮಾಡುತ್ತಿದ್ದರು.ಇದರಿಂದ ಕೊಲೆ ಮಾಡಿದೆ ಎಂಬುದಾಗಿ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಕೊಲೆ ಬಳಿಕ ಮಂಗಳೂರಿಗೆ ಹೋಗಿದ್ದ ಆರೋಪಿ ಅಲ್ಲಿಂದ ಮಡಿಕೇರಿಗೆ ತೆರಳಿದ್ದ. ಎರಡು ದಿನ ಅರಣ್ಯದಲ್ಲಿ ಸುತ್ತಾಡಿದ್ದ. ಈ ಸಂದರ್ಭದಲ್ಲಿ ತಿನ್ನಲು ಏನೂ ಸಿಕ್ಕಿರಲಿಲ್ಲ. ವಿಪರೀತ ಹಸಿದಿದ್ದರಿಂದ ಆರೋಪಿ ಊಟಕ್ಕಾಗಿ ಹುಡುಕಾಡಿದ್ದ. ಅರಣ್ಯದಂಚಿನ ತೋಟದ ಮನೆಯೊಂದಕ್ಕೆ ಹೋಗಿ ಬಾಗಿಲು ಬಡಿದಿದ್ದ. ಈತನ ವರ್ತನೆಯಿಂದ ಅನುಮಾನಗೊಂಡಿದ್ದ ಮನೆ ನಿವಾಸಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದಿದ್ದ ಪೊಲೀಸರು, ಶರತ್ನನ್ನು ವಶಕ್ಕೆ ಪಡೆದಿದ್ದರು.ವಿಚಾರಣೆ ವೇಳೆ ಈತ ಕೊಲೆ ಆರೋಪಿ ಎನ್ನುವುದು ಬಯಲಾಗಿದೆ.