ಬಳ್ಳಾರಿ: ಬಿಜೆಪಿಯ ಪ್ರಮುಖ ಮತ್ತು ಪ್ರಭಾವಿ ಧುರೀಣ, ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿಯವರು ಇಂದು ಸಂಜೆ ಬಳ್ಳಾರಿ ನಗರಕ್ಕೆ ಆಗಮಿಸಿದಾಗ ಅವರ ಬೆಂಬಲಿಗರು, ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಅದ್ದೂರಿ, ಭವ್ಯ ಸ್ವಾಗತ ನೀಡಿ, ಆತ್ಮೀಯತೆಯಿಂದ ಬರಮಾಡಿಕೊಂಡರು.
ಕಳೆದ ಕೆಲ ವರ್ಷಗಳಿಂದ `ಬಳ್ಳಾರಿ’ಯಿಂದ ದೂರ ಉಳಿದಿದ್ದ ಜನಾರ್ದನರೆಡ್ಡಿಯವರ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಮ್ ಕೋರ್ಟ್ ಇತ್ತೀಚೆಗೆ ಅನುಮತಿಸಿ, ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ, ಇಂದು ಸಂಜೆ 5 ಗಂಟೆಯ ವೇಳೆಗೆ ನಗರದ ಹೊರವಲಯದಲ್ಲಿನ `ಅಲ್ಲೀಪುರ’ಕ್ಕೆ ಆಗಮಿಸಿದಾಗ, ಸಾವಿರಾರು ಸಂಖ್ಯೆಗಳಲ್ಲಿ ಜಮಾಯಿಸಿದ್ದ ಕಾರ್ಯಕರ್ತರು, ಬೆಂಬಲಿಗರು ಅವರಿಗೆ ಹೃದಯಸ್ಪರ್ಶಿ ಸ್ವಾಗತ ಕೋರಿದರು. ಅಲ್ಲೀಪುರ ಗ್ರಾಮದಲ್ಲಿ ಮತ್ತು ಮಠದಲ್ಲಿ ಹಾಗೂ ನಗರದ ಹೊರವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೆಡ್ಡಿಯವರ ಅಭಿಮಾನಿಗಳು, ಬೆಂಬಲಿಗರು, ಆಪ್ತರು, ಸ್ನೇಹಿತರು ಸೇರಿ ಶುಭಸ್ವಾಗತ ಕೋರಿದರು.
ಬಾಸ್ ಈಜ್ ಬ್ಯಾಕ್, ಗಾಲಿ ಜನಾರ್ದನರೆಡ್ಡಿ ಜಿಂದಾಬಾದ್, ಬಿಗ್‌ಬಾಸ್ ಜಿಜೆಆರ್ ಜಿಂದಾಬಾದ್ ಎಂದು ಮುಂತಾಗಿ ಘೋಷಣೆಗಳನ್ನು ಕೂಗಿದ ಅವರ ಅಭಿಮಾನಿಗಳು, ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಜೋರಾಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹಾಗೂ ಜನಾರ್ದನರೆಡ್ಡಿಯವರ ಮೇಲೆ ಹೂಮಳೆಗರೆದರು. ದೊಡ್ಡ ಕ್ರೇನ್ ಮೂಲಕ ಭಾರಿ ಗಾತ್ರದ, ಬೃಹತ್ ಪುಷ್ಪ ಮಾಲೆಯನ್ನು ಹಾಕಿ ಅಭಿಮಾನವನ್ನು ವ್ಯಕ್ತಪಡಿಸಿದರು.
ಮಾಜಿ ಸಚಿವ ಹಾಗೂ ಗಂಗಾವತಿಯ ಹಾಲಿ ಶಾಸಕ ಜನಾರ್ದನರೆಡ್ಡಿ ಅವರಿಗೆ ಭಾರೀ ಭರ್ಜರಿ ಸ್ವಾಗತ ಕೋರಿ, ಬಳ್ಳಾರಿ ನಗರದಾದ್ಯಂತ ಎಲ್ಲಾ ಪ್ರಮುಖ ರಸ್ತೆಗಳಲ್ಲಿ, ಸರ್ಕಲ್‌ಗಳಲ್ಲಿ, ಕಮರ್ಷಿಯಲ್ ಏರಿಯಾಗಳಲ್ಲಿ ಅಸಂಖ್ಯಾತ ಬ್ಯಾನರ್, ಫ್ಲೆಕ್ಸ್, ಪೋಸ್ಟ್ರಗಳನ್ನು ಅಳವಡಿಸಿ, ರೆಡ್ಡಿಯವರಿಗೆ ಸ್ವಾಗತಿಸಲಾಗಿದೆ. ಕೆಲವೆಡೆ ಜನಾರ್ದನರೆಡ್ಡಿಯವರ `ಕಟೌಟ್’ಗಳನ್ನು ಕೂಡಾ ಹಾಕಲಾಗಿದೆ. ಭಾರೀ ಸಂಖ್ಯೆಯಲ್ಲಿ ಫ್ಲೆಕ್ಸ್-ಬ್ಯಾನರ್‌ಗಳನ್ನು ಹಾಕಿರುವುದು ನಗರದಾದ್ಯಂತ ಸಾರ್ವಜನಿಕರ ಗಮನ ಸೆಳೆದಿದೆ.
