ಬೆಂಗಳೂರು: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಕಾರಣ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಯಾಣ ಚುನಾವನಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ದಾಳಿ ಮಾಡುತ್ತಿದ್ದರು, ಇದರಿಂದ ಪಕ್ಷಕ್ಕೆ ಚುನಾವಣೆಯಲ್ಲಿ ಭಾರೀ ಹಿನ್ನಡೆಯಾಯಿತು ಎಂದರು.
ಸಿದ್ದರಾಮಯ್ಯ ವಿರುದ್ಧದ ಮುಡಾ ಆರೋಪ ಕಾಂಗ್ರೆಸ್ ಪಕ್ಷದ ಚುನಾವಣೆ ಮೇಲೆ ಪ್ರಭಾವ ಬೀರಿತು, ಪ್ರಧಾನಿ ಮೋದಿ ಮುಡಾ ಹಗರಣದ ಬಗ್ಗೆ ಪದೇ ಪದೇ ಮಾತನಾಡಿದ್ದು ಸಾಕಷ್ಟು ನಷ್ಟ ಉಂಟು ಮಾಡಿತು.
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಡಾ ಹಗರಣದ ತನಿಖೆ ಎದುರಿಸಬೇಕು ಎಂಬ ತಮ್ ಈ ಮೊದಲಿನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ, ನನ್ನ ಹೇಳಿಕೆ ಅಳಿಸಲು ಸಾಧ್ಯವಿಲ್ಲ.
ನಾನು ಕಾಂಗ್ರೆಸ್ ದೃಷ್ಟಿಯಿಂದ ಆ ಮಾತನ್ನು ಹೇಳಿದ್ದೇನೆ, ಕಾಂಗ್ರೆಸ್ ಪಕ್ಷಕ್ಕೆ ಧಕ್ಕೆ ಆದರೆ ನೋಟಿಸ್ ಕೊಡುತ್ತಾರೆ, ನಾನು ಸಕ್ರಿಯ ರಾಜಕಾರಣದಲ್ಲಿ ಇಲ್ಲ, ಪಕ್ಷ ಉಳಿಸಲು ಕೆಲಸ ಮಾಡುತ್ತೇನೆ ಎಂದರು.
ಎಐಸಿಸಿ ನಾಯಕರು ಏಕೆ ನನಗೆ ಎಚ್ಚರಿಕೆ ನೀಡುತ್ತಾರೆ, ನಾನು ಕಾಂಗ್ರೆಸ್‌ನ ಹಿರಿಯ ನಾಯಕ, ನಾನು ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ನೇಹಿತರು, ನನ್ನ ಅಭಿಪ್ರಾಯ ಹೇಳಿದ್ದೇನೆ, ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ತಾವು ಪಕ್ಷದಲ್ಲಿ ಇರಬಹುದು, ಇಲ್ಲದೇ ಇರಬಹುದು, ಆದರೆ, ಪಕ್ಷ ಇದ್ದೇ ಇರುತ್ತದೆ ಎಂದಿದ್ದಾರೆ.
ಕಾಂತರಾಜ ವರದಿ ಕೇವಲ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಜನಗಣತಿ ಮಾತ್ರವಲ್ಲ, ಅದು ಜಾತಿ ಜನಗಣತಿ ಕೂಡ ಹೌದು, ಅವೈಜ್ಞಾನಿಕ ಅಂದರೆ ಹೇಗೆ ಅಂತ ಅರ್ಥವಾಗುತ್ತಿಲ್ಲ, ಜಾತಿ ಗಣತಿ ವರದಿಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗುತ್ತದೆ ಎಂದು ಅನಿಸುವುದಿಲ್ಲ.
ವರದಿ ಜಾರಿಗೆಗೆ ವಿಳಂಬ ಮಾಡುವ ಅವಶ್ಯಕತೆ ಇಲ್ಲ, ಜಾತಿಗಣತಿ ಜಾರಿಗೆ ನನ್ನ ಬೆಂಬಲ ಇದೆ, ಒಂದು ತಿಂಗಳು ಸಮಯ ಕೊಟ್ಟು ಏನಾದರೂ ಬದಲಾವಣೆ ಇದ್ದರೆ ಮಾಡಲಿ, ಜಾತಿ ಜನಗಣತಿ ಮಾಡುವಾಗ ನಾನೇ ವೈಯಕ್ತಿಕವಾಗಿ ಹಲವು ಕಡೆ ಹೋಗಿದ್ದೇನೆ, ಪ್ರತಿಯೊಂದು ಮನೆಗೆ ಭೇಟಿ ನೀಡಿದ್ದಾರೆ, ಉಪಜಾತಿಗಳ ವಿವರವನ್ನೂ ದಾಖಲು ಮಾಡಿದ್ದಾರೆ, ಬಹಳ ಉತ್ತಮವಾಗಿ ಜನಗಣತಿ ಮಾಡಿದ್ದಾರೆ ಎಂದರು.