ದೆಹಲಿ,ಮಾ,10 : ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟು ಹತ್ತೇ ವರ್ಷಗಳಲ್ಲಿ ಒಂದು ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವೇ? ಅದನ್ನು ಸಾಧ್ಯವಾಗಿಸಿದ್ದಾರೆ ಭಗವಂತ್ ಮಾನ್. ಅವರೀಗ ಪಂಜಾಬ್ ಮುಖ್ಯಮಂತ್ರಿ ಹುದ್ದೆಯನ್ನು ಏರಲಿದ್ದಾರೆ. ರಾಜಕೀಯ ಪಕ್ಷ ಕಟ್ಟಿ ಒಂದೇ ವರ್ಷದಲ್ಲಿ ದೆಹಲಿಯ ಮುಖ್ಯಮಂತ್ರಿಯಾದವರು ಅರವಿಂದ ಕೇಜ್ರೀವಾಲ್! ಕೇಜ್ರೀವಾಲ್ ಇದ್ದರೆ ಎಲ್ಲವೂ ಸಾಧ್ಯ. ದೆಹಲಿಯಲ್ಲಿ ಮಾಡಿದ ಚಮತ್ಕಾರವನ್ನೇ ಅವರು ಪಂಜಾಬಿನಲ್ಲೂ ಮಾಡಿದ್ದಾರೆ. ಪಂಜಾಬಿನ ಎಲ್ಲ ರಾಜಕೀಯ ಸಮೀಕರಣಗಳನ್ನು ತಲೆಕಳಗೆ ಮಾಡಿ ಆಮ್ ಆದ್ಮಿ ಪಾರ್ಟಿಯನ್ನು ಗೆಲ್ಲಿಸಿದ್ದಾರೆ. ಪಂಜಾಬಿನ ಪ್ರೀತಿಯ ‘ಪುತ್ತರ್’ ಭಗವಂತ್ ಮಾನ್ ಮುಖ್ಯಮಂತ್ರಿಯಾಗುತ್ತಿದ್ದಾರೆ. ಹಾಗೆ ನೋಡಿದರೆ ಪಂಜಾಬ್ ರಾಜಕಾರಣದಲ್ಲಿ ಬಲಾಢ್ಯರ ಪೈಪೋಟಿಯ ನಡುವೆ ಎಎಪಿ ಅಧಿಕಾರಕ್ಕೆ ಬಂದಿರುವುದು ಒಂದು ಪವಾಡ. ಅಲ್ಲಿ ಎಪ್ಪತ್ತೈದು ವರ್ಷಗಳಿಂದ ಹಿಡಿತ ಸಾಧಿಸಿರುವ ಕಾಂಗ್ರೆಸ್ ಇದೆ. ಸಿಖ್ ಅಸ್ಮಿತೆಯನ್ನು ಪ್ರತಿಪಾದಿಸುವ ಶಿರೋಮಣಿ ಅಖಾಲಿದಳವಿದೆ. ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡುತ್ತ ಬಂದ ಬಿಜೆಪಿ ಇದೆ. ಈ ಮೂರು ಪ್ರಬಲ ರಾಜಕೀಯ ಪಕ್ಷಗಳಲ್ಲಿ ಸಣ್ಣಪುಟ್ಟ ರಾಜಕೀಯ ಗುಂಪುಗಳೂ ಸಹ ತಮ್ಮ ಅಸ್ತಿತ್ವ ಸ್ಥಾಪಿಸಲು ಯತ್ನಿಸುತ್ತಿವೆ.
