ಮಾಧ್ಯಮ ವಕ್ತಾರರದು ಕಠಿಣ ಸವಾಲುಗಳಿರುವ ಶ್ರೇಷ್ಠ ಹುದ್ದೆ

ಬೆಂಗಳೂರು,15 : ಮಾಧ್ಯಮ ವಕ್ತಾರರದು ಕಠಿಣ ಸವಾಲುಗಳಿರುವ ಶ್ರೇಷ್ಠ ಹುದ್ದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದರು. ನಗರದ ಮಲ್ಲೇಶ್ವರದ ಪಕ್ಷದ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ರಾಜ್ಯ-ಜಿಲ್ಲಾ ವಕ್ತಾರರ ಸಭೆ “ಮಾಧ್ಯಮ ಮಂಥನ”ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ವಕ್ತಾರರು ಪಕ್ಷದ ಮುಖವಾಣಿ. ತತ್ವ, ಸಿದ್ಧಾಂತ ತಿಳಿಸುವ ಮಹತ್ವದ ಹೊಣೆ ಅವರ ಮೇಲಿದೆ. ವಕ್ತಾರರ ನುಡಿ ಪಕ್ಷದ ವಿಚಾರವಾಗುತ್ತದೆ. ಜನ ಗಮನಿಸುವ ಹುದ್ದೆ ಇದು ಎಂದು ಅವರು ವಿಶ್ಲೇಷಿಸಿದರು. ಮಾಧ್ಯಮ ಮೂಲಕ ಉನ್ನತ ಹುದ್ದೆಗೇರಿದವರು ಸಿ.ಟಿ.ರವಿ ಅವರು ಎಂದು ನೆನಪಿಸಿದ ಅವರು, ಅಧ್ಯಯನ ಪ್ರವೃತ್ತಿ ನಮಗಿದ್ದರೆ ನಾಯಕನಾಗಲು ಸಾಧ್ಯ. ಕೇವಲ ಟಿವಿಯಲ್ಲಿ ಕಾಣಬೇಕೆಂಬ ಆಶಯದ ಬದಲು ವಿಷಯ ಮಂಡನೆಗೆ ಆದ್ಯತೆ ಅಗತ್ಯ ಎಂದು ಕಿವಿಮಾತು ಹೇಳಿದರು. ಅಧ್ಯಯನ- ಪ್ರಕಟೀಕರಣ- ನಾಯಕರ ಸಂಪರ್ಕದ ಮೂಲಕ ಬೆಳೆಯಬೇಕು ಎಂದು ತಿಳಿಸಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿ ಅವರು ಮಾತನಾಡಿ, ಸಾಫ್ಟ್‍ವೇರ್ ಅಪ್ ಡೇಟ್ ಮಾಡುವ ಕಾರ್ಯ ನಿರಂತರವಾಗಿರಲಿ. ಅಪ್ ಡೇಟ್ ಜೊತೆ ಕಮಿಟ್ ಮೆಂಟ್ (ಬದ್ಧತೆ) ಅತ್ಯಗತ್ಯ. ಭಕ್ತಿ ಇಲ್ಲದ ಶಕ್ತಿ ಅಪಾಯಕಾರಿ. ಶಕ್ತಿ ಇಲ್ಲದ ಭಕ್ತಿ ನಿರುಪಯೋಗಿ. ಇದು ಗಮನದಲ್ಲಿರಲಿ ಎಂದರು.


ಟಿವಿ ಮುಂದೆ ನಿಂತಾಗ ಹೇಳಬೇಕಾದ ವಿಚಾರ, ಶೈಲಿ, ಕಡಿಮೆ ಶಬ್ದದಲ್ಲಿ ಹೇಳಿದರೆ ಅದು ಪರಿಣಾಮ ಬೀರುತ್ತದೆ. ಮಾತಿನ ಪರಿಣಾಮದ ಅರಿವಿರಲಿ. ಪ್ರತಿ ಸುದ್ದಿಗೆ ನಿಗದಿತ ಆಯುಸ್ಸಿದೆ. ಸಕಾಲದಲ್ಲಿ ಪ್ರತಿಕ್ರಿಯೆ ಕೊಡಿ ಎಂದು ತಿಳಿಸಿದರು. ಪ್ರತಿಕ್ರಿಯೆ ಕೊಡುವಾಗ ಏನು, ಹೇಗೆ, ಎಷ್ಟು, ಯಾವಾಗ ಮತ್ತು ಯಾರು ಎಂಬ ವಿವೇಚನೆ ಅನಿವಾರ್ಯ ಎಂದು ತಿಳಿಸಿದರು. ಜ್ಞಾನ ಗಳಿಸಲು ವಿಷಯ ಅಧ್ಯಯನ ಅನಿವಾರ್ಯ. ಸಂವಿಧಾನದ ಸಾಮಾನ್ಯ ಜ್ಞಾನವೂ ಅತ್ಯಗತ್ಯ. ಡಾ. ಅಂಬೇಡ್ಕರ್ ಅವರ ಚಿಂತನೆ ಇಂದಿಗೂ ಪ್ರಸ್ತುತ ಎಂದು ಅಭಿಪ್ರಾಯಪಟ್ಟರು ಮಾಧ್ಯಮ ಈಗ ಉದ್ಯಮವಾಗಿದೆ. ವಕ್ತಾರನಾದವನು ಕನಿಷ್ಠ ಒಂದು ಪತ್ರಿಕೆಯನ್ನು ಸಮಗ್ರವಾಗಿ ಓದಬೇಕು. ವಾಟ್ಸಪ್, ಫೇಸ್‍ಬುಕ್ ನಂಥ ಸಾಮಾಜಿಕ ಜಾಲತಾಣದ ಒಳಗೆ ಮುಳುಗಿ ಹೋಗದಿರಿ. ವಾಜಪೇಯಿ ಮತ್ತಿತರ ನಾಯಕರ ಭಾಷಣ ಕೇಳಿ ಎಂದರಲ್ಲದೆ, ವಕ್ತಾರನಾದವನು ಕೂಪ ಮಂಡೂಕ ಆಗಬಾರದು ಎಂದು ತಿಳಿಸಿದರು. ಯಾವುದೇ ವಿಚಾರಕ್ಕೂ ಮಸಾಲೆ ಸೇರಿಸಿ ಹೇಳುವ ಪ್ರವೃತ್ತಿ ಸಲ್ಲದು. ಬಳಕೆ ಬಗ್ಗೆ ಎಚ್ಚರ ಇರಬೇಕು. ಸೌಜನ್ಯ ಇರಲಿ ಎಂದು ಕಿವಿಮಾತು ಹೇಳಿದರು.


