ಪ್ರಕರಣದ ಗಮನ ಬೇರೆಡೆ ಸೆಳೆಯಲು ಶಿವಮೊಗ್ಗ ಪ್ರಭಾವಿಗಳಿಂದ ಕೋಮು ಗಲಭೆ

ಬೆಂಗಳೂರು : ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಪ್ರಕರಣದ ಗಮನ ಬೇರೆಡೆ ಸೆಳೆಯಲು ಶಿವಮೊಗ್ಗದಲ್ಲಿ ಮುಸ್ಲಿಂ ಯುವಕನ ಹತ್ಯೆ ಮೂಲಕ ಕೋಮು ಗಲಭೆಗೆ ಸಂಚು ರೂಪಿಸಲಾಗಿದ್ದು, ಇದರ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ. ಶಿವಮೊಗ್ಗದಲ್ಲಿ ಒಂದು ಟ್ರಸ್ಟ್ ಇದ್ದು, ಅದರಲ್ಲಿ ದೊಡ್ಡವರು ಸದಸ್ಯರಾಗಿದ್ದಾರೆ. ಆ ಟ್ರಸ್ಟ್ ಸದಸ್ಯರು ಹಾಗೂ ಬೆರೆಯವರೆಲ್ಲ ಸೇರಿ, ಕೊಲೆ ಸಂಚಿಗೆ ತಯಾರಿ ಮಾಡಿದ್ದಾರೆ. ಶಿವಮೊಗ್ಗ ಪೊಲೀಸರು ಬುದ್ಧಿವಂತಿಕೆ ಪ್ರದರ್ಶಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಈ ಕ್ರಮ ತೆಗೆದುಕೊಳ್ಳದಿದ್ದರೆ ರಾಜ್ಯದಲ್ಲಿ ಕೋಮು ಗಲಭೆ ನಡೆಯುವ ಸಂಭಾವವಿತ್ತು. ಈ ಪ್ರಕರಣದ ಎಫ್ ಐಆರ್ ನನ್ನ ಬಳಿ ಇದೆ. ಟ್ರಸ್ಟ್ ಸದಸ್ಯನೂ ಆಗಿರುವ ಪ್ರಮುಖ ಆರೋಪಿಯೊಬ್ಬ ತಲೆಮರೆಸಿಕೊಂಡಿದ್ದಾನೆ.

ನಮ್ಮ ತಂಡದ ಶಿವಮೊಗ್ಗ ಪ್ರತಿಭಟನೆ ಯೋಜನೆ ಮುಂದಕ್ಕೆ ಹಾಕಿದ್ದು, ನಾನು ಕೂಡ ಅಲ್ಲಿಗೆ ಹೋಗಬೇಕು ಎಂದು ಅಲ್ಲಿಂದ ಒತ್ತಡ ಬರುತ್ತಿದೆ. ಪೊಲೀಸ್ ಇಲಾಖೆ ಜವಾಬ್ದಾರಿಯಾಗಿ ಕಾರ್ಯನಿರ್ವಹಿಸಿದ್ದು, ಆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಪ್ರಕರಣದ ತನಿಖೆ ಆದರೆ, ಆ ಟ್ರಸ್ಟ್ ಯಾವುದು, ಅದರಲ್ಲಿ ಯಾರೆಲ್ಲಾ ಪ್ರಭಾವಿಗಳು ಇದ್ದಾರೆ, ಕೊಲೆ ಸಂಚಿನಲ್ಲಿ ಅವರ ಪಾತ್ರ ಏನಿದೆ ಎಂಬುದು ಬಹಿರಂಗವಾಗಲಿದೆ. ಯಾರು ಬೇಕಾದರೂ ಕೈ ತೋರಿಸಲಿ ಸಂತೋಷ್ ಪಾಟೀಲ್ ಪ್ರಕರಣದಲ್ಲೂ ನಿಮ್ಮ ಕಡೆ ಕೈ ತೋರಿಸುವ ಪ್ರಯತ್ನವಾಗುತ್ತಿದೆ ಎಂಬ ಪ್ರಶ್ನೆಗೆ, ‘ಅವರು ತೋರಿಸಲಿ, ಯಾರು ಬೇಡ ಎಂದರು. ನಾನು ಯಾವುದೇ ಕೆಲಸಕ್ಕೂ ಡಬಲ್ ಬಿಲ್ ಹಾಕಿ ಕೆಲಸ ಮಾಡಿಲ್ಲ. ಸಮಯ ಬಂದಾಗ ನಾನು ಮಾತನಾಡುತ್ತೇನೆ’ ಎಂದು ಉತ್ತರಿಸಿದರು. ವೈಷಮ್ಯದಿಂದ ಸಣ್ಣ ಗುತ್ತಿಗೆದಾರರ ಟೆಂಡರ್ ರದ್ದು ಬಗ್ಗೆ ಕೇಳಿದ ಪ್ರಶ್ನೆಗೆ, ‘ಈಗ ನಾನು ಆ ಬಗ್ಗೆ ಮಾತನಾಡುವುದಿಲ್ಲ. ಕೆಂಪಣ್ಣನವರು ದೂರು ಕೊಟ್ಟ ನಂತರ ಗುತ್ತಿಗೆದಾರರನ್ನು ಮಟ್ಟ ಹಾಕಲು ಸಂಚು ನಡೆಯುತ್ತಿದೆ. ಎಲ್ಲ ಸಣ್ಣ ಗುತ್ತಿಗೆದಾರರು ಕೆಲಸ ಮಾಡಿಕೊಂಡು ಬದುಕಬೇಕು. ಹೀಗಾಗಿ ನಾನು ಜನರ ಅಭಿಪ್ರಾಯ ಪಡೆಯಲು ಪ್ರಯತ್ನಿಸುತ್ತಿದ್ದೇನೆ’ ಎಂದರು.

