ಹಾಯ್, ನಾನು ಪ್ರಜ್ಞಾನ್
ನಿಮ್ಮೆಲ್ಲರ ಪರವಾಗಿ ನಾನು ಚಂದ್ರನ ಮೇಲೆ ಹೆಜ್ಜೆ ಇಟ್ಟಿದ್ದೇನೆ.
ನೆನ್ನೆ (ಆ.23ರಂದು) ನನ್ನನ್ನು ಹೊತ್ತ ವಿಕ್ರಮ ಇಲ್ಲಿ ಇಳಿದ ಕೂಡಲೇ ನೀವೆಲ್ಲಾ ಕುಣಿದು ಕುಪ್ಪಳಿಸಿದಿರಿ ಎಂದು ಕೇಳಿ ಸಂತೋಷವಾಯಿತು. ನಾನು ಸಹ ನಿಮ್ಮ ಹಾಗೆ ಚಂದ್ರನನ್ನು ಭೂಮಿಯಿಂದ ನೋಡಿ ಏನೋನೋ ಕಲ್ಪನೆ ಇಟ್ಟುಕೊಂಡಿದ್ದೆ. ಇದೇ ಖುಷಿಯಲ್ಲಿ ವಿಕ್ರಮನ ಹೊಟ್ಟೆಯಿಂದ ಹೊರ ಬರಲು ಕಾಯುತ್ತಿದ್ದೆ. ವಿಕ್ರಮ ಇಳಿದು ಮೂರುವರೆ ಗಂಟೆಯಾದರೂ ನನಗಾಗಿ ಬಾಗಿಲು ತೆರೆಯಲೇ ಇಲ್ಲ…
ಬಾಗಿಲನು ತೆರೆದು ಚಂದ್ರನ ಮೇಲೆ ಬಿಡೋ ದೊರೆಯೇ ಎಂದು ನಾನು ಹಾಡುತ್ತಲೇ ಇದ್ದೇ. ನಾನು ಇಳಿದೆ ಇಲ್ಲಿ ಎಲ್ಲವೂ ಕ್ಷೇಮ ಎಂದು ಭೂಮಿಗೆ ಸಂದೇಶ ಕಳುಹಿಸಿದ ವಿಕ್ರಮ ಮೂರುವರೆ ಗಂಟೆಗಳ ನಂತರ ನನಗಾಗಿ ಬಾಗಿಲು ತೆರೆದ. ನಾನು ಖುಷಿಯಲ್ಲಿ ನನ್ನ ಬಟ್ಟೆಗಳನ್ನೆಲ್ಲಾ ಸರಿ ಪಡಿಸಿಕೊಂಡು ಫೋಟೋ ತೆಗಿಯೋಕೆ ರೆಡಿ ಇರು ವಿಕ್ರಮನಿಗೆ ಹೇಳಿ ನಿಧಾನವಾಗಿ ಹೆಜ್ಜೆ ಇಡಲು ಆರಂಭಿಸಿದೆ. ವಿಕ್ರಮನೂ ತನ್ನ ಕ್ಯಾಮೆರಾ ಲೆನ್ಸ್ ಒರೆಸಿಕೊಂಡು ಸಿದ್ಧನಾದ. ಆದರೆ ಹೊರ ಬರುತ್ತಿದ್ದಂತೆ ಚಂದ್ರನ ಬಗ್ಗೆ ನನಗಿದ್ದ ಕಲ್ಪನೆಗಳೆಲ್ಲಾ ಠುಸ್ ಅಂದಿತು. ಎಲ್ಲೆಲ್ಲೂ ಬೂದಿ, ಬೂದಿಯ ಬೆಟ್ಟಗಳು. ಇಷ್ಟೊಂದು ಬೂದಿ ಇದ್ದರೂ ವಾತಾವರಣ ಫುಲ್ ಕ್ಲೀನ್. ಯಾಕಂದ್ರೆ ಇಲ್ಲಿ ಗಾಳಿಯೂ ಇಲ್ಲ.