ಎಲ್ಲ ರಾಜಕೀಯ ಪಕ್ಷಗಳೂ ಧರ್ಮದ ರಾಜಕಾರಣ, ಜಾತಿಯ ರಾಜಕಾರಣ, ಮಾಫಿಯಾಗಳ ಬೆಂಬಲದ ಹಣಬಲದ ರಾಜಕಾರಣ ನೆಚ್ಚಿಕೊಂಡಿರುವಾಗ ಇದ್ಯಾವುದೂ ಇಲ್ಲದ, ಜನಪರ ರಾಜಕಾರದ ಮಾದರಿಯಾಗಿ ಹುಟ್ಟಿಕೊಂಡ ಆಮ್ ಆದ್ಮಿ ಪಾರ್ಟಿ ಗೆಲ್ಲುವುದು ಅಷ್ಟು ಸುಲಭವಿರಲಿಲ್ಲ. ಆದರೆ ಪಂಜಾಬ್ ಜನರು ತಮಗೆ ಏನನ್ನು ಬೇಕೋ ಅದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪಂಜಾಬ್ ಕೃಷಿಯನ್ನು ನೆಚ್ಚಿಕೊಂಡ ಶ್ರೀಮಂತ ರಾಜ್ಯ. ದೇಶದ ಆರ್ಥಿಕತೆಗೆ ಪಂಜಾಬ್ ಕೊಡುಗೆ ಅಪಾರ. ಆದರೆ ಇಲ್ಲಿ ಡ್ರಗ್ ಮಾಫಿಯಾ, ಮೈನಿಂಗ್ ಮಾಫಿಯಾ, ಟ್ರಾನ್ಸ್ ಪೋರ್ಟ್ ಮಾಫಿಯಾ, ಲಿಕ್ಕರ್ ಮಾಫಿಯಾ, ಲ್ಯಾಂಡ್ ಮಾಫಿಯಾ ಇತ್ಯಾದಿಗಳು ಇತ್ತೀಚಿನ ವರ್ಷಗಳಲ್ಲಿ ಬೆಳೆದುನಿಂತವು. ನಿಸ್ಸಂಶಯವಾಗಿ ಇವನ್ನೆಲ್ಲ ಬೆಳೆಸಿದ್ದು ಕಾಂಗ್ರೆಸ್, ಬಿಜೆಪಿ, ಅಕಾಲಿದಳ ಪಕ್ಷಗಳೇ. ಕೆಲವು ರಾಜಕಾರಣಿಗಳಂತೂ ನೇರವಾಗಿ ಈ ಮಾಫಿಯಾಗಳ ಭಾಗವೇ ಆಗಿದ್ದರು. ಜನರು ರೋಸಿಹೋಗಿದ್ದರು. ಅವರಿಗೆ ಪ್ರಾಮಾಣಿಕ ರಾಜಕಾರಣ ನಡೆಸುವ ತರುಣರ, ವಿದ್ಯಾವಂತರ ಪಕ್ಷ ಬೇಕಾಗಿತ್ತು. ಆಮ್ ಆದ್ಮಿ ಪಾರ್ಟಿ ಆ ಸ್ಥಾನ ತುಂಬಿತು.
ಭಗವಂತ್ ಮಾನ್ ಯಾವುದೇ ರಾಜಕೀಯ ಪರಿವಾರದಿಂದ ಬಂದವರಲ್ಲ. ಪಂಜಾಬ್ ನ ಸಂಗ್ರೂರ್ ಜಿಲ್ಲೆಯ ಸತೌಜ್ ಎಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದು, ಕಲಾವಿದನಾಗುವ ಆಸೆಯಿಂದ ದೆಹಲಿವರೆಗೆ ತಲುಪಿದರು. ಉತ್ತಮ ಹಾಸ್ಯ ಕಲಾವಿದರಾದರು. ಬಹುಮಾನಗಳನ್ನು ಗೆದ್ದರು. ಆದರೆ ಜನರಿಗಾಗಿ ಏನಾದರೂ ಮಾಡಬೇಕೆಂಬ ಅವರ ತುಡಿತ ಪಂಜಾಬ್ ಮುಖ್ಯಮಂತ್ರಿ ಹುದ್ದೆಯವರೆಗೆ ಕರೆದು ತಂದಿತು. ಭಾರತದ ಭವಿಷ್ಯದ ಬಗ್ಗೆ ಕನಸುಗಳನ್ನು ಕಟ್ಟುತ್ತಿದ್ದ ಯುವಕನಿಗೆ ಆಶಾಕಿರಣವಾಗಿ ಒದಗಿಬಂದಿದ್ದು ಆಮ್ ಆದ್ಮಿ ಪಾರ್ಟಿ ಮತ್ತು ಅರವಿಂದ ಕೇಜ್ರೀವಾಲ್. ಪಕ್ಷ ಹುಟ್ಟಿದ ಎರಡೇ ವರ್ಷಗಳಲ್ಲಿ ಅಂದರೆ 2014ರಲ್ಲಿ ಭಗವಂತ್ ಮಾನ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಜನರ ಪ್ರೀತಿ ಅವರಿಗೆ ಬಲುಬೇಗನೇ ಸಿಕ್ಕಿತು. ಅದೇ ಪ್ರೀತಿಯಿಂದಲೇ ಪಂಜಾಬ್ ಮುಖ್ಯಮಂತ್ರಿಯಾಗುವ ಅವಕಾಶವೂ ಅವರಿಗೆ ಲಭಿಸಿದೆ. ಆಮ್ ಆದ್ಮಿ ಪಾರ್ಟಿ ಈ ಬಾರಿ ಚುನಾವಣೆಗೆ ಇಳಿದಾಗಲೇ ವಿರೋಧಿಗಳಿಗೆ ನಡುಕ ಹುಟ್ಟಿಕೊಂಡಿತು. ಅರವಿಂದ ಕೇಜ್ರೀವಾಲ್, ಭಗವಂತ್ ಮಾನ್ ಅವರುಗಳ ಮೇಲೆ ವೈಯಕ್ತಿಕ ಟೀಕಾಪ್ರಹಾರ, ತೇಜೋವಧೆ ನಡೆಯಿತು. ಬಿಜೆಪಿಯ ನರೇಂದ್ರ ಮೋದಿ, ಅಮಿತ್ ಶಾರಿಂದ ಹಿಡಿದು ಕಾಂಗ್ರೆಸ್ ನ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿವರೆಗೆ ಎಲ್ಲರೂ ಇದನ್ನೇ ಮಾಡಿದರು. ಒಂದು ಹಂತದಲ್ಲಂತೂ ಅರವಿಂದ ಕೇಜ್ರೀವಾಲ್ ರಿಗೆ ‘ಭಯೋತ್ಪಾದಕ ಸಂಘಟನೆ’ಗಳ ಸಂಬಂಧವಿಲ್ಲ ಎಂದು ಕ್ರೂರವಾಗಿ ಟೀಕಿಸಲಾಯಿತು, ಪಾಕಿಸ್ತಾನದ ನಂಟು ಕಲ್ಪಿಸಲಾಯಿತು. ಜನರು ಇಂಥ ಕೆಟ್ಟ ಪ್ರಚಾರಗಳಿಗೆ ಕಿವಿಗೊಡಲಿಲ್ಲ.
