ಬಳ್ಳಾರಿ,ಆ.15: ಭಾರತದ 78 ನೇ ಸ್ವಾತಂತ್ರೋತ್ಸವದ ಅಂಗವಾಗಿ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಧ್ವಜಾರೋಹಣ ನೆರವೇರಿಸಿದರು.
ನಂತರ ಪರೇಡ್ಗೆ ಸಿದ್ದಗೊಂಡಿದ್ದ ತಂಡಗಳನ್ನು ವೀಕ್ಷಿಸಿದರು. ತದನಂತರ ಆಕರ್ಷಕ ಪಥ ಸಂಚಲನ ನಡೆಯಿತು. ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದ ಸಚಿವರು,. ನೆರೆದಿದ್ದ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಸ್ವಾತಂತ್ರ್ಯೋತ್ಸವದ ಸಂದೇಶ ಸಾರಿದರು.
ಸ್ವಾತಂತ್ರೋತ್ಸವದ ಈ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯದ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಹಾಗೂ ಅವರಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುವುದು ಅಭಿಮಾನದ ಸಂಗತಿಯಾಗಿದೆ ಹಾಗೂ ಅದು ನಮ್ಮ ಆದ್ಯ ಕರ್ತವ್ಯವೂ ಆಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ನೋವು, ಹಿಂಸೆ, ಅವಮಾನಗಳನ್ನು ಅನುಭವಿಸಿದ ಹಾಗೂ ಅಪಾರ ತ್ಯಾಗ ಮಾಡಿದ ಜನರಲ್ಲಿ ಅನೇಕರು ಇಂದು ನಮ್ಮೊಂದಿಗಿದ್ದಾರೆ. ಅನೇಕರು ನಮ್ಮನ್ನು ಅಗಲಿದ್ದಾರೆ. ಅವರೆಲ್ಲರಿಗೂ ನಮ್ಮ ನಮನಗಳು ಸಲ್ಲಬೇಕು ಎಂದರು.
ಭಾರತದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕೆ ವಿಶ್ವದಲ್ಲಿ ಅನನ್ಯವಾದ ಸ್ಥಾನ ಸಿಕ್ಕಿದೆ. ಬ್ರಿಟಿಷ್ ಪ್ರಭುತ್ವ ಕಟ್ಟಿದ್ದ “ಸೂರ್ಯ ಮುಳುಗದ ಸಾಮ್ರಾಜ್ಯವನ್ನು” ಅಹಿಂಸೆ, ಸತ್ಯಾಗ್ರಹಗಳ ಮೂಲಕ ಭಾರತವು ಮಣಿಸಿದ್ದು ನಿಜಕ್ಕೂ ಅದ್ವಿತೀಯವಾದ ಸಂಗತಿಯಾಗಿದೆ. ಭಾರತದ ಸ್ವಾತಂತ್ರ್ಯದ ಹೋರಾಟವೆಂದರೆ ಅದೊಂದು “ಪವಾಡವೇ ಸರಿ.” ಈ ಶುಭ ಸಂದರ್ಭದಲ್ಲಿ ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಬಾಯಿ ಪಟೇಲ್, ಪಂಡಿತ್ ಜವಹಾರಲಾಲ್ ನೆಹರು, ಸುಭಾಸ್ ಚಂದ್ರ ಭೋಸ್, ದಾದಾಬಾಯಿ ನವರೋಜಿ, ಮೌಲಾನ ಅಬುಲ್ ಕಲಾಂ ಆಝಾದ್, ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಭಗತ್ಸಿಂಗ್, ಚಂದ್ರಶೇಖರ ಅಜಾದ್, ರಾಜ್ಗುರು, ಸುಖ್ದೇವ್ ಹಾಗೂ ಸಾವಿರಾರು ವೀರ ಯೋಧರನ್ನು ಸ್ಮರಿಸಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಮೊದಲ ಕರ್ತವ್ಯ. ಝಾನ್ಸಿರಾಣಿ ಲಕ್ಷ್ಮೀಬಾಯಿ ಹಾಗೂ ಅದಕ್ಕೂ ಪೂರ್ವದಲ್ಲಿ 1824ರ ಹಿಂದಯೇ ಸ್ವಾತಂತ್ರ್ಯ ಕಿಡಿ ಹಾರಿಸಿ ಭಾರತದ ಸ್ವಾತಂತ್ಯದ “ಬೆಳ್ಳಿ ಚುಕ್ಕಿ”ಎನಿಸಿದ ಕರ್ನಾಟಕದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಮಹಿಳಾ ಹೋರಾಟಗಾರರನ್ನು ನಾವಿಂದು ನೆನೆಯಬೇಕಾಗಿದೆ.
