ತಪ್ಪು ಮಾಹಿತಿ ನೀಡಿದ ಅಧಿಕಾರಿಗಳು : ಗರಂ ಆದ ಸಚಿವ ಪರಮೇಶ್ವರ್

ತುಮಕೂರು : ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಶೇ.59.51ರಷ್ಟು ಮಾತ್ರ ತೆರಿಗೆ ಸಂಗ್ರಹಿಸಲಾಗಿದ್ದು, ಬಾಕಿ ಇರುವ ಆಸ್ತಿ ತೆರಿಗೆ, ಅಂಗಡಿ ಮಳಿಗೆಗಳ ಬಾಡಿಕೆ ವಸೂಲಾತಿಯನ್ನು ಇನ್ನೆರಡು  ತಿಂಗಳೊಳಗಾಗಿ ಮಾಡಬೇಕೆಂದು ಅಧಿಕಾರಿಗಳಿಗೆ  ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.

 

          ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮೊದಲನೇ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂದಿನ ಕೆಡಿಪಿ ಸಭೆಯಲ್ಲಿ ಕೆಲವು ಅಧಿಕಾರಿಗಳು ಕೆಲವು ತಪ್ಪು ಮಾಹಿತಿಗಳನ್ನು ಕೊಟ್ಟಿರುವುದು ಗಮನಕ್ಕೆ ಬಂದಿರುತ್ತದೆ. ಇನ್ನು ಮುಂದೆ ಈ ರೀತಿಯಾದರೆ ಸಹಿಸುವುದಿಲ್ಲ. ಸಭೆಗೆ ಬರುವ ಮುನ್ನ ಇಲಾಖೆಯ ತಯಾರಿ ಮಾಡಿಕೊಂಡು ಬರಬೇಕು. ಸಭೆಯಲ್ಲಿ ಸರಿಯಾದ ಉತ್ತರ ನೀಡದಿದ್ದಲ್ಲಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಕರ್ತವ್ಯದಲ್ಲಿ ಬೇಜವಾಬ್ದಾರಿ, ನಿರ್ಲಕ್ಷ್ಯತೆ ತೋರುವ ಅಧಿಕಾರಿಗಳು ನಮಗೆ ಬೇಕಿಲ್ಲ ಎಂದು ತಿಳಿಸಿದರು. 

          ಆಡಳಿತವನ್ನು  ಚುರುಕುಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಬೇಕೆಂದು ಎಲ್ಲಾ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.  ತುಮಕೂರಿನ ಮಕ್ಕಳು ಅಷ್ಟು ದಡ್ಡರಲ್ಲ. ಫಲಿತಾಂಶದಲ್ಲಿ 30ನೇ ಸ್ಥಾನಕ್ಕೆ ಬಂದಿದ್ದೀವಿ. ಮುಖ್ಯಮಂತ್ರಿಗಳಿಗೆ ಏನೆಂದು ಉತ್ತರಿಸಬೇಕು? ಗುಣಮಟ್ಟದ ಶಿಕ್ಷಣ ಬಹಳ ಮುಖ್ಯ. ಶಿಕ್ಷಕರು ಸರಿಯಾಗಿ ಶಾಲೆಗಳಿಗೆ ಬರುವುದಿಲ್ಲ ಹಾಗೂ ಪಾಠವನ್ನು ಮಾಡುವುದಿಲ್ಲವೆಂದು ಸಾರ್ವಜನಿಕ ದೂರುಗಳು ಬಂದಿದ್ದು, ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಬೇಕೆಂದು ಡಿಡಿಪಿಐ ಹಾಗೂ ಬಿಇಒಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.  

 

          ಸರ್ಕಾರಿ ಆಸ್ಪತ್ರೆಗಳ ವೈದ್ಯರು ಸಾರ್ವಜನಿಕರ ದೂರವಾಣಿ ಕರೆಯನ್ನು ಸ್ವೀಕರಿಸಿ ಸ್ಪಂದಿಸಬೇಕು.  ಜನರಿಗೆ ಸ್ಪಂದಿಸದಿದ್ದರೆ ಹೇಗೆ? ಉತ್ತಮ ವೈದ್ಯರಿಂದ ಚಿಕಿತ್ಸೆ ದೊರೆಯುತ್ತದೆ ಎಂಬ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ. ಬಡ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ, ಅಶಿಸ್ತು ತೋರುವ ಅಧಿಕಾರಿಗಳನ್ನು ಮುಲಾಜಿಲ್ಲದೆ ಅಮಾನತು ಮಾಡುವಂತೆ ತಾಕೀತು ಮಾಡಲಾಗಿದೆ ಎಂದು ಹೇಳಿದರು.  

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top