ಬೆಂಗಳೂರು: ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆ ನಡೆಯುವ ಸಾಧ್ಯತೆಗಳು ಕ್ಷೀಣಿಸಿವೆ.
ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ದಿಡೀರನೆ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಚುನಾಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ಅವರೇ ನೀಡಿರುವ ಮಾಹಿತಿಯಂತೆ ಸದ್ಯಕ್ಕೆ ಚುನಾವಣೆ ನಡೆಯುವ ಬಗ್ಗೆ ಸ್ಪಷ್ಟತೆ ನೀಡಿಲ್ಲ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಅನಿಶ್ಚಿತತೆಗೆ ಸಿಲುಕಿದೆ.
ಕಳೆದ ಮೂರುವರೆ ನಾಲ್ಕು ವರ್ಷಗಳಿಂದ ಈ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿಲ್ಲ. ಇದರ ಜತೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೂ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ.
ಚುನಾವಣೆ ನಡೆಸಲು ಸರ್ಕಾರ ನಮಗೆ ಸ್ಪಂಧಿಸುತ್ತಿಲ್ಲ ಎಂದು ಅವರ ವಿರುದ್ಧವೂ ನ್ಯಾಯಾಂಗ ಉಲ್ಲಂಘನೆ ಪ್ರಕರಣ ದಾಖಲಿಸಿದ್ದೇವೆ. ಎರಡೂ ಚುನಾವಣೆಗೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟಿನ ಮುಂದೆ ಇದ್ದು, ವಿಚಾರಣೆ ಇನ್ನೂ ಕೈಗೆತ್ತಿಕೊಂಡಿಲ್ಲ ಎಂದು ರಾಜ್ಯ ಚುನಾಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದರು.
ಸುಪ್ರೀಂ ಕೋರ್ಟ್ ಕೇಸ್ ಇತ್ಯರ್ಥಪಡಿಸಿದರೆ, ಆಯೋಗವು ರಾಜ್ಯ 31 ಜಿಲ್ಲಾ ಪಂಚಾಯತ್, 240ಕ್ಕೂ ಹೆಚ್ಚು ತಾಲ್ಲೂಕು ಪಂಚಾಯಿತಿ ಹಾಗೂ ಬಿಬಿಎಂಪಿಗೆ ತಕ್ಷಣವೇ ಚುನಾವಣೆ ನಡೆಸಲು ನಾವು ಸಿದ್ಧರಿದ್ದೇವೆ ಎಂದರು.
ಅವಧಿ ಮುಗಿದ ಆರು ತಿಂಗಳ ಒಳಗಾಗಿ ಚುನಾವಣೆ ನಡೆಸಬೇಕು. ಆದರೆ, ಈ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನಿಗದಿಪಡಿಸುವ ಸಂಬಂಧ ರಾಜ್ಯ ಸರ್ಕಾರ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳದಿರುವುದು ಗೊಂದಲಕ್ಕೆ ಕಾರಣವಾಗಿದೆ. ನ್ಯಾಯಾಲಯ ನೀಡಿರುವ ಆದೇಶವನ್ನು ಮೀಸಲಾತಿ ನಿಗದಿಪಡಿಸಲು ಕಳೆದ ಮೂರು ವರ್ಷಗಳಿಂದ ಸಾಧ್ಯವಾಗಿಲ್ಲ.
ಮೀಸಲಾತಿಗೆ ಸಂಬಂಧಿಸಿದಂತೆ ಒಂದು ಸ್ಪಷ್ಟ ತೀರ್ಮಾನ ತೆಗೆದುಕೊಂಡು ನ್ಯಾಯಾಲಯವನ್ನು ಕೋರಿದರೆ ಚುನಾವಣೆ ನಡೆಸಲು ಸಾಧ್ಯವಾಗುವುದು.
ಎಲ್ಲಾ ಪ್ರಕರಣಗಳು ಸುಪ್ರೀಂ ಕೋರ್ಟಿನ ಅಂಗಳದಲ್ಲಿದ್ದು, ನಮ್ಮ ಅರ್ಜಿಗಳನ್ನು ಇತ್ಯರ್ಥ ಪಡಿಸಿ ತೀರ್ಪು ನೀಡಿದರೆ ಚುನಾವಣೆ ನಡೆಸಬಹುದು ಎಂದರು.