ಇಡೀ ಕರ್ನಾಟಕದಲ್ಲಿ ಸ್ವಾತಂತ್ರ್ಯಹೋರಾಟಕ್ಕೆ ಸಂಬಂಧಿಸಿದಂತೆ, ಬಳ್ಳಾರಿ ಜಿಲ್ಲೆಯು ತನ್ನದೇ ಆದ ಮಹತ್ತರ ಕಾಣಿಕೆ ನೀಡಿದೆ. ಸ್ವಾತಂತ್ರ್ಯ ಹೋರಾಟದ ದೃಷ್ಟಿಯಿಂದ ಬಳ್ಳಾರಿ ಜಿಲ್ಲೆ ಜಾಗ್ರತ ಹಾಗೂ ಚೈತನ್ಯ ಶೀಲ ಜಿಲ್ಲೆಯಾಗಿತ್ತು. ಮಹಾತ್ಮಾ ಗಾಂಧಿಯವರು ಬಳ್ಳಾರಿಗೆ ಭೇಟಿ ನೀಡಿದ್ದು 1 ಅಕ್ಟೋಬರ್ 1921 ರಂದು ಇಲ್ಲಿನ ರೈಲು ನಿಲ್ದಾಣದಲ್ಲಿ ಸುಮಾರು ಎಂಟು ಗಂಟೆಗಳ ಕಾಲ ತಂಗಿ ಬಳ್ಳಾರಿ ಜನರಿಗೆ ಸ್ವತಂತ್ರದ ಕಹಳೆಗೆ ಸ್ಪೂರ್ತಿದಾಯಕರಾದರು. ಘೋರ್ಪಡೆ 1932 ರಲ್ಲಿ ರಾಜ ವಂಶಸ್ಥರು ಯಶವಂತರಾವ್ ಹಿಂದೂರಾವ್ ಘೋರ್ಪಡೆ ಒಂದು ಪ್ರೊಕ್ಲಾಮೇಷನ್ (ಆದೇಶ) ಹೊರಡಿಸಿದ್ದರು. ಅದರ ಪ್ರಕಾರ ಹರಿಜನರಿಗೆ ಸಮಾನವಾಗಿ ದೇವಸ್ಥಾನಗಳಲ್ಲಿ ಮುಕ್ತ ಪ್ರವೇಶ ಅವಕಾಶ ಮಾಡಿಕೊಡಲಾಯಿತು. ಆದ್ದರಿಂದ ಈಪ್ರದೇಶದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಲಾಯಿತು. ಇದರಿಂದ ಹರ್ಷಿತರಾದ ಮಹಾತ್ಮ ಗಾಂಧಿಜಿಯವರು 1934ರಲ್ಲಿ ಸಂಡೂರಿಗೆ ಭೇಟಿ ನೀಡಿದ್ದರು.
ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟವು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತವಾಗಿದೆ. ಕನ್ನಡ ಹಾಗೂ ತೆಲುಗು ಮಾತನಾಡುವ ಜನರು ಭಾಷಾ ಭೇದವನ್ನು ಮರೆತು ಹೋರಾಡಿದ್ದು, ದ್ವಿಭಾಷಾ ಸಂಸ್ಕೃತಿಗೆ ಒಳಗಾಗಿರುವ ನಾಡಿನಲ್ಲಿ ವಿಶಿಷ್ಟ ಸಂಗತಿಯಾಗಿದೆ. ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟವು ಮೂಲಭೂತವಾಗಿ”ಗಾಂಧಿವಾದ” ಸ್ವರೂಪದಾಗಿತ್ತು,. ಯಾವುದೇ ಹಿಂಸೆಗೆ ಅವಕಾಶ ನೀಡದಂತೆ, ಅಹಿಂಸಾವಾದವನ್ನು ಅನುಸರಿಸಿ ಹೋರಾಟ ನಡೆಸಲಾಯಿತು. ಬಳ್ಳಾರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದಲ್ಲಿ ಟಿ.ಸುಬ್ರಮಣ್ಯಂ, ಟಿ.ಬಿ.ಕೇಶವರಾವ್, ಡಾ. ಎ. ನಂಜಪ್ಪ, ಚಿದಾನಂದ ಶಾಸ್ತ್ರಿ, ಕೊ. ಚನ್ನಬಸಪ್ಪ, ಗೌಡಪ್ಪ, ಬಿಂಧು ಮಾದವರಾವ್, ಬರ್ಲಿ ಶೇಷಣ್ಣ, ಬೆಲ್ಲದ ಚೆನ್ನಪ್ಪ, ಬೂಸಲ ಸಾಂಬಮೂರ್ತಿ, ಹಡಪದ ತಿಮ್ಮಪ್ಪ, ಬಂಡಿಹಟ್ಟಿ ವೆಂಕೋಬರಾವ್, ಲಕ್ಷ್ಮಿದೇವಿ ಇನ್ನು ಮುಂತಾದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರನ್ನು ನಾವಿಂದು ನೆನೆಯಬೇಕಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು, ಬಾಲ ಗಂಗಾಧರ ತಿಲಕ್ ರಂತಹ ರಾಷ್ಟ ನಾಯಕರುಗಳು ಬಳ್ಳಾರಿಗೆ ಅಗಮಿಸಿದ್ದರು ಎನ್ನುವುದು ರೋಚಕದ ಸಂಗತಿಯಾಗಿದೆ.
ಬಳ್ಳಾರಿಯ ಅಲ್ಲಿಪುರ ಜೈಲಿನಲ್ಲಿ ನೂರಾರು ಸತ್ಯಾಗ್ರಹಿಗಳನ್ನು ಬಂಧಿಸಲಾಗಿತ್ತು. ಚಕ್ರವರ್ತಿ ರಾಜಗೋಪಾಲಚಾರಿ, ಪೊಟ್ಟಿ ಶ್ರೀರಾಮುಲು, ಕಾಮರಾಜ್, ಟಿ.ವಿ.ಸುಬ್ಬಾಶೆಟ್ಟಿ, ಬೆಜವಾಡ ಗೋಪಾಲರೆಡ್ಡಿ ಮುಂತಾದ ಅಗ್ರಗಣ್ಯ ಹೋರಾಟಗಾರರನ್ನು ಈ ಜೈಲಿನಲ್ಲಿ ಇರಿಸಲಾಗಿತ್ತು ಎಂಬುದು ಇತಿಹಾಸದಿಂದ ವೇದ್ಯವಾಗುತ್ತದೆ.