ನಾವು ಸಂತೋಷ್ ಪ್ರಕರಣದಲ್ಲಿ ತನಿಖೆ ಮಾಡುತ್ತಿದ್ದು, ಕಾಂಗ್ರೆಸ್ ಅವರು ಜಾರ್ಜ್ ಅವರನ್ನು ರಕ್ಷಿಸಲು ಪ್ರಯತ್ನ ಮಾಡಿದ್ದರು ಎಂಬ ಸಿಎಂ ಆರೋಪದ ಬಗ್ಗೆ ಪ್ರಶ್ನೆ ಕೇಳಿದಾಗ, ‘ಅವರು ಎಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ. ಅವರು ಕೂಡ ಅಪರಾಧದಲ್ಲಿ ಭಾಗಿಯಾಗಿದ್ದಾರೆ. ಅವರು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಲ್ಲ. ದೂರಿನಲ್ಲಿ 40% ಕಮಿಷನ್ ವಿಚಾರ ಪ್ರಸ್ತಾಪವಾಗಿದ್ದು, ಯಾವ ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಯುವ ಮುನ್ನವೇ ಮುಖ್ಯಮಂತ್ರಿಗಳು ಹಾಗೂ ಯಡಿಯೂರಪ್ಪನವರು ಅದು ಹೇಗೆ ಈಶ್ವರಪ್ಪ ಯಾವುದೇ ತಪ್ಪು ಮಾಡಿಲ್ಲ, ಅವರು 3 ತಿಂಗಳಲ್ಲಿ ನಿರ್ದೋಷಿಯಾಗಿ ಬರುತ್ತಾರೆ, ಮತ್ತೆ ಮಂತ್ರಿ ಆಗುತ್ತಾರೆ ಎಂದು ಹೇಳಲು ಸಾಧ್ಯ? ಅವರು ನ್ಯಾಯಾಧೀಶರೆ? ಇದರಿಂದ ಸರ್ಕಾರ ತನಿಖೆ ಮೇಲೆ ಪರಿಣಾಮ ಬೀರಿದಂತಾಗುವುದಿಲ್ಲವೇ? ಮುಖ್ಯಮಂತ್ರಿಗಳು ಕ್ಲೀನ್ ಚಿಟ್ ಕೊಟ್ಟರೆ ತನಿಕಾಧಿಕಾರಿಗಳು ಹೇಗೆ ತನಿಖೆ ಮಾಡುತ್ತಾರೆ? ಅವರೇ ಆರೋಪಿಗೆ ರಕ್ಷಣೆ ಕೊಟ್ಟಂತೆ ಆಗುತ್ತದೆ ಅಲ್ಲವೇ? ಲಂಚ ಪಡೆದಿರುವ ಕಳ್ಳ, ಕೊಲೆಗಡುಕನಿಗೆ ರಕ್ಷಣೆ ಕೊಡುವುದು ತಪ್ಪಲ್ಲವೇ? ಅವರನ್ನು ಪ್ರಜ್ಞಾವಂತ ಸಿಎಂ ಎಂದುಕೊಂಡಿದ್ದೆ. ಆದರೆ ಇವರು ನೈತಿಕ ಪೊಲೀಸ್ ಗಿರಿ ವಿಚಾರದಲ್ಲಿ ಕೊಟ್ಟ ಹೇಳಿಕೆಯೇ ರಾಜ್ಯದಲ್ಲಿ ಈ ಎಲ್ಲ ದುರಾಡಳಿತಕ್ಕೆ ಕಾರಣವಾಗಿದೆ’ ಎಂದರು. ಈಶ್ವರಪ್ಪನವರ ಬಂಧನ ಅಗತ್ಯವಿಲ್ಲ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಬಂಧಿಸುವುದು ನಂತರದ ವಿಚಾರ. ಆದರೆ ಮೊದಲು ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಅದರ ಬದಲು ಮುಖ್ಯಮಂತ್ರಿಗಳೇ ಜಡ್ಜ್ ಆಗಿ ಕ್ಲೀನ್ ಚಿಟ್ ನೀಡುತ್ತಿದ್ದಾರೆ. ನಾವು ಈ ನೆಲದ ಕಾನೂನು ರಕ್ಷಣೆಗೆ ಜನರ ಮುಂದೆ ಹೋಗುತ್ತೇವೆ. ನಮ್ಮ ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡಿ ತಿಳಿಸುತ್ತೇವೆ’ ಎಂದು ಉತ್ತರಿಸಿದರು.