ಪಕ್ಷದ ಬೆಳವಣಿಗೆಗೆ ಪೂರಕವಾಗಿ ಮಾತನಾಡಿ. ಅನಗತ್ಯವಾಗಿ ಕಿರುಚದಿರಿ. ಶಾಂತವಾಗಿ ದೃಢವಾಗಿ ವಿಷಯ ಮಂಡಿಸಿ. ವೈಯಕ್ತಿಕ ಟೀಕೆ ಬೇಡ ಎಂದು ಟಿವಿ ಡಿಬೇಟ್‍ಗೆ ತೆರಳುವವರಿಗೆ ಮಾರ್ಗದರ್ಶನ ನೀಡಿದರು. ಕೆಲವು ಸಂದರ್ಭದಲ್ಲಿ ಮೌನವೇ ಉತ್ತರ ಆಗುತ್ತದೆ. ಇದರ ಅರಿವಿರಲಿ. ವಿಷಯ ತಜ್ಞರ ಜೊತೆ ಚರ್ಚೆ ಮಾಡಿ ನಿರ್ಧಾರಕ್ಕೆ ಬನ್ನಿ ಎಂದರು. ನೈಜ ಸಮಾಜವಾದ ಈಗ ಇಲ್ಲ. ಮಜಾವಾದ- ಕೌಟುಂಬಿಕ ಪರಂಪರೆ ಮುಂದುವರಿದಿದೆ. ಸಮಾನ ನಾಗರಿಕ ಸಂಹಿತೆ ಮುಂದಿನ ದಿನಗಳಲ್ಲಿ ಚರ್ಚೆಗೆ ಬರಬಹುದು. ಅಹಿಂದ ಎಂದರೆ ಜಾತ್ಯತೀತತೆ ಜೈ ಹಿಂದ್ ಎಂದರೆ ಅದು ಕೋಮುವಾದ ಎಂಬ ಸ್ತಿತಿ ಇದೆ. ಇದಕ್ಕೆ ಉತ್ತರಿಸಲು ಅಧ್ಯಯನ ಅತ್ಯಗತ್ಯ ಎಂದು ತಿಳಿಸಿದರು. ನಾವು ಕೇವಲ ಮುಖವಲ್ಲ. ಪಕ್ಷದ ಧ್ವನಿಯೂ ಆಗಿರಬೇಕು ಎಂದರು. ಪಕ್ಷದ ರಾಜ್ಯ ಮುಖ್ಯ ವಕ್ತಾರರಾದ ಎಂ.ಜಿ.ಮಹೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಕ್ತಾರರ ಕಾರ್ಯ ಇಂದು ಸವಾಲಾಗಿದೆ. ಮಾಧ್ಯಮದೊಳಗೆ ಪ್ರತಿನಿತ್ಯ ಸವಾಲು ಎದುರಿಸುವ ಸ್ಥಿತಿ ಇದೆ. ರಾತ್ರಿ ಬೆಳಗಾಗುವುದರ ಒಳಗೆ ಹೊಸ ನಾಯಕರ ಉದಯವಾಗುತ್ತಿದ್ದಾರೆ. 2023ರಲ್ಲಿ ಚುನಾವಣೆ ವರ್ಷವಾಗಿದ್ದು ಹೆಚ್ಚಿನ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು. ಪಕ್ಷದ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣಾ, ರಾಜ್ಯ ವಕ್ತಾರರು ಮತ್ತು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top