ಬೆಂಗಳೂರಿನಲ್ಲಿ ಪತ್ರಿಕಾ ಪಿತಾಮಹಾ ಹರ್ಮನ್ ಮೋಗ್ಲಿಂಗ್ ಪ್ರತಿಮೆ ನಿರ್ಮಾಣಕ್ಕೆ ಮನವಿ

ಮಂಗಳೂರು : ಗ್ರಾಮೀಣ ಪ್ರತಕರ್ತರಿಗೆ ಉಚಿತ ಬಸ್ ಪಾಸ್  ಒದಗಿಸುವುದು ಹಾಗೂ ಕನ್ನಡ ಪತ್ರಿಕಾ ಲೋಕದ ಪಿತಾಮಹ ಡಾ.ಹೆರ್ಮನ್ ಮೊಗ್ಲಿಂಗ್ ಅವರ ಹೆಸರಿನಲ್ಲಿ  ಬೆಂಗಳೂರಿನಲ್ಲಿ ರಸ್ತೆಗೆ ನಾಮಕರಣ ಹಾಗೂ ಪ್ರತಿಮೆ ನಿರ್ಮಿಸುವಂತೆ ಆಗ್ರಹಿಸಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿಯು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್  ನೇತೃತ್ವದಲ್ಲಿ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಪ್ರಧಾನ ಕಾರ್ಯದರ್ಶಿ ಕೆನ್ಯೂಟ್ ಪಿಂಟೊ, ಕೋಶಾಧಿಕಾರಿ ಗಿರಿಧರ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯ ರಮೇಶ್ ಪೆರ್ಲ ಉಪಸ್ಥಿತರಿದ್ದರು.

ಮನವಿಯ ವಿವರ:

  ಕನ್ನಡ ಪತ್ರಿಕೋದ್ಯಮದ ಪಿತಾಮಹ ಮಂಗಳೂರ ಸಮಾಚಾರ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಡಾ.ಹೆರ್ಮನ್ ಮ್ಯೋಗ್ಲಿಂಗ್ ಅವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ರಸ್ತೆಯೊಂದಕ್ಕೆ ಹೆಸರು ನಾಮಕರಣ ಮಾಡುವುದು ಹಾಗೂ ಮ್ಯೋಗ್ಲಿಂಗ್ ಅವರ ಪ್ರತಿಮೆ ಸ್ಥಾಪನೆ ಮಾಡುವಲ್ಲಿ ತಾವು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತೇವೆ. 

ಹರ್ಮನ್ ಮ್ಯೋಗ್ಲಿಂಗ್ ಅವರ ಜೊತೆಗಾರ ಕನ್ನಡ ಶಬ್ದಕೋಶ ರಚಿಸಿದ ರೆವರೆಂಡ್ ಕಿಟೆಲ್ ಅವರ ಹೆಸರು ರಸ್ತೆಗೆ ನಾಮಕರಣ ಮಾಡಿ ಅವರ  ಪ್ರತಿಮೆ ನಿರ್ಮಾಣ ಈ ಹಿಂದೆಯೇ  ಬೆಂಗಳೂರಿನಲ್ಲಿ ನಡೆದಿರುತ್ತದೆ. ಆದರೆ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ ಪತ್ರಿಕೆ ಆರಂಭಿಸಿ ಆ ಮೂಲಕ ಕನ್ನಡ ಪತ್ರಿಕೋದ್ಯಮದ ಶಕೆಯನ್ನು ಆರಂಭಿಸಿದ ಮ್ಯೋಗ್ಲಿಂಗ್ ಅವರ ಪ್ರತಿಮೆಯಾಗಲಿ, ಅವರ ಹೆಸರಿನಲ್ಲಿ ರಸ್ತೆಯಾಗಲಿ, ವೃತ್ತಗಳಾಗಲಿ ಕರ್ನಾಟಕದಲ್ಲಿ ಎಲ್ಲಿಯೂ ಇರುವುದಿಲ್ಲ, ಈ ಹಿನ್ನೆಲೆಯಲ್ಲಿ ತಾವು ವಿಶೇಷ ಕಾಳಜಿ ವಹಿಸಿ ಕ್ರಮ ಜರಗಿಸುವಂತೆ ಈ ಮೂಲಕ ಮನವಿ ಮಾಡುತ್ತೀದ್ದೇವೆ.