ಅನೇಕ ವಾಹನಗಳ ಬೆಂಗಾವಲಿನೊAದಿಗೆ ಶಾಸಕ ಜನಾರ್ದನರೆಡ್ಡಿಯವರು, ಬಳ್ಳಾರಿ ನಗರಕ್ಕೆ ಆಗಮಿಸಿದಾಗ, ಅವರ ಅಭಿಮಾನಿಗಳ ಜಯ-ಜಯಕಾರದ ಘೋಷಣೆಗಳು ಮುಗಿಲ್ ಮುಟ್ಟಿದ್ದವು. ಅಭಿವೃದ್ಧಿಯ ಹರಿಕಾರನಿಗೆ ಜಯವಾಗಲಿ, `ಜನಪ್ರಿಯ ನಾಯಕ ಜನಾರ್ದನರೆಡ್ಡಿಯವರಿಗೆ ಜಯವಾಗಲಿ’ ಎಂದು ಮುಂತಾಗಿ ಘೋಷಣೆಗಳನ್ನು ಕೂಗಿ ಅಭಿಮಾನಿಗಳು ಪಟಾಕಿ ಸಿಡಿಸಿ, ಡ್ಯಾನ್ಸ್ ಮಾಡಿ ಹರುಷ ವ್ಯಕ್ತಪಡಿಸಿದರು. ಅಲ್ಲದೇ ಕೈಗಳಲ್ಲಿ ಬಿಜೆಪಿ ಬಾವುಟ ಹಿಡಿದು, ಬೈಕ್ ರ‍್ಯಾಲಿ ನಡೆಸಿದರು.
ಅಲ್ಲೀಪುರದಿಂದ, ಕಂಟೋನ್ಮೆAಟ್, ಸುಧಾಸರ್ಕಲ್, ಕೌಲ್‌ಬಜಾರ್, ಮೋತಿ ಸರ್ಕಲ್, ರಾಯಲ್ ಸರ್ಕಲ್, ಶ್ರೀಕನಕದುರ್ಗಮ್ಮ ದೇವಸ್ಥಾನ ಸರ್ಕಲ್, ಎಸ್.ಪಿ ಸರ್ಕಲ್ ಮೂಲಕ ಜನಾರ್ದನರೆಡ್ಡಿ ಅವರು ಭಾರೀ ಭವ್ಯ ಮೆರವಣಿಗೆಯಲ್ಲಿ ಆಗಮಿಸಿ, ಆನಂತರ ತಮ್ಮ ನಿವಾಸಕ್ಕೆ ತೆರಳಿದರು.
ವಿವಿಧ ರಸ್ತೆಗಳಲ್ಲಿ, ಸರ್ಕಲ್‌ಗಳಲ್ಲಿ ಸಾರ್ವಜನಿಕರು ಕಿಕ್ಕಿರಿದು ನಿಂತು ಜನಾರ್ದನರೆಡ್ಡಿ ಅವರಿಗೆ ಕೈ ಬೀಸಿ, ಸ್ವಾಗತಿಸುತ್ತಿದ್ದುದು ಕಂಡು ಬಂದಿತು. ಕೆಲವೆಡೆ ಅಭಿಮಾನಿಗಳು, ಬೆಂಬಲಿಗರು, ಹೂವಿನ ಹಾರ ಹಾಕಿ, ಸಿಹಿ ತಿನಿಸಿ, ಸ್ವಾಗತ ಬಯಸಿದ್ದುದೂ ಗೋಚರಿಸಿತು.
ನಗರದ `ರಸ್ತೆ’ಗಳಲ್ಲಿ ಭವ್ಯ ಮೆರವಣಿಗೆಯಲ್ಲಿ ರೆಡ್ಡಿಯವರು ಆಗಮಿಸಿದ್ದರಿಂದ, ಜನ ಜಂಗುಳಿ ಉಂಟಾಗಿತ್ತು. ಪೊಲೀಸರು ಬಿಗಿಯಾದ ಭದ್ರತೆ ಏರ್ಪಡಿಸಿದ್ದರು. ಕೆಲ ರಸ್ತೆಗಳಲ್ಲಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿ `ಟ್ರಾಫಿಕ್ ಜಾಂ’ ಆಗಿದ್ದುದು ಕಂಡು ಬಂದಿತು.
ಬಳ್ಳಾರಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು, ಮುಖಂಡರು, ನಗರಪಾಲಿಕೆಯ ಸದಸ್ಯರು,ವಿವಿದ ನಿಗಮ-ಮಂಡಳಿಗಳ ಮಾಜಿ ಅಧ್ಯಕ್ಷರು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು, ವ್ಯಾಪಾರಿಗಳು, ಹಾಗೂ ರೆಡ್ಡಿಯವರ ಸ್ನೇಹಿತರು, ಆತ್ಮೀಯರು ಸೇರಿದಂತೆ ಅನೇಕ ಪ್ರಮುಖರು ಜನಾರ್ದನ ರೆಡ್ಡಿಯವರನ್ನು ಹಾರ್ದಿಕವಾಗಿ ಬರಮಾಡಿಕೊಂಡರು.