ಕೇದಾರನಾಥ ಸ್ವಾಮಿಜಿಗಳಿಂದ ಆಶೀರ್ವಾದ: ಕೇದಾರನಾಥ ಜಗದ್ಗುರುಗಳು ಆಶೀರ್ವಾದ ಮಾಡಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ಜಗಕ್ಕೆ ಶಾಂತಿ ಎಂಬ ಉದ್ದೇಶದಿಂದ ಪಂಚಪೀಠ ಸ್ಥಾಪನೆಯಾಗಿದೆ. ನಾನು ಯಾವತ್ತು, ನಮ್ಮ ಪರಂಪರೆ, ಸಂಸ್ಕೃತಿ ಇತಿಹಾಸದ ಬಗ್ಗೆ ಗೌರವವನ್ನು ಇಟ್ಟುಕೊಂಡಿದ್ದೇನೆ. ಯಾವ ಧರ್ಮವೂ ಒಡೆಯಬಾರದು ಎಂಬುದು ನನ್ನ ನಂಬಿಕೆ. ನನಗೆ ಆಶೀರ್ವಾದ ಮಾಡಬೇಕು ಎಂದು ಕೇದಾರನಾಥ ಮಠದ ಸ್ವಾಮೀಜಿಗಳು ನಮ್ಮ ಮನೆಗೆ ಆಗಮಿಸಿದ್ದಾರೆ. ನಾನು ಅವರ ಪಾದ ಪೂಜೆ ಮಾಡಿದ್ದೇನೆ. ಈ ವರ್ಷ ಕೇದಾರನಾಥ ದೇವಾಲಯ ಆರಂಭವಾಗುವಾಗ ನಾನು ಕೂಡ ಆ ಸಂದರ್ಭದಲ್ಲಿ ಭಾಗಿಯಾಗಬೇಕು ಎಂದು ಸ್ವಾಮೀಜಿಗಳು ಆಹ್ವಾನ ಕೊಟ್ಟಿದ್ದಾರೆ. ಉಳಿದಂತೆ ಇತರೆ ವಿಚಾರಗಳನ್ನು ಮಾತನಾಡಿದ್ದು, ಅವುಗಳನ್ನು ಮಾಧ್ಯಮಗಳ ಮುಂದೆ ಹೇಳಲು ಸಾಧ್ಯವಿಲ್ಲ.

Leave a Comment

Your email address will not be published. Required fields are marked *

Translate »
Scroll to Top