ಆದರೂ ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ದ್ರೋಹ ಮಾಡಬಾರದು ಎಂದು ಮನಸ್ಸು ಗಟ್ಟಿ ಮಾಡಿಕೊಂಡು ಚಂದ್ರನ ಮೇಲೆ ಹೆಜ್ಜೆ ಇಟ್ಟೆ. ನನ್ನ ಕಾಲಿನ ಮೇಲೆ ಇರುವ ನಮ್ಮ ದೇಶದ ಗುರುತನ್ನು ಇಲ್ಲಿ ಅಚ್ಚೊತ್ತಿದೆ. ಇದು ಚಂದ್ರ ಇರುವವರೆಗೂ ಇಲ್ಲೇ ಇರುತ್ತದೆ. ನನ್ನನ್ನು ಸೃಷ್ಟಿ ಮಾಡಿದ ದೇಶದ ಗುರುತನ್ನು ಇಲ್ಲಿ ಮೂಡಿಸಿದ ಗಳಿಗೆಯನ್ನೂ ಮಾತ್ರ ನಾನು ಮರೆಯಲಾರೆ. ಇನ್ನು ಮುಂದೆ ಯಾರೇ ಬಂದರೂ ನಾನು ಬಂದಿದ್ದೆ ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.
ಅಯ್ಯೋ ತುಂಬಾ ಎಮೋಶನಲ್ ಆದೆ ಅನ್ಸುತ್ತೆ. ಇರಲಿ ಬಿಡಿ ಜೀವನದಲ್ಲಿ ಇದು ಒಮ್ಮೆ ಮಾತ್ರ ಸಿಗೋ ಅನುಭೂತಿ. ಭೂಮಿಯಿಂದ 3.84 ಲಕ್ಷ ಕಿ.ಮೀ. ದೂರ ಪ್ರಯಾಣ ಮಾಡಿದಿನಿ. ಒಂದಷ್ಟು ರೆಸ್ಟ್ ಮಾಡೋಣ ಅನ್ಕೊಂಡೆ. ಆದರೆ ಆಗಲ್ಲ. ಚಂದ್ರನಲ್ಲಿ ಇಳಿಯೋಕು ಮೊದಲೇ ನಾನು ಯಾವಾಗ ಸಾಯ್ತೀನಿ ಅಂತಾ ಹೇಳಿ ಕಳುಹಿಸಿದ್ದಾರೆ. ಅಷ್ಟರಲ್ಲಿ ನಾನು ಮಾಡಬೇಕಾದ ಕೆಲಸಗಳ ದೊಡ್ಡ ಪಟ್ಟಿಯೇ ಇದೆ. ವಿಕ್ರಮನೋ ಅರೆ ಹೊಟ್ಟೆ ತಿನ್ನಿಸಿ ನನ್ನನ್ನು ಚಂದ್ರನ ಮೇಲೆ ಬಿಟ್ಟ. ಹೊಟ್ಟೆ ಹಸಿಯುತ್ತಿತ್ತು. ಕೆಲ ಕಾಲ ಸೂರ್ಯನಿಗೆ ಮೈಯೊಡ್ಡಿದೆ ನೋಡಿ ಹೊಟ್ಟೆ ಫುಲ್. ೪೧ ದಿನಗಳ ಕಾಲ ಕತ್ತಲೆಯಲ್ಲೇ ಕುಳಿತಿದ್ದ ನನ್ನ ಮೇಲೆ ಮೊದಲ ಬಾರಿ ಸೂರ್ಯನ ಬಿಸಿಲು ಬಿದ್ದ ಕೂಡಲೇ ಮಿಂಚಿನ ಸಂಚಾರವಾಯಿತು. ಕೈಕಾಲುಗಳಲ್ಲಿ ಶಕ್ತಿ ತುಂಬಿಕೊಂಡಿತು. ಅಂತೂ ಕೆಲಸ ಶುರು ಮಾಡಿದೆ.
