ಸಿಂಧನೂರು: ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರ ನಡುವೆ, ಸಿಂಧನೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ (ಎಮ್‌ಸಿಹೆಚ್) ವೈದ್ಯರು ಮತ್ತು ಸಿಬ್ಬಂದಿ ವರ್ಗವು ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಿದ್ದಾರೆ. ಅತ್ಯಂತ ಸಂಕೀರ್ಣವಾದ ವೈದ್ಯಕೀಯ ಸ್ಥಿತಿಯಲ್ಲಿದ್ದ ಗರ್ಭಿಣಿಯೊಬ್ಬರನ್ನು ಸಾವಿನ ದವಡೆಯಿಂದ ಮರಳಿ ತರುವ ಮೂಲಕ ಮಾನವೀಯತೆ ಮತ್ತು ವೃತ್ತಿಪರತೆಗೆ ಹೊಸ ಭಾಷ್ಯ ಬರೆದಿದ್ದಾರೆ.
ತುರ್ತು ಪರಿಸ್ಥಿತಿ ಮತ್ತು ವೈದ್ಯರ ಸವಾಲು:
ಸೃಷ್ಟಿ ಎಂಬ 34 ವಾರಗಳ ಗರ್ಭಿಣಿ ತೀವ್ರ ರಕ್ತದೊತ್ತಡದೊಂದಿಗೆ (210/120 ಎಮ್‌ಎಮ್ ಹೆಚ್‌ಜಿ) ಆಸ್ಪತ್ರೆಗೆ ದಾಖಲಾದಾಗ, ಅವರ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರಿಗೆ ಶ್ವಾಸಕೋಶದಲ್ಲಿ ನೀರು ತುಂಬಿಕೊAಡು ಆಮ್ಲಜನಕದ ಮಟ್ಟ ಕೇವಲ 40% ಕ್ಕೆ ಕುಸಿದಿತ್ತು. ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ನಿಯರ್ ಮಿಸ್’ ಕೇಸ್ ಎನ್ನಲಾಗುತ್ತದೆ. ರೋಗಿಯನ್ನು ಉನ್ನತ ಚಿಕಿತ್ಸೆಗಾಗಿ ರಾಯಚೂರಿಗೆ ಕಳುಹಿಸಲು ಸಮಯವೇ ಇರಲಿಲ್ಲ; ಪ್ರತಿ ಸೆಕೆಂಡ್ ಕೂಡ ಪ್ರಾಣಾಪಾಯವನ್ನು ಹೊತ್ತು ತಂದಿತ್ತು.
ಸಾAಘಿಕ ಹೋರಾಟದ ಪರಾಕಾಷ್ಠೆ
ಇಂತಹ ಸಂದರ್ಭದಲ್ಲಿ ಎದೆಗುಂದದ ತಾಯಿ ಮಕ್ಕಳ ಆಸ್ಪತ್ರೆಯ ತಂಡ, ತಕ್ಷಣವೇ ಕಾರ್ಯಪ್ರವೃತ್ತವಾಯಿತು. ತುರ್ತಾಗಿ ಖಾಸಗಿ ಆಸ್ಪತ್ರೆಯಿಂದ ವೆಂಟಿಲೇಟರ್ ವ್ಯವಸ್ಥೆ ಮಾಡಲಾಯಿತು. ಒಂದು ಕಡೆ ರೋಗಿಯ ಸ್ಥಿತಿ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದ್ದರೆ, ಮತ್ತೊಂದೆಡೆ ವೈದ್ಯರ ತಂಡವು ಜೀವ ಉಳಿಸುವ ಪಣ ತೊಟ್ಟಿತು. “ಆನ್ ಟೇಬಲ್ ಡೆತ್” ಸಂಭವಿಸುವ ಅಪಾಯವಿದ್ದರೂ, ರೋಗಿಯ ಪೋಷಕರು ವೈದ್ಯರ ಮೇಲೆ ನಂಬಿಕೆಯಿಟ್ಟು ಶಸ್ತ್ರಚಿಕಿತ್ಸೆಗೆ ಒಪ್ಪಿಗೆ ನೀಡಿದರು.
ವೈದ್ಯರಾದ ಡಾ ಶಕುಂತಲಾ ಪಾಟೀಲ್, ಡಾ ಕಾವೇರಿ ಶಾವಿ, ಡಾ ವಿದ್ಯಾ, ಡಾ ಶೋಭಾ, ಡಾ ಫರ್ಹತ್ ಮತ್ತು ಡಾ ಹನುಮಂತ ರೆಡ್ಡಿ ರವರ ನೇತೃತ್ವದ ತಂಡವು ಯಶಸ್ವಿಯಾಗಿ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಜೀವಂತ ಮಗುವನ್ನು ಹೊರತೆಗೆದರು. ಶಸ್ತ್ರಚಿಕಿತ್ಸೆಯ ನಂತರ ತಾಯಿಯನ್ನು ಹೆಚ್ಚಿನ ನಿಗಾಕ್ಕಾಗಿ ವೆಂಟಿಲೇಟರ್‌ಗೆ ಸ್ಥಳಾಂತರಿಸಲಾಯಿತು.
