ಹೆಚ್ಡಿಕೆ  ತಮ್ಮ  ಯು ಟರ್ನ್ ಹೇಳಿಕೆಗಳ ಬಗ್ಗೆ ಉತ್ತರ ನೀಡಲಿ: ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ : “ಕುಮಾರಸ್ವಾಮಿ ಅವರು ಈ ಹಿಂದೆ ತಾವೇ ನೀಡಿರುವ ಯು ಟರ್ನ್ ಹೇಳಿಕೆಗಳ ಬಗ್ಗೆ ಉತ್ತರ ನೀಡಲಿ. ಅವರು ನುಡಿದಂತೆ ನಡೆಯಲಿ, ಕೊಟ್ಟ ಮಾತು ತಪ್ಪುವುದನ್ನು ಬಿಡಲಿ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ಮಂಡ್ಯದ ಮೈಶುಗರ್ ಕಾರ್ಖಾನೆ ಮೈದಾನದಲ್ಲಿ ಮಂಗಳವಾರ ನಡೆದ ʼಜನಾಂದೋಲನ ಸಭೆʼ ಯಲ್ಲಿ ಈ ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ, ಅಶ್ವಥ್ ನಾರಾಯಣ್, ಯೋಗಿಶ್ವರ್ ಅವರು ಪರಸ್ಪರ ಆರೋಪ, ಪ್ರತ್ಯಾರೋಪ, ಯೂ ಟರ್ನ್ ಹೊಡೆದಿದ್ದ ಹೇಳಿಕೆಗಳನ್ನು ವಿಡಿಯೋ ಮೂಲಕ ತೆರೆಯ ಮೇಲೆ ಪ್ರದರ್ಶಿಸಿದ ನಂತರ ಡಿಸಿಎಂ ಶಿವಕುಮಾರ್ ಅವರು ಮಾತನಾಡಿದರು.

“ಜನ ತೀರ್ಪು ನೀಡಿದ್ದಾರೆ. ಆದ ಕಾರಣಕ್ಕೆ ಗಂಡು ಭೂಮಿ ಮಂಡ್ಯದಲ್ಲಿ ಗೆಲುವು ಕಂಡಿದ್ದೀರಿ. ಇಲ್ಲಿಗೆ ಬಂದು ನಿಮ್ಮ ತಿರುವು-ಮುರುವು ಹೇಳಿಕೆಗಳ ಬಗ್ಗೆ ಉತ್ತರ ನೀಡಬೇಕು. ನಿಮ್ಮ ಅಮೃತದ ನುಡಿಮುತ್ತುಗಳನ್ನು ಈ ನೆಲದ ಮೇಲೆ ಉದುರಿಸಬೇಕು. ಯೂಟರ್ನ್ ಕುಮಾರ, ಕ್ಷಣಕ್ಕೊಂದು ಮಾತು ಕ್ಷಣಕ್ಕೊಂದು ಬಣ್ಣ”ಎಂದು ಶಿವಕುಮಾರ್ ಅವರು ಕುಮಾರಸ್ವಾಮಿ ಅವರನ್ನು ಛೇಡಿಸಿದರು.

“ಮೋದಿ ಅವರ ಕೈ ಹಿಡಿದು ಕೇವಲ ಐದು ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಕುಮಾರಣ್ಣ ಹೇಳಿದ್ದರು. ಆದರೆ ಈಗ ನಾವು ಐದು ಜನ ಮಂತ್ರಿಗಳಿದ್ದೇವೆ, ನಾನು ಆ ರೀತಿ ಮಾತು ಕೊಡಲು ಮೂರ್ಖನೇ ಎಂದು ಹೇಳುತ್ತಿದ್ದಾರೆ. ಈ ಹೇಳಿಕೆಗಳಿಗೆ ಬಿಜೆಪಿ ಹಾಗೂ ಕುಮಾರಸ್ವಾಮಿ ಇಬ್ಬರೂ ಉತ್ತರ ಕೊಡಬೇಕು. 10ನಿಮಿಷದಲ್ಲಿ ನಾನು ತೋರಿಸಿದ ಮೈತ್ರಿ ನಾಯಕರ ಮಾತುಗಳಿಗೆ ಉತ್ತರ ಕೊಡಲಿ” ಎಂದು ಆಗ್ರಹಿಸಿದರು.