ಸ್ವಾತಂತ್ರ್ಯ ಬಂದ ದಿನ ತನ್ನ ಮೊದಲ ಭಾಷಣದಲ್ಲಿ ಅಂದಿನ ಪ್ರಧಾನಿ ದಿವಂಗತ ಜವಾಹರ್ಲಾಲ್ ನೆಹರು ಅವರ ಹೇಳಿದ ಮಾತನ್ನು ನಾನು ಇಂದು ಇಲ್ಲಿ ಸ್ಮರಿಸಿಕೊಳ್ಳಲು ಇಚ್ಚಿಸುತ್ತೇನೆ. ಅಂದು ನೆಹರು ಹೇಳಿದ್ದರು, “ಭಾರತ ಪುರಾತನ ರಾಷ್ಟ್ರ ಆದರೆ, ಯುವ ದೇಶ ಎಂದು. ಅಲ್ಲದೆ, ದೇಶದ ಅಭಿವೃದ್ಧಿಗೆ ಅಂದೇ ಅವರು ಪಣ ತೊಟ್ಟಿದ್ದರು. 1947ರ ಕಾಲಘಟ್ಟದಲ್ಲಿ ಭಾರತಕ್ಕೆ ಒಂದು ಸೂಜಿಯನ್ನೂ ತಯಾರಿಸುವ ಶಕ್ತಿ ಇರಲಿಲ್ಲ. ಆದರೆ, ನೆಹರು ತಮ್ಮ ದೂರದೃಷ್ಟಿಯ ಮೂಲಕ ಹೊಸ ಭಾರತವನ್ನು ಕಟ್ಟಿದರು. ಎಲ್ಲಾ ವಿಭಾಗದಲ್ಲೂ ಭಾರತವನ್ನು ಉನ್ನತೀಕರಿಸಿದರು. ಇಂದು ಭಾರತ ಇಸ್ರೋ ನಂತಹ ಹೆಮ್ಮೆಯ ಸಂಸ್ಥೆಯನ್ನು ಅಂತರಿಕ್ಷ ಕ್ಷೇತ್ರದಲ್ಲಿ ಹೊಸ ಸಾಧನೆಗೆ ಸಾಕ್ಷಿಯಾಗಿದೆ. ಸಾಲು ಸಾಲು ರಾಕೆಟ್ ಹಾರಿಸುವ ಮೂಲಕ ವಿಶ್ವದ ಮುಂದುವರೆದ ರಾಷ್ಟ್ರಗಳಿಗೂ ಸವಾಲೆಸೆದಿದೆ.
ಸಮಾಜದ ಕಡೆ ವ್ಯಕ್ತಿಗೂ ಸ್ವಾತಂತ್ರ್ಯ ಹಾಗೂ ಸಮಾನತೆಯನ್ನು ತಲುಪಿಸಬೇಕು ಎಂಬ ಉದ್ದೇಶದಿಂದ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ನಾವು ಈ ಕ್ಷಣ ಸ್ಮರಿಸಬೇಕಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಸಮಾನತೆಯನ್ನು ತಲುಪಸಿಬೇಕು ಎಂಬ ಅಂಬೇಡ್ಕರ್ ಅವರ ಹೋರಾಟ ವಿಶ್ವ ಹೋರಾಟದ ಇತಿಹಾಸದಲ್ಲೊಂದು ಮೈಲುಗಲ್ಲು. ಸರ್ವಾಧಿಕಾರ ಉಚ್ಛಾಯ ಸ್ಥಿತಿಯಲ್ಲಿರುವ, ಅಭಿವ್ಯಕ್ತಿ ಸ್ವಾತಂತ್ರ್ಯವೇ ಪ್ರಶ್ನಾರ್ಥಕವಾಗಿರುವ ಇಂದಿನ ದಿನಗಳಲ್ಲಿ ನಾವು ನೆಹರು-ಅಂಬೇಡ್ಕರ್ ರಂತಹ ನಾಯಕರನ್ನು ಹೆಚ್ಚು ಹೆಚ್ಚು ಅರ್ಥಮಾಡಿಕೊಳ್ಳಬೇಕಿದೆ. ಹೊಸ ಭಾರತವನ್ನು ಕಟ್ಟಲು ನೆಹರುವಿನ ಮೆದಳು-ಅಂಬೇಡ್ಕರ್ ಹೃದಯದ ಅಗತ್ಯವಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಮಾಜದ ಸಂಪತ್ತು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಕಟಿಬದ್ಧವಾಗಿದೆ. ಬಡವರು ದುಡಿದ ಹಣವನ್ನು ಶ್ರೀಮಂತರ ಜೇಬಿಗೆ ತುರಕದೆ ಅವರ ಹಣವನ್ನು ಅವರಿಗೇ ನೀಡುವ ಸಲುವಾಗಿ ಇಂದು ರಾಜ್ಯ ಕಾಂಗ್ರೆಸ್ ಸರ್ಕಾರ ಮಹತ್ವದ 5 ಗ್ಯಾರಂಟಿಗಳನ್ನು ಜಾರಿಗೆ ತಂದಿದೆ.
ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಶಕ್ತಿ ಯೋಜನೆಯಡಿ ಬಳ್ಳಾರಿ ಜಿಲ್ಲೆಯಲ್ಲಿ ಜುಲೈ-31 ವರೆಗೆ 2,91,40,000 ಮಹಿಳೆಯರು ಪ್ರಯಾಣಸಿದ್ದು 10,19,370,211 ರೂ ವೆಚ್ಚವನ್ನು ಭರಿಸಲಾಗಿದೆ. ರಾಜ್ಯಾದ್ಯಂತ ಈವರೆಗೆ ಒಟ್ಟು 2,66,72,12,266 ಮಹಿಳೆಯರಿಗೆ ಉಚಿತ ಟಿಕೆಟ್ ನೀಡುವ ಮೂಲಕ ಹೊಸ ದಾಖಲೆಗೆ ನಾಂದಿ ಹಾಡಲಾಗಿದೆ.
ಹಸಿವು ಮುಕ್ತ ಕರ್ನಾಟಕ : ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು 10 ಕೆಜಿ.ಆಹಾರ ಧಾನ್ಯ ಉಚಿತ -5 ಕೆಜಿ. ಅಕ್ಕಿ ಬದಲಿಗೆ 170/- ರೂ. ಹಣವನ್ನು ಡಿಬಿಟಿ ಮೂಲಕ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತಿರುವ ಅನ್ನಭಾಗ್ಯ ಯೋಜನೆಯಡಿ ಬಳ್ಳಾರಿ ಜಿಲ್ಲೆಯಲ್ಲಿ ಜುಲೈ- 31 ರವರೆಗೆ 10,25,833 ಫಲಾನುಭವಿಗಳಿಗೆ 5 ಕೆಜಿ ಪಡಿತರ ಅಕ್ಕಿಯೊಂದಿಗೆ ರೂ.170/-ಗಳನ್ನು ಸೇರಿ ಒಟ್ಟಾರೆ 1,89,77,01,500 /-ಗಳನ್ನು ಅನುದಾನವನ್ನು ಜಮಾ ಮಾಡಲಾಗಿದೆ. ರಾಜ್ಯಾದ್ಯಂತ ಒಟ್ಟಾರೆ 6445.64 ಕೋಟಿ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆ ನೀಡಲಾಗಿದೆ.
ಸ್ತ್ರೀ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ – ಪ್ರತಿ ಮನೆ ಯೊಡತಿಗೆ ಪ್ರತಿ ತಿಂಗಳು ರೂ.2000/- ನೇರವಾಗಿ ಫಲಾನುಭವಿ ಖಾತೆಗೆ ರ್ಗಾವಣೆ ಮಾಡಲಾಗುತ್ತಿರುವ ಗೃಹಲಕ್ಷ್ಮಿ ಯೋಜನೆಯಡಿ ಬಳ್ಳಾರಿ ಜಿಲ್ಲೆಯಲ್ಲಿ ಮೇ-2024 ವರೆಗೆ 2,78,733 ಫಲಾನುಭವಿಗಳಿಗೆ ತಲಾ ರೂ.2000/-ಗಳಂತೆ ಒಟ್ಟು ರೂ.55,74,66,000 /- ಮೊತ್ತ ಪಾವತಿಯಾಗಿರುತ್ತದೆ. ಈ ಯೋಜನೆಯ ಅಡಿ ರಾಜ್ಯಾದ್ಯಂತ ಒಟ್ಟಾರೆ 1.23ಕೋಟಿ ಫಲಾನುಭವಿಗಳಿಗೆ ಹಣ ಜಮಾ ಮಾಡಲಾಗಿದೆ.