ಫಲಿಸಿದ ಶ್ರಮ:
ಚೇತರಿಸಿಕೊಂಡ ತಾಯಿ-ಮಗು
ವೈದ್ಯಕೀಯ ತಂಡದ ಸತತ ಪರಿಶ್ರಮದ ಫಲವಾಗಿ ಶ್ರೀಮತಿ ಸೃಷ್ಟಿ ಅವರು ಇದೀಗ ವೆಂಟಿಲೇಟರ್‌ನಿAದ ಹೊರಬಂದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಮಗು ಕೂಡ ಎನ್‌ಐಸಿಯುನಲ್ಲಿ ಸುರಕ್ಷಿತವಾಗಿದ್ದು, ಒಂದು ದೊಡ್ಡ ದುರಂತವು ಪವಾಡ ಸದೃಶವಾಗಿ ಸುಖಾಂತ್ಯ ಕಂಡಿದೆ.
ಈ ಯಶಸ್ಸಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳು ಡಾ ಸುರೇಂದ್ರ ಬಾಬು, ಮತ್ತು ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ ನಂದಿತಾ ಎಮ್ ಎನ್, ಅವರ ಬೆಂಬಲ ಹಾಗೂ ಪ್ರೇರಣೆ ಬಹುದೊಡ್ಡ ಶಕ್ತಿಯಾಗಿತ್ತು.
ವ್ಯವಸ್ಥೆಯ ನಡುವೆ ಮಿಂಚಿದ ಸೇವೆಯು, ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ವೈದ್ಯಕೀಯ ತಂಡ, ಸುಸಜ್ಜಿತ ಕಟ್ಟಡ, ಗುಣಮಟ್ಟದ ಅತ್ಯಾಧುನಿಕ ಸಲಕರಣೆಗಳು, ರಾಷ್ಟ್ರೀಯ ಗುಣಮಟ್ಟ ಮಾನದಂಡಿಯ ಹೆರಿಗೆ ಕೊಠಡಿ, ವಾರ್ಡ್, ಬೇಬಿ ವಾರ್ಮರ್, ಬಾಣಂತಿಗೆ ಪೌಷ್ಟಿಕ ಆಹಾರ, ಸೂಕ್ತ ಆರೈಕೆ, ಔಷಧಿ ವಿತರಣೆ, ಮನೆಗೆ ಬಿಡಲು ನಗುಮಗು ವಾಹನ ಲಭ್ಯತೆ ಇರುವುದನ್ನು ಖಾತರಿಪಡಿಸಿವೆ.
ಕೆಲವು ಅನಗತ್ಯ ಸಾಮಾಜಿಕ ಒತ್ತಡಗಳ ನಡುವೆಯೂ ಈ ಸಾಧನೆ ಮಾಡಲಾಗಿದೆ ಎಂಬುದು ಗಮನಾರ್ಹ. “ವೈದ್ಯರಿಗೆ ಒತ್ತಡರಹಿತ ವಾತಾವರಣ ಮತ್ತು ಸಾರ್ವಜನಿಕರ ವಿಶ್ವಾಸ ಸಿಕ್ಕರೆ ಇಂತಹ ಪವಾಡಗಳನ್ನು ಮಾಡಲು ಸಾಧ್ಯ” ಎಂದು ಈ ಘಟನೆ ಸಾಬೀತುಪಡಿಸಿದೆ.ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ ಈ ‘ವೈಟ್ ಕೋಟ್’ ಯೋಧರಿಗೆ ಮತ್ತು ಅವರಿಗೆ ಸಾಥ್ ನೀಡಿದ ಶುಶ್ರೂಷಣಾ ಅಧಿಕಾರಿಗಳಾದ ಶಾರದಾ, ಜಯಂತಿ, ಪುಷ್ಪರಾಣಿ, ಗೌತಮಿ, ಚೈತ್ರಾ ಹಾಗೂ ಇತರ ಸಿಬ್ಬಂದಿ ವರ್ಗದ ಶ್ರಮವು ಇದರ ಹಿಂದೆ ಇದೆ ಎಂದರೆ ತಪ್ಪಾಗಲಾರದು.
ಸಾವಿನ ದವಡೆಯಲ್ಲಿದ್ದ ತಾಯಿ- ಮಗುವಿಗೆ ಮರುಜನ್ಮ !
ಸಿಂಧನೂರು-ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಎಮ್‌ಸಿಹೆಚ್) ವೈದ್ಯರ ಸಾಹಸ