“ಕುಮಾರಸ್ವಾಮಿ ಅವರನ್ನು ಕಾವೇರಿ ನೀರಿನ ವಿಚಾರದ ಸಭೆಗೆ ಕರೆದಿದ್ದೆವು. ಅದಕ್ಕೆ ಅವರು ದ್ರಾಕ್ಷಿ, ಗೋಡಂಬಿ ತಿನ್ನಲು ಬರಬೇಕೆ ಎಂದಿದ್ದರು. ಆದರೆ ಅದೇ ದಿನ ಪಾಂಡವಪುರದಲ್ಲಿ ಬಾಡೂಟದಲ್ಲಿ ಭಾಗವಹಿಸಿದ್ದರು.  ಕಾವೇರಿ ನೀರು, ರೈತರು, ರಾಜ್ಯದ ಹಿತ ಅವರಿಗೆ ಮುಖ್ಯವಾಗಿರಲಿಲ್ಲ. ಕುಮಾರಣ್ಣ ಏನೂ ಬೇಕಾದರೂ ಮಾಡಿಕೊಳ್ಳಲಿ, ಆದರೆ ನಮಗೆ ಮಾತ್ರ ನಿಮ್ಮ ಹಿತ ಮುಖ್ಯ” ಎಂದರು.

 “148 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಅಲ್ಲದೇ 64 ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗಿದೆ. ಹೆಚ್ಚಾಗಿ ಸಮುದ್ರಕ್ಕೆ ಹರಿದು ಹೋದ ನೀರನ್ನು ಹಿಡಿದಿಡುವ ಸಲುವಾಗಿ ಮೇಕೆದಾಟು ಯೋಜನೆ ಸಾಕಾರಕ್ಕಾಗಿ ಪಾದಯಾತ್ರೆ ಮಾಡಿದೆವು” ಎಂದು ಹೇಳಿದರು

“ಕುಮಾರಸ್ವಾಮಿ ನನ್ನ ಕುಟುಂಬದ ಬಗ್ಗೆ ಮಾತನಾಡಲಿ ಎಂದೇ ಅವರ ಕುಟುಂಬದ ಬಗ್ಗೆ ಮಾತನಾಡುತ್ತಾ ಬರುತ್ತಿದ್ದೇನೆ. ನಿಮ್ಮ ಅತ್ತೆಯ ಕೆಐಡಿಬಿ ಭೂಮಿ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಇದೇ ಬಿಜೆಪಿಯವರು ನಿನ್ನ ಕುಟುಂಬಕ್ಕೆ ಹಂಚಿಕೆಯಾಗಿರುವ ಮುಡಾ ಸೈಟುಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ” ಎಂದು ಸವಾಲು ಹಾಕಿದರು.

“ನನ್ನ ಅಧ್ಯಕ್ಷತೆಯಲ್ಲಿ, ಸಿದ್ದರಾಮಯ್ಯ ಅವರ ಮುಖಂಡತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ. ಬಿಜೆಪಿಗೆ 65 ಜೆಡಿಎಸ್ ಗೆ 19 ಸ್ಥಾನಗಳು ಬಂದವು. ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರು ಎರಡನೇ ಬಾರಿ ಸಿಎಂ ಆಗಿದ್ದಾರೆ. ನಮ್ಮ ಸರ್ಕಾರವನ್ನು ಬೀಳಿಸಲು ಆಗುವುದಿಲ್ಲ. ಮುಂದಿನ 10 ವರ್ಷವೂ ಕಾಂಗ್ರೆಸ್ ಸರ್ಕಾರವಿರುತ್ತದೆ” ಎಂದರು.