ಮಾನ್ಯ ಡಾ. ಹರ್ಮನ್ ಮ್ಯೋಗ್ಲಿಂಗ್ ಅವರು ಕೇವಲ ಪತ್ರಿಕಾ ಸಂಪಾದಕರಷ್ಟೇ ಆಗಿ ಕಾರ್ಯ ಸೀಮಿತಗೊಳಿಸಿದವರಲ್ಲ. ಕನ್ನಡ ಸಾಹಿತ್ಯ ಲೋಕಕ್ಕೆ ಅನುಪಮ ಸೇವೆ ಸಲ್ಲಿಸಿದವರು ಮ್ಯೋಗ್ಲಿಂಗ್ .

ಮಂಗಳೂರು ಪಂಚಾಂಗ, ಸಾವಿರ ಐನೂರು ಗಾದೆಗಳು, ಕನ್ನಡ ಗಾದೆಗಳು, ಚೆನ್ನ ಬಸವ ಪುರಾಣ , ಜೈಮಿನಿ ಭಾರತ, ತೊರವೆ ರಾಮಾಯಣ, ಕುಮಾರವ್ಯಾಸ ಭಾರತ, ಕನಕದಾಸರ ಭಕ್ತಿಸಾರ, ದಾಸರ ಪದಗಳು , ಬಸವ ಪುರಾಣ , ರಾಜೇಂದ್ರ ನಾಮೆ ಮೊದಲಾದ‌ ಗ್ರಂಥಗಳ ಸಂಪಾದಕರಾಗಿ ಕನ್ನಡ ಸಾರಸ್ವತ ಲೋಕಕ್ಕೆ ಚಾರಿತ್ರಿಕ ಕೊಡುಗೆಯನ್ನು ನೀಡಿದವರು ಮ್ಯೋಗ್ಲಿಂಗ್ , ಇವರ ಈ ಸಾಧನೆಯನ್ನು ಗುರುತಿಸಿ 1858 ರಲ್ಲಿ ಜರ್ಮನಿಯ ಟ್ಯೂಬಿಂಗೆನ್ ವಿಶ್ವವಿದ್ಯಾನಿಲಯ ಮೊಗ್ಲಿಂಗ್ ಅವರಿಗೆ ಗೌರವ ಡಾಕ್ಟರೇಟ್ ಪದವಿ‌ ನೀಡಿ ಗೌರವಿಸಿತ್ತು. ಇಂತಹ ಮಹಾನುಭಾವನ ಹೆಸರಿನಲ್ಲಿ ಕರ್ನಾಟಕದಲ್ಲಿ ಯಾವುದೇ ನೆನಪಿನ ಸ್ಮಾರಕಗಳು , ಹೆಸರುಗಳು ಇಲ್ಲದೇ ಇರುವುದು ವಿಷಾದದ ಸಂಗತಿ.

 

ತಾವುಗಳು ಈ ನಿಟ್ಟಿನಲ್ಲಿ ಕಾಳಜಿ ವಹಿಸಿ ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ ಹಾಗೂ ಹರ್ಮನ್ ಮ್ಯೋಗ್ಲಿಂಗ್ ಅವರ ಹೆಸರನ್ನು ಕನ್ನಡದ ಜನತೆ ಸದಾ ಸ್ಮರಣೆ ಮಾಡುವಂತಾಗಲೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ  ” ಮಂಗಳೂರ ಸಮಾಚಾರ- ಹೆರ್ಮನ್ ಮ್ಯೋಗ್ಲಿಂಗ್ ” ರಸ್ತೆ ನಾಮಕರಣ ಹಾಗೂ ಪ್ರತಿಮೆ ಸ್ಥಾಪನೆ ಮಾಡಬೇಕೆಂದು ಪತ್ರಕರ್ತರಾದ ನಾವು ಒತ್ತಾಯಿಸುತ್ತಿದ್ದೇವೆ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.

Facebook
Twitter
LinkedIn
WhatsApp
Telegram
Email

Leave a Comment

Your email address will not be published. Required fields are marked *

Translate »
Scroll to Top