ಮನೆ-ಮನ ಬೆಳಗುವ ಭಾಗ್ಯದ ಬೆಳಕು: ಪ್ರತಿ ಮನೆಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಗೃಹ ಜ್ಯೋತಿ ಯೋಜನೆಯಡಿ ಬಳ್ಳಾರಿ ಜಿಲ್ಲೆಯಲ್ಲಿ ಜುಲೈ-2024ರವರೆಗೆ 93,245 ಫಲಾನುಭವಿಗಳಿಗೆ ಒಟ್ಟು ರೂ.5.21 ಕೋಟಿ ಅನುದಾನವನ್ನು ಭರಿಸಲಾಗಿದೆ. ರಾಜ್ಯಾದ್ಯಂತ ಒಟ್ಟಾರೆ 1.51 ಕೋಟಿ ಮನೆಗಳಿಗೆ 8,239 ಕೋಟಿ ರೂಪಾಯಿ ಹಣವನ್ನು ವ್ಯಯಿಸಲಾಗಿದೆ.
ಯುವಕರ ಶ್ರೇಯೋಭಿವೃದ್ಧಿ: ಪದವೀಧರರಿಗೆ ಮತ್ತು ಡಿಪ್ಲೋಮಾದಾರರಿಗೆ ಪ್ರತಿ ಮಾಹೆ ರೂ.3000/- ಮತ್ತು 1500/- ರಂತೆ ಒಟ್ಟು 24 ತಿಂಗಳ ಕಾಲ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆಯನ್ನು ಬಳ್ಳಾರಿ ಜಿಲ್ಲೆಯಲ್ಲಿ 4327 ಫಲಾನುಭವಿಗಳಿಗೆ ನೀಡಲಾಗಿರುತ್ತದೆ. ರಾಜ್ಯಾದ್ಯಂತ ಒಟ್ಟಾರೆ 3,03,386 ಫಲಾನುಭವಿಗಳಿಗೆ 96,80,73,000 ಕೋಟಿ ರೂಪಾಯಿ ಹಣ ನೀಡಲಾಗಿದೆ.
ರಾಜ್ಯದಲ್ಲಿ ಒಟ್ಟು 1.40 ಕೋಟಿ ಎಕರೆ ಸರ್ಕಾರಿ ಜಮೀನು ಇದ್ದು, ಲ್ಯಾಂಡ್ ಬೀಟ್ ಮೊಬೈಲ್ ತಂತ್ರಾಂಶದ ಮೂಲಕ ಒಟ್ಟು 91,000 ಎಕರೆ ಜಮೀನುಗಳು ಒತ್ತುವರಿಯಾಗಿರುವುದನ್ನು ಗುರುತಿಸಲಾಗಿದೆ, 14.32 ಲಕ್ಷ ಸರ್ಕಾರಿ ಜಮೀನುಗಳ ಸ್ಥಳ ಪರಿಶೀಲನೆಗೆ ಸೂಚಿಸಿದ್ದು ಈ ಪೈಕಿ 13.04 ಲಕ್ಷ ಜಮೀನುಗಳಿಗೆ ಗ್ರಾಮಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದರಲ್ಲಿ ಕಂದಾಯ ಇಲಾಖೆಯ 1.93 ಲಕ್ಷ ಜಮೀನುಗಳು ಇದ್ದು, ವಿವಿಧ 20 ಇಲಾಖೆಗಳ ಜಮೀನುಗಳನ್ನೂ ಗುರುತಿಸಲಾಗಿದೆ. ಕೆರೆ ಮತ್ತು ಸ್ಮಶಾನಗಳ ಹೆಚ್ಚುವರಿ ಜವಾಬ್ದಾರಿ ತೆಗೆದುಕೊಂಡು, ಸಮೀಕ್ಷೆ ನಡೆಸಲಾಗಿದೆ. ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಶೇಕಡ 80.27 %ರಷ್ಟು ಅಂದರೆ 55.638 ಸರ್ಕಾರಿ ಜಮೀನುಗಳ ಪೈಕಿ 48,786 ಆಸ್ತಿಗಳನ್ನು ಲ್ಯಾಂಡ್ ಬೀಟ್ ತಂತ್ರಾಂಶಕ್ಕೆ ಒಳಪಡಿಸಲಾಗಿದೆ. ಆಗಸ್ಟ್ ತಿಂಗಳಿನಿಂದ ಸರ್ವೇಯರ್ ಲಭ್ಯತೆ ನೋಡಿಕೊಂಡು ಒತ್ತುವರಿ ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು.