ಕುಮಾರಸ್ವಾಮಿ ಮೇಲೆ ಮಾತ್ರ ನಂಬಿಕೆ

ಭಾಷಣದ ಮಧ್ಯೆ ವೇದಿಕೆಯ ಎಲ್ಇಡಿ ಮೂಲಕ ಮೈತ್ರಿ ನಾಯಕರ ಹೇಳಿಕೆಗಳ ವಿಡಿಯೋ ಪ್ರದರ್ಶಿಸಿದ  ನಂತರ ಮಾತು ಮುಂದುವರೆಸಿದ ಡಿಸಿಎಂ ಅವರು “ಯಾರ ಮಾತನ್ನು ನಂಬಬೇಡಿ ಎಂದು ಶಾಸಕ ಮಿತ್ರ ಪ್ರಿಯಾಕ್ ಖರ್ಗೆ ಅವರು ಹೇಳಿದರು. ಅವರ ಮಾತಿನಂತೆ ನನಗೆ ಮುನಿಯಪ್ಪ ಅವರು, ಚೆಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಲಕ್ಷ್ಮೀ ಹೆಬ್ಬಾಳಕರ್ ಸೇರಿದಂತೆ ಯಾರ ಮೇಲೂ ನಂಬಿಕೆಯಿಲ್ಲ ನನಗೆ ಕುಮಾರಸ್ವಾಮಿ ಅವರ ಮೇಲೆ, ಬೂಕನಕೆರೆ ಯಡಿಯೂರಪ್ಪ, ಯೋಗಿಶ್ವರ್, ಯತ್ನಾಳ್ ಮೇಲೆ ಮಾತ್ರ ನನಗೆ ನಂಬಿಕೆ” ಎಂದು ವ್ಯಂಗ್ಯವಾಡಿದರು.

 ಉದ್ಯೋಗ ಕೊಡಿಸಿದರೆ ಒಂದು ಕೋಟಿ ನಮಸ್ಕಾರ ಹೇಳುತ್ತೇನೆ

“ಎಸ್.ಎಂ.ಕೃಷ್ಣ ಅವರು ಮದ್ದೂರಿನ ಸೋಮನಹಳ್ಳಿ, ಮಂಡ್ಯದ ತೂಬಿನಕೆರೆಯಲ್ಲಿ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪನೆ ಮಾಡಿದರು. ಕುಮಾರಸ್ವಾಮಿ ಅವರೇ ಮೋದಿ ಅವರು ನಿಮ್ಮ ಮೇಲೆ ವಿಶ್ವಾಸವಿಟ್ಟು ಕೈಗಾರಿಕಾ ಮಂತ್ರಿ ಮಾಡಿದ್ದಾರೆ. ಮಂಡ್ಯ ಮತ್ತು ಹಾಸನ ಭಾಗದಲ್ಲಿ 10 ಸಾವಿರ ಉದ್ಯೋಗ ಸೃಷ್ಟಿ ಮಾಡುವ ಕೈಗಾರಿಕೆ ಮಾಡುತ್ತೇನೆ ಎಂದು ಹೇಳಿದ್ದೀರ. ನಮ್ಮ ಜನರಿಗೆ ಉದ್ಯೋಗ ಸಿಗುತ್ತದೆ ಎಂದರೆ ನಾವು ನಿಮಗೆ ಸಹಕಾರ ನೀಡುತ್ತೇವೆ. ನಮ್ಮ ಯುವಕರಿಗೆ ಕೆಲಸ ನೀಡಪ್ಪ ಒಂದು ಕೋಟಿ ನಮಸ್ಕಾರ ಹೇಳುತ್ತೇನೆ” ಎಂದರು.

ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಧಮ್ ಇಲ್ಲ

“ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಧಮ್ ಇಲ್ಲ. ಹೀಗಾಗಿ ಮಾಧ್ಯಮಗಳಲ್ಲಿ ಕೇವಲ ನನ್ನ ಮತ್ತು ಕುಮಾರಸ್ವಾಮಿ ಅವರ ವಿಚಾರವನ್ನೇ ಮಾಧ್ಯಮಗಳು ತೆಗೆದುಕೊಳ್ಳುತ್ತಿವೆ” ಪಾದಯಾತ್ರೆ ಬಗ್ಗೆ ಲೇವಡಿ ಮಾಡಿದರು.

ರಾಜ್ಯದ ಬಡವರ ವಿರುದ್ಧದ ಪಾದಯಾತ್ರೆ

“ಬಿಜೆಪಿ, ಜೆಡಿಎಸ್ ಪಾದಯಾತ್ರೆ ಮಾಡುತ್ತಿರುವುದು ನನ್ನ ಹಾಗೂ ಸಿದ್ದರಾಮಯ್ಯ ಅವರ ವಿರುದ್ಧವಲ್ಲ. ಈ ರಾಜ್ಯದ ಬಡಜನರ ವಿರುದ್ದ ಪಾದಯಾತ್ರೆ ಮಾಡುತ್ತಿದ್ದಾರೆ. ಈ ರಾಜ್ಯದ ಜನ ಕಾಂಗ್ರೆಸ್ ಗೆ ಶೇ. 43 ರಷ್ಟು ಮತ ನೀಡಿ 136 ಸ್ಥಾನ ನೀಡಿದ್ದಾರೆ. ಮಂಡ್ಯದಲ್ಲಿ 7 ಸ್ಥಾನ ಕೊಟ್ಟಿದ್ದಾರೆ. ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಇದನ್ನು ನಿಲ್ಲಿಸಲು ಸರ್ಕಾರ ಬೀಳಿಸುವ ಹುನ್ನಾರ ಮಾಡುತ್ತಿದ್ದಾರೆ. ಕುಮಾರಸ್ವಾಮಿ, ಯಡಿಯೂರಪ್ಪ ಅವರೇ ಸರ್ಕಾರ ಬೀಳಿಸುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ. ಅಶೋಕಣ್ಣ ನಿನ್ನ ಕೈಯಲ್ಲಿ ಧಮ್ ಇಲ್ಲ. ವಿಜಯೇಂದ್ರಣ್ಣ ಕಾಂಗ್ರೆಸ್ ಪಕ್ಷದ ಬಿಕ್ಷೆಯಿಂದ ವಿಧಾನಸಭೆಗೆ ಬಂದಿದ್ದೀಯ. ನಾಗರಾಜ್ ಗೌಡನಿಗೆ ಟಿಕೆಟ್ ನೀಡಿದ್ದರೆ ನೀನು ಗೆಲ್ಲುತ್ತಿರಲಿಲ್ಲ. ಇದನ್ನು ಗಮನದಲ್ಲಿಟ್ಟುಕೋ” ಎಂದು ಹೇಳಿದರು.

ವಿಜಯೇಂದ್ರ ನಿಮ್ಮ ತಂದೆ ರಾಜೀನಾಮೆ ಕೊಟ್ಟಿದ್ದೇಕೆ?

