ಬೆಂಗಳೂರು,ಜನವರಿ, 25 : ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್‌ನವರು ಗ್ರಾಹಕರಿಗೆ ನೀಡಿದ್ದ ಸಾಲದ ಮೊತ್ತಕ್ಕಿಂದ ನೂರು ಪಟ್ಟು ಹೆಚ್ಚಿನ ಮೊತ್ತವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಹಿರಿಯ ನಾಯಕ ಹಾಗೂ ಮಾಜಿ ಶಾಸಕ ಎಚ್.ಡಿ.ಬಸವರಾಜು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ.ಬಸವರಾಜು, “ಗ್ರಾಹಕರೊಬ್ಬರು 2006-07ರಲ್ಲಿ ಕೇವಲ 9 ಲಕ್ಷ ಸಾಲವನ್ನು ಪಡೆದು, ನಂತರ ಅದನ್ನು ಪೂರ್ತಿಯಾಗಿ ಮರುಪಾವತಿಸಿದ್ದರು. ಆದರೂ ಅವರಿಂದ 57.30 ಕೋಟಿ ರೂಪಾಯಿ ಸಾಲ ಬಾಕಿ ಇದೆ ಎಂದು ಸುಳ್ಳು ಆರೋಪ ಹೊರಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಿ ಮಾನಸಿಕವಾಗಿ ಕುಗ್ಗಿಸಲು ಹಾಗೂ ಬಲವಂತವಾಗಿ ವಸೂಲಿ ಮಾಡಲು ಯತ್ನಿಸಿದ್ದಾರೆ. ಇಂತಹ ಬಹಳಷ್ಟು ಸುಳ್ಳು ಪ್ರಕರಣಗಳನ್ನು ಬ್ಯಾಂಕ್ ಈವರೆಗೆ ದಾಖಲಿಸಿದೆ. ಬ್ಯಾಂಕ್ ತಾಳಕ್ಕೆ ತಕ್ಕಂತೆ ಪೊಲೀಸರು ಕುಣಿಯುತ್ತಿದ್ದಾರೆ” ಎಂದು ಆರೋಪಿಸಿದರು.
ಆಮ್ ಆದ್ಮಿ ಪಾರ್ಟಿ ಬೆಂಗಳೂರು ಕಾನೂನು ಘಟಕದ ಅಧ್ಯಕ್ಷ ಮಂಜುನಾಥ್ ಸ್ವಾಮಿಯವರು ಮಾತನಾಡಿ, “ಸಾಲ ಪಡೆದಿದ್ದ ಗ್ರಾಹಕರಿಗೆ ಈ ರೀತಿ ಕಿರುಕುಳ ನೀಡುತ್ತಿರುವ ಗುರು ರಾಘವೇಂದ್ರ ಬ್ಯಾಂಕ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಲು ನಾವು ಮುಂದಾಗಿದ್ದೆವು. ಆದರೆ ಬಸವನಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್‌ಐಆರ್ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದಿರುವುದು ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ” ಎಂದು ಮಂಜುನಾಥ್ ಸ್ವಾಮಿ ಹೇಳಿದರು. “ಬೃಹತ್ ಮೊತ್ತದ ಸಾಲ ಪಡೆದಿರುವುದಕ್ಕೆ ದಾಖಲೆ ಒದಗಿಸಬೇಕೆಂದು ವಕೀಲರ ಮೂಲಕ ನೋಟಿಸ್ ಕೊಟ್ಟು ಒಂದೂವರೆ ತಿಂಗಳಾದರೂ ಬ್ಯಾಂಕ್‌ನಿಂದ ಪ್ರತಿಕ್ರಿಯೆ ಬಂದಿಲ್ಲ. ಸೂಕ್ತ ದಾಖಲೆ ನೀಡಿ, ಅಷ್ಟು ಮೊತ್ತದ ಸಾಲ ಪಡೆದಿರುವುದು ನಿಜವೆಂದು ಬ್ಯಾಂಕ್ ಸಾಬೀತು ಪಡಿಸಬೇಕು. ಸುಖಾಸುಮ್ಮನೆ ಗ್ರಾಹಕರ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಮಧ್ಯ ಪ್ರವೇಶಿಸಿ, ಗ್ರಾಹಕರಿಗೆ ಆಗುತ್ತಿರುವ ಅನ್ಯಾಯ ತಡೆಯುವಂತೆ ಪೊಲೀಸರಿಗೆ ಸೂಚನೆ ನೀಡಬೇಕು. ತಪ್ಪಿದಲ್ಲಿ, ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸಲಾಗುವುದು” ಎಂದು ಮಂಜುನಾಥ್ ಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಎಎಪಿ ಮುಖಂಡರಾದ ಉಷಾ ಮೋಹನ್ , ಮಂಜುನಾಥ್ ಪಾಪಣ್ಣ ಹಾಗೂ ಸಂತ್ರಸ್ತ ಕುಟುಂಬಗಳು ಹಾಜರಿದ್ದರು.