ಭೂ ಸುರಕ್ಷಾ ಕಾರ್ಯಕ್ರಮದಡಿ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಇಂಡೆಕ್ಸ್ ಮಾಡಿ ಡಿಜಿಟಲೀಕರಣ ಮಾಡಲಾಗಿದೆ. ಈ ವರೆಗೆ ಒಟ್ಟು 4,43,27,379 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. 31 ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿದ್ದು, ಉಳಿದ ತಾಲೂಕುಗಳಲ್ಲೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಒಂದು ವರ್ಷದೊಳಗೆ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ದಾಖಲೆಗಳನ್ನು ಒದಗಿಸುವುದರ ಜೊತೆಗೆ, ದಾಖಲೆಗಳ ತಿರುಚುವಿಕೆ, ದಾಖಲೆಗಳ ನಾಪತ್ತೆ ಮೊದಲಾದವುಗಳನ್ನು ತಡೆಯಬಹುದಾಗಿದೆ. ಬಳ್ಳಾರಿ ಜಿಲ್ಲಾಧಿಕಾರಿಗಳ ಅಭಿಲೇಖನಾಲಯದ ಸೇರಿದಂತೆ ಈಗಾಗಲೇ 23,11,771 ಪುಟಗಳ ಮೌಲ್ಯಾಧಾರಿತ ರೈತರ ದಾಖಲೆಗಳನ್ನು ಗಣಕೀಕರಿಸಲಾಗಿದೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
ಜಮೀನು ಮಾರಾಟದಲ್ಲಿ ವಂಚನೆ (Land Fraud) ತಡೆಯಲು ಪಹಣಿ-ಆಧಾರ್ ಜೋಡಣೆ ಕೈಗೊಳ್ಳಲಾಗಿದೆ, ಒಬ್ಬರು ಮೂರ್ನಾಲ್ಕು ದಶಕಗಳಿಂದ ಜಮೀನು ಸಾಗುವಳಿ ಮಾಡುತ್ತಿದ್ದು, ಅದಕ್ಕೆ ಬೇರೆ ವ್ಯಕ್ತಿಗಳು ಭೂ ಮಂಜೂರಾತಿ ಮಾಡಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಯೋಜನೆಯಲ್ಲಿ ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಶೇಕಡ 80% ರಷ್ಟು 5,23,542 ರೈತರ ಜಮೀನು ಪೈಕಿ 412084 ಭೂ ಮಾಲೀಕರ ಜಮೀನನ್ನು ಅವರ ಆಧಾರ ಸಂಖ್ಯೆಗೆ ಜೋಡಣೆ ಮಾಡಲಾಗಿದೆ.
ರಾಷ್ಟ್ರೀಯ ಐಕ್ಯತೆಯನ್ನು ಕಾಪಾಡುವಂತಹ ಕಾರ್ಯಗಳಲ್ಲಿ ದುಷ್ಠಶಕ್ತಿಗಳ ದಮನಕ್ಕೆ ಹಾಗೂ ರಾಷ್ಟ್ರದ ರಕ್ಷಣೆಗೆ, ದೇಶದ ಸಮಗ್ರತೆಗೆ ಎಲ್ಲರೂ ಒಟ್ಟಾಗಿ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಎಡಿಜಿಪಿ ಲೋಕೇಶ್, ಎಸ್ಪಿ ಶೋಭಾರಾಣಿ, ಲಿಡ್ಕರ್ ಅಧ್ಯಕ್ಷ ,ಮುಂಡ್ರಿಗಿ ನಾಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಸೇರಿದಂತೆ ಪಾಲಿಕೆ ಸದಸ್ಯರು ಇನ್ನಿತರ ಮುಖಂಡರು ಉಪಸ್ಥಿತರಿದ್ದರು.