“ವಿಜಯೇಂದ್ರ ನನ್ನನ್ನು ಭ್ರಷ್ಟಾಚಾರದ ಪಿತಾಮಹ ಎನ್ನುತ್ತೀಯಲ್ಲ. ನಿಮ್ಮ ತಂದೆ ಏತಕ್ಕೆ ರಾಜಿನಾಮೆ ನೀಡಿದರು. ಲಕ್ಷ್ಮೀವಿಲಾಸ್ ಬ್ಯಾಂಕ್ ನಲ್ಲಿ ದುಬೈಯಲ್ಲಿ ಖಾತೆ ತೆರೆದು ಕೋಟ್ಯಂತರ ರೂಪಾಯಿ ವರ್ಗಾವಣೆಯಾಯಿತಲ್ಲ ಇನ್ನೂ ಏಕೆ ನಿಮ್ಮ ಸರ್ಕಾರ ಇದರ ಬಗ್ಗೆ ತನಿಖೆ ಮಾಡಿಸಿಲ್ಲ. ನಿನ್ನಿಂದಾಗಿ ನಿಮ್ಮ ತಂದೆಯಿಂದ ಏಕೆ ರಾಜಿನಾಮೆ ಕೊಡಿಸಿದರು. ತಂಗಿಮಕ್ಕಳು, ನೆಂಟರು ಸೇರಿದಂತೆ ಇತರರ ಹೆಸರಿನಲ್ಲಿ ಅಕ್ರಮ ನಡೆಯಿತಲ್ಲ ಅದರ ಬಗ್ಗೆ ಬಿಚ್ಚಿಡಲೇ? ಈ ವಿಚಾರಗಳೆಲ್ಲ ವಿಧಾನಸಭೆಯಲ್ಲಿ ಚರ್ಚೆಯಾಗಿ ದಾಖಲೆಗೆ ಹೋಗಬೇಕು. ಸರಿಯಾದ ಸಂದರ್ಭದಲ್ಲಿ ಇದರ ಬಗ್ಗೆ ಮಾತನಾಡುತ್ತೇನೆ” ಎಂದರು.

ಪಾಪ ವಿಮೋಚನಾ ಯಾತ್ರೆ

“ಬಿಜೆಪಿ, ಜೆಡಿಎಸ್ ಪಾದಯಾತ್ರೆಯು ಪಾಪ ವಿಮೋಚನೆಯ ಯಾತ್ರೆ. ನೀವು ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದೀರಿ. ಕುಮಾರಸ್ವಾಮಿ ಅವರೇ ನಿಮ್ಮ ಸಹೋದರರ ಆಸ್ತಿಪಟ್ಟಿ ಬಿಚ್ಚಿಡಿ ಎಂದರೂ ಬಿಚ್ಚಿಡುತ್ತಿಲ್ಲ. ನೀವು ಎಲ್ಲಿಗೆ ಬೇಕಾದರೂ ಚರ್ಚೆಗೆ ಕರೆಯಿರಿ ನಾನು ಸಿದ್ದನಿದ್ದೇನೆ” ಎಂದು ಹೇಳಿದರು.

“ಮಂಡ್ಯದ ಜನರ ಬದುಕಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಎಸ್.ಎಂ. ಕೃಷ್ಣ ಅವರ ಬಗ್ಗೆ ಕುಮಾರಸ್ವಾಮಿ ಮಾತನಾಡುತ್ತಾರೆ. ನಿಮಗೆ ಮಂಡ್ಯದ ನಾಯಕರಾದ ಮಾದೇಗೌಡರು ಹಾಗೂ ಕೃಷ್ಣ ಅವರ ಬಗ್ಗೆ ಮಾತನಾಡುವ ಹಕ್ಕಿಲ್ಲ. ರೈತರ ಮಕ್ಕಳ, ಕಾವೇರಿ ತಾಯಿಯ ನಾಡಿನ ರಕ್ಷಣೆಗಾಗಿ ಜನರು ನಮಗೆ 136 ಸ್ಥಾನ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ150 ಸ್ಥಾನಗಳನ್ನು ಗೆಲ್ಲುತ್ತೇವೆ. ನಿಮ್ಮ ಕುತಂತ್ರ, ಕೇಂದ್ರ ಸರ್ಕಾರದ ಕುತಂತ್ರ ಜನರ ತೀರ್ಪಿನ ಮುಂದೆ ನಡೆಯುವುದಿಲ್ಲ” ಎಂದು ವಾಗ್ದಾಳಿ ನಡೆಸಿದರು.

Facebook
Twitter
LinkedIn
WhatsApp
Telegram
Print
Email

Leave a Comment

Your email address will not be published. Required fields are marked *

Translate »
Scroll to Top