ಬಳ್ಳಾರಿ: ಜಿಲ್ಲೆಯ ಮೆಣಸಿನಕಾಯಿ ಬೆಳೆಯುವ ರೈತರಿಗೆ ಸಿಹಿಸುದ್ದಿ. ಬಳ್ಳಾರಿ ಹೊರವಲಯದ ಆಲದಹಳ್ಳಿಯಲ್ಲಿ ಒಣಮೆಣಸಿನ ಕಾಯಿ ಮಾರುಕಟ್ಟೆಗೆಂದು ಮೀಸಲಟ್ಟಿರುವ ಜಾಗದಲ್ಲಿ ಶೀತಗೃಹ ನಿರ್ಮಿಸಲು ಕೃಷಿ ಮಾರುಕಟ್ಟೆ ಇಲಾಖೆ ಮುಂದಾಗಿದೆ.
ಒಟ್ಟು 3000 ಮೆಟ್ರಿಕ್ ಟನ್ ಸಾಮರ್ಥ್ಯದ ಈ ಶೀತಲಗೃಹವು ಒಣಮೆಣಸಿನ ಕಾಯಿ ಮಾರುಕಟ್ಟೆಗೆ ಮುನ್ನುಡಿ ಎಂದು ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟಡ ಸಮಿತಿಯ ಕಾರ್ಯದರ್ಶಿ ನಂಜುAಡಸ್ವಾಮಿ ತಿಳಿಸಿದ್ದಾರೆ.
ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಒಂದು ವರ್ಷದ ಒಳಗಾಗಿ ಶೀತಲಗೃಹ ಬಳಕೆಗೆ ಸಿಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಖಾಸಗಿಯವರ 30-35 ಶೀತಲಗೃಹಗಳಿವೆ. ಆದರೂ, ಕಡಿಮೆ ಬಾಡಿಗೆ, ಹೆಚ್ಚಿನ ದಾಸ್ತಾನು ಶೇಖರಣೆಗೆ ಸರ್ಕಾರದ ಶೀತಲಗೃಹ ಅತ್ಯಗತ್ಯವಾಗಿದೆ. ಆಲದಹಳ್ಳಿಯಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ನಿರ್ಮಿಸಬೇಕು ಎಂಬುದು ಇಲಾಖೆಯ ಉದ್ದೇಶ. ಮೊದಲ ಹಂತವಾಗಿ ಶೀತಲಗೃಹ ನಿರ್ಮಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಒಟ್ಟು 11.75 ಕೋಟಿ ವೆಚ್ಚದಲ್ಲಿ ಶೀತಲಗೃಹ ನಿರ್ಮಾಣ ಮಾಡಲಾಗುತ್ತಿದ್ದು, ನಬಾರ್ಡ್ನಿಂದ 11.16 ಸಾಲ ಸೌಲಭ್ಯ ಸಿಗಲಿದೆ.
ಜಿಲ್ಲೆಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ಮಾಡಬೇಕು ಎಂಬುದು ಈ ಭಾಗದ ರೈತರ ಬಹುವರ್ಷಗಳ ಬೇಡಿಕೆಯಾಗಿದೆ. ಹೀಗಾಗಿ ಕೋಲ್ಡ್ ಸ್ಟೋರೇಜ್ ಜತೆಗೆ ಮೆಣಸಿನಕಾಯಿ ಮಾರುಕಟ್ಟೆಯನ್ನೂ ನಿರ್ಮಾಣ ಮಾಡಬೇಕೆಂದು ರೈತರ ಒತ್ತಾಯವಾಗಿದೆ.
ಬಳ್ಳಾರಿ ಹೊರವಲಯದಲ್ಲಿ ಶೀಘ್ರ ಒಣಮೆಣಸಿನಕಾಯಿ ಶೀತಲ ಗೃಹ