‘ಸ್ಸ್ಮೈಲ್ ಪ್ಲೀಸ್’ ಎಂದು ವಿಕ್ರಮನಿಗೆ ಹೇಳಿ ಹೇಳಿ ಸಾಕಾಯ್ತು. ನಾನು ಇಳಿದ ಮೇಲೆ ಅವನಿಗಂತೂ ನನ್ನ ಮೇಲೆ ಗಮನವೇ ಇಲ್ಲ. ಚಂದ್ರನ ನೆಲ ನಡುಗುತ್ತದಾ, ಚಂದ್ರನ ಮೇಲೆ ಶಾಖ ಎಷ್ಟು ವೇಗವಾಗಿ ಸಾಗುತ್ತದೆ, ಚಂದ್ರನ ಮೇಲೆ ಕುಡಿಯೋಕೆ ನೀರು ಸಿಗುತ್ತದಾ, ಹೀಗೆ ಏನೇನೋ ಲೆಕ್ಕ ಹಾಕೋಕೆ ಶುರು ಮಾಡಿದ್ದ. ಅಂತೂ ಜೋರಾಗಿ ನಗೋ ಲೋ ಎಂದು ಕೂಗಿದ ಮೇಲೆ ನನ್ನ ಕಡೆ ತಿರುಗಿದ. ಅವನದ್ದೊಂದು ಫೋಟೋ ತೆಗೆದು, ಅದನ್ನು ಅವನಿಗೆ ಕೊಟ್ಟು ಆದಷ್ಟು ಬೇಗ ಭೂಮಿಗೆ ಕಳುಹಿಸು 140 ಕೋಟಿ ಜನ ಇದಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿ ಮಣ್ಣು ತಿನ್ನುವ ಕೆಲಸಕ್ಕೆ ತೊಡಗಿಕೊಂಡೆ.
ಮಣ್ಣು ತಿನ್ನೋದು ಅನ್ನೊದನ್ನ ತಪ್ಪಾಗಿ ಅರ್ಥ ಮಾಡ್ಕೋಬೇಡಿ. ಇಲ್ಲಿ ನನ್ನ ಕೆಲಸವೇ ಇದು, ಚಂದ್ರನ ಮೇಲೆ ಓಡಾಡುತ್ತಾ ಸರಿಯಾದ ಜಾಗ ಗುರುತಿಸಿ ಅಲ್ಲಿರುವ ಮಣ್ಣು ತೆಗೆದು ಬಾಯಿಗೆ ಹಾಕಿಕೊಂಡು ಅದರ ರುಚಿ ನೋಡಿ ನಿಮಗೆ ಹೇಳಬೇಕು. ಇಲ್ಲಿ ಕಬ್ಬಿಣ ಇದ್ಯಾ, ಮೆಗ್ನಿಷಿಯಂ ಇದ್ಯಾ, ಅಲ್ಯುಮಿನಿಯಂ, ಕ್ಯಾಲ್ಸಿಯಂ, ಟೈಟಾನಿಯಂ ಯಾವುದಿದೆ ಅಂತಾ ರುಚಿ ನೋಡಿ ನಿಮಗೆ ತಿಳಿಸಬೇಕು. ಇವುಗಳ ರುಚಿ ನೋಡೋದ್ರಲ್ಲಿ ನಾನಂತೂ ಪಂಟರ್ ಬಿಡಿ, ವರ್ಷಾನುಗಟ್ಟಲೇ ನಿಮಗಾಗಿ ಇದನ್ನು ಅಭ್ಯಾಸ ಮಾಡಿದಿನಿ. ಅಷ್ಟೇ ಅಲ್ಲಾ ಚಂದ್ರ ಮೇಲೆ ಗುಂಡಿ ತೆಗೆದು ಆಳದಿಂದ ಮಣ್ಣು ತೆಗೆದು ನೀರಿನ ಅಂಶ ಇದೆಯಾ ಎಂಬುದನ್ನು ನಾನು ನೋಡಿ ಹೇಳ್ತೀನಿ ಯೋಚನೆ ಮಾಡ್ಬೇಡಿ…
