ಬಳ್ಳಾರಿ: ಬಾಣಂತಿಯರ ಸರಣಿ ಸಾವಿನ ನೆನಪು ಹಸಿರಾಗಿರುವಾಗಲೇ ಬಳ್ಳಾರಿಯ ಜಿಲ್ಲಾ ಆಸ್ಪತ್ರೆಯ ಅಧೀಕ್ಷರೊಬ್ಬರು ಮಹಿಳಾ ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದ್ದು, ಸದರಿ ಅಧೀಕ್ಷನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಬಾಣಂತಿಯರ ಸಾವು ಪ್ರಕರಣ ರಾಜ್ಯದದ್ಯಾಂತ ಸುದ್ದಿಯಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಯ ಬಗ್ಗೆ ಸಂಶಯ ಮೂಡಿಸಿತ್ತು. ಈಗ ಬಿಮ್ಸ್ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಒಬ್ಬರು ಲೈಂಗಿಕ ಕಿರುಕುಳ ಎದುರಿಸಿರುವ ಪ್ರಕರಣವು ವರದಿಯಾಗಿದ್ದು, ಬಿಮ್ಸ್ ಆಸ್ಪತ್ರೆಯು ಮಹಿಳೆಯರಿಗೆ ಸುರಕ್ಷಿತವಲ್ಲವೇ ಎನ್ನುವ ಅನುಮಾನ ಮೂಡಿಸಿದೆ.
ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಮಹಿಳಾ ಕಂಪ್ಯೂಟರ್ ಆಪರೇಟರ್ ಒಬ್ಬರಿಗೆ ಅದೇ ಆಸ್ಪತ್ರೆಯಲ್ಲಿ ಅಧೀಕ್ಷಕರಾಗಿ ಕರ‍್ಯನಿರ್ವಹಿಸುತ್ತಿರುವ ವಿ.ಕೆ.ವೆಂಕಟೇಶ್ ಎಂಬುವರು ಲೈಂಗಿಕ ದೌರ್ಜನ್ಯ ನೀಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸದರಿ ಮಹಿಳೆಯು ಬಳ್ಳಾರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಜಿಲ್ಲಾ ಎಸ್.ಪಿ. ಡಾ||ಶೋಭಾರಾಣಿ ವಿ.ಜೆ. ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಆರೋಪಿ ವೆಂಕಟೇಶ್ ಅವರು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಜ.2 ರಂದು ದೂರು ದಾಖಲಾಗಿದೆ. ಗುನ್ನೆ ನಂ.01/2025 ಕಲಂ 64(2)(ಎಮ್),115(2),352, 351(2) ಬಿಎನ್‌ಎಸ್ 2023 ಅಡಿಯಲ್ಲಿ ಕೇಸ್ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಯು ಲೈಂಗಿಕ ಕಿರುಕುಳ ನೀಡುವುದಲ್ಲದೇ, ಸಂತ್ರಸ್ತೆಗೆ ಬ್ಲ್ಯಾಕ್‌ಮೇಲ್ ಮಾಡಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ದೂರಿನಲ್ಲಿ ಏನಿದೆ? : ಅಧೀಕ್ಷಕ ವೆಂಕಟೇಶ್ ಕಳೆದ ವರ್ಷ ನವೆಂಬರ್ 25 ರಂದು ಸಂತ್ರಸ್ತೆಯ ಮೇಲೆ ಹಲ್ಲೆ ಮಾಡಿ, ತನ್ನೊಂದಿಗೆ ಕಳೆದ ಖಾಸಗಿ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ, ನಿಮ್ಮ ಕುಟುಂಬದ ಮರ್ಯಾದೆ ಹರಾಜು ಹಾಕುತ್ತೇನೆ ಎಂದು ಬೆದರಿಸಿದ್ದಾನೆ ಎಂದು ದೂರು ನೀಡಲಾಗಿದೆ.
ನಂತರ, ಸಂತ್ರಸ್ತೆಯನ್ನು ಬಲವಂತವಾಗಿ ಕಾರ್‌ನಲ್ಲಿ ಕೂಡಿಸಿಕೊಂಡು ಬೆಳಗಲ್ ರಸ್ತೆ ಬಳಿಯ ಆಕಾಶವಾಣಿ ಕೇಂದ್ರದ ಹತ್ತಿರ ಇರುವ ಲೇ-ಔಟ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದೇ ರೀತಿಯಾಗಿ ಸಂತ್ರಸ್ತೆ ಮೇಲೆ ಪದೇ ಪದೇ ಈ ಅಧಿಕಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಕೇಸ್ ದಾಖಲಿಸಲಾಗಿದ್ದು, ಆರೋಪಿ ವೆಂಕಟೇಶ್‌ನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡಲಾಗಿದೆ ಎಂದು ಎಸ್.ಪಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಬಿಮ್ಸ್ ಮಹಿಳಾ ಸಿಬ್ಬಂದಿಯ ಮೇಲೆ ಸಹಾಯಕ ಆಡಳಿತಾಧಿಕಾರಿ ವೆಂಕಟೇಶ್ ಎಂಬುವವರು ಕಳೆದ ಎರಡು ವರ್ಷದಿಂದ ಲೈಂಗಿಕ ಶೋಷಣೆ ನೀಡಿದ್ದಾರೆ ಎಂದು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.”
– ಡಾ|| ಶೋಭಾರಾಣಿ, ಪೊಲೀಸ್ ಸೂಪರಿಂಟೆಂಡೆಟ್, ಬಳ್ಳಾರಿ