ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳ ಇ-ಸ್ವತ್ತು ಮಂಜೂರಾತಿ ಪ್ರಕ್ರಿಯೆಯನ್ನು ಸರಳೀಕರಣ ಹಾಗೂ ಸಬಲೀಕರಣಗೊಳಿಸುವ ಸಲುವಾಗಿ ಕಂದಾಯ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವ ಸಲುವಾಗಿ ಕಾರ್ಯಪಡೆಯೊಂದನ್ನು ರಚಿಸುವದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇ-ಖಾತ ಸಂಬಂಧದಲ್ಲಿ ನಾಳೆ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿದರು.
ಗ್ರಾಮಠಾಣ ವ್ಯಾಪ್ತಿಯ ಹೊರ ಭಾಗದ ಬಹಳಷ್ಟು ಪ್ರದೇಶಗಳಲ್ಲಿ ಶಾಲೆಗಳು, ಉದ್ದಿಮೆಗಳು ಹಾಗೂ ವಸತಿ ಸಮುಚ್ಛಯಗಳು ನಿರ್ಮಾಣಗೊಂಡಿದ್ಗು, ಬಹುಪಾಲು ಆಸ್ತಿಗಳು ಗ್ರಾಮ ಪಂಚಾಯತಿ ತೆರಿಗೆ ವ್ಯಾಪ್ತಿಗೆ ಒಳಪಡದೆ ಇರುವುದರಿಂದ ಗ್ರಾಮ ಪಂಚಾಯತಿಗಳ ಸಂಪನ್ಮೂಲ ಕ್ರೋಢೀಕರಣದಲ್ಲಿ ಹಿನ್ನಡೆ ಉಂಟಾಗಿದೆ ಎಂದು ಸಚಿವರು ಹೇಳಿದರು. ಗ್ರಾಮ ಪಂಚಾಯತಿಗಳನ್ನು ಆರ್ಥಿಕವಾಗಿ ಸದೃಢಗೊಳಿಸುವಲ್ಲಿ ಸಬಲೀಕರಣ ಹಾಗೂ ನಾಗರಿಕರಿಗೆ ಇ-ಸ್ವತ್ತು ದಾಖಲೆ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವ ಅನಿವಾರ್ಯತೆ ಇರುವುದರಿಂದ ಸಮಸ್ಯೆಗಳನ್ನು ಬಗಹರಿಸಿ ಪರಿಹಾರಗಳನ್ನು ಕಂಡುಕೊಳ್ಳಲು ಕಾರ್ಯಪಡೆಯನ್ನು ರಚಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಗ್ರಾಮಗಳಿಗೆ ಹೊಂದಿಕೊಂಡಂತೆ ಕಂದಾಯ ಭೂಮಿಯಲ್ಲಿ ಬಡಾವಣೆಗಳು ನಿರ್ಮಾಣಗೊಂಡಿದ್ದು, ಇಂತಹ ಬಡಾವಣೆಗಳಲ್ಲಿನ ನಿವಾಸಿಗಳು ಇ-ಸ್ವತ್ತು ದಾಖಲೆಯನ್ನು ಸುಗಮವಾಗಿ ಪಡೆದುಕೊಳ್ಳುವಲ್ಲಿ ಪರಿಹಾರಗಳನ್ನು ಕಾರ್ಯಪಡೆ ಸೂಚಿಸಲಿದೆ ಎಂದೂ ಸಚಿವರು ಹೇಳಿದರು.
ಸಭೆಯಲ್ಲಿ ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾದ ಡಾ.ಅರುಂಧತಿ ಚಂದ್ರಶೇಖರ್, ಇ-ಆಡಳಿತ ವಿಭಾಗದ ನಿರ್ದೇಶಕಿ ಡಾ.ನಂದಿನಿದೇವಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.