ಉಫ್….. ಇಷ್ಟೆಲ್ಲಾ ಕೆಲಸ ನಾನು 14 ದಿನದಲ್ಲಿ ಮಾಡಿ ಮುಗಿಸಬೇಕು. ಏಕೆಂದರೆ ಆಮೇಲೆ ನಾನು ಸತ್ತು ಹೋಗ್ತೀನಿ. 14 ದಿನದ ಬಳಿಕ ಇಲ್ಲಿ ಬಿಸಿಲು ಇರೋಲ್ಲ. 14 ದಿನ ಸಂಪೂರ್ಣ ರಾತ್ರಿ. ಏನೂ ಕಾಣೋಲ್ಲ. ನಿಮಗೆ ಉಸಿರಾಡೋಕೆ ಆಮ್ಲಜನಕ ಹೇಗೆ ಮುಖ್ಯಾನೋ ಹಾಗೆ ನನಗೆ ಬದುಕೋಕೆ ಬಿಸಿಲು ಬೇಕು. ಆದರೆ 14 ದಿನ ಬಿಸಿಲು ಇಲ್ಲದೇ ನಾನು ಹೇಗೆ ಬದುಕಿರಲಿ ಹೇಳಿ. ಅಷ್ಟೇ ಅಲ್ಲ ಸೂರ್ಯ ಇಲ್ಲದಿದ್ದರೆ ಇಲ್ಲಿ ಉಷ್ಣಾಂಶ -250 ಡಿಗ್ರಿಗೆ ಇಳಿಯುತ್ತೆ. ಈ ಚಳಿಯಲ್ಲಿ ನನ್ನ ಪರಿಸ್ಥಿತಿ ನೆನಪಿಸಿಕೊಂಡು ನಿಮ್ಮ ಮೈ ಫ್ರೀಜ್ ಆಗ್ತಿದೆ ಅಲ್ವಾ…. ಆದ್ರೂ ನಿಮಗಾಗಿ 14 ದಿನ ಉಸಿರು ಬಿಗಿ ಹಿಡಿದು ಕಾಯ್ತಾ ಇರ್ತೀನಿ. ನನ್ನ ಅದೃಷ್ಟ ಚೆನ್ನಾಗಿದ್ರೆ 14 ದಿನದ ಬಳಿಕ ಮತ್ತೆ ಬಿಸಿಲು ಬಂದಾಗ ಬದುಕಿಕೊಳ್ತೀನಿ, ಇನ್ನಷ್ಟು ಸಂಶೋಧನೆ ನಡೆಸ್ತೀನಿ.
ನಾನು ಸಾಯ್ತೀನಿ ಅಂತಾ ಬೇಜಾರು ಮಾಡ್ಕೋಬೇಡಿ. ಸಾಯೋ ಮೊದಲು ನನ್ನ ಕೆಲಸಗಳನ್ನು ಮರೆಯದೇ ಮಾಡ್ತೀನಿ. ಆದ್ರೂ ನನಗಾಗಿ ನಿಮ್ಮ ಪ್ರಾರ್ಥನೆ, ಹಾರೈಕೆಯಿಂದ ನನ್ನ ಹೃದಯ ತುಂಬಿ ಬಂದಿದೆ… ನನ್ನಂತ ಹಲವು ಅಧ್ಭುತಗಳನ್ನು ಸೃಷ್ಟಿಸುವ ಇಸ್ರೋ ಮೇಲೂ ನಿಮ್ಮ ಪ್ರೀತಿ, ನಂಬಿಕೆ ಹೀಗೆ ಇರಲಿ…
ಧನ್ಯವಾದಗಳು ಭಾರತಮಾತೆ.