ಆಮ್ ಆದ್ಮಿ ಪಾರ್ಟಿ ಚುನಾವಣೆಯ ವಿಷಯದಲ್ಲಿ ಅತ್ಯಂತ ಪ್ರಜಾಸತ್ತಾತ್ಮಕವಾಗಿ ನಡೆದುಕೊಂಡಿತು. ಮುಖ್ಯಮಂತ್ರಿ ಅಭ್ಯರ್ಥಿಯನ್ನು ದೆಹಲಿ ಹೈಕಮಾಂಡ್ ಹೇರುವ ಕಾರ್ಯ ಮಾಡಲಿಲ್ಲ. ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನೀವೇ ಆಯ್ಕೆ ಮಾಡಿ ಎಂದು ಪಂಜಾಬ್ ಜನತೆಯ ನಿರ್ಣಯಕ್ಕೆ ಬಿಟ್ಟು ಜನಮತಗಣನೆ ನಡೆಸಲಾಯಿತು. ಶೇ.93ರಷ್ಟು ಮಂದಿ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಎಂದು ಹೇಳಿದರು. ಅದೇ ಪ್ರಕಾರ ಭಗವಂತ್ ಮಾನ್ ಮುಖ್ಯಮಂತ್ರಿ ಅಭ್ಯರ್ಥಿಯಾದರು. ನಮ್ಮದು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿರುವ ರಾಜಕೀಯ ಪಕ್ಷ. ಇತರ ರಾಜಕೀಯ ಪಕ್ಷಗಳ ಹಾಗೆ ನಾವು ದೆಹಲಿಯಲ್ಲಿ ಕುಳಿತು ಪಂಜಾಬಿನ ಮೇಲೆ ಹೇರುವುದಿಲ್ಲ ಎಂದಿದ್ದರು ಕೇಜ್ರೀವಾಲ್. ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯಲ್ಲೇ ಅವರು ತಮ್ಮ ಮಾತಿನಂತೆ ನಡೆದುಕೊಂಡಿದ್ದಾರೆ. ಭಗವಂತ್ ಮಾನ್ ಎದುರು ಸಾಲು ಸಾಲು ಸವಾಲುಗಳಿವೆ. ಪಂಜಾಬ್ ರಾಜ್ಯವನ್ನು ಕಾಡುತ್ತಿರುವ ಮಾಫಿಯಾಗಳನ್ನು ಇಲ್ಲವಾಗಿಸುವುದು ಬಹುದೊಡ್ಡ ಸವಾಲು. ಅದಲ್ಲದೆ ದೆಹಲಿಯ ಕೇಜ್ರೀವಾಲ್ ಸರ್ಕಾರದ ಅದ್ಭುತ ಸಾಧನೆಗಳನ್ನು ಗಮನಿಸಿರುವ ಪಂಜಾಬ್ ಜನತೆ ಸಹಜವಾಗಿಯೇ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಸವಾಲು ಭಗವಂತ್ ಮಾನ್ ಎದುರಿಗಿದೆ. ಪಂಜಾಬ್ ಜನರ ಆಶೋತ್ತರಗಳನ್ನು ಅವರು ಮತ್ತು ಅವರ ಸಹೋದ್ಯೋಗಿಗಳು ಈಡೇರಿಸಲಿ ಎಂಬುದು ನನ್ನ ಆಶಯ.
ಆದಿತ್ಯ