ರಾಯಚೂರು: ವಿಷ ಬೆರೆತ ಮಾಂಸದ ಊಟ ಸೇವನೆ ಮಾಡಿ ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿ ಇನ್ನೊಬ್ಬ ಮಗಳ ಸ್ಥಿತಿ ಚಿಂತಾ ಜನಕವಾಗಿರುವ ದಾರುಣ ಘಟನೆ ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ನಡೆದಿದೆ.
ಈ ಭೀಮಣ್ಣ (60), ಭೀಮಣ್ಣನ ಪತ್ನಿ ಈರಮ್ಮ (54), ಭೀಮಣ್ಣನ ಮಗ ಮಲ್ಲೇಶ್ (19), ಮಗಳು ಪಾರ್ವತಿ (17) ಸಾವಿಗೀಡಾದವರು. ಮತ್ತೊಬ್ಬ ಮಗಳು ಮಲ್ಲಮ್ಮ (18) ಎಂಬಾಕೆಯ ಸ್ಥಿತಿ ಗಂಭೀರವಾಗಿದ್ದು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ವಿಷ ಆಹಾರದಿಂದ ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಆದರೆ ಆತ್ಮಹತ್ಯೆ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಇದು ವಿಷಪೂರಿತ ಸೇವನೆಯಿಂದ ಆಗಿಲ್ಲ ಮಾರುಕಟ್ಟೆಯಲ್ಲಿ ಮಾಂಸ ಖರೀದಿ ಮಾಡಿ ಕೊಂಡು ಬಂದು ಮನೆಯಲ್ಲಿ ಅಡುಗೆ ಮಾಡಿ ಕುಟುಂದವರೆಲ್ಲ ಒಟ್ಟಾಗಿ ಕುಳಿತು ಊಟ ಮಾಡಿತ್ತು. ಅಡುಗೆ ಮಾಡುವ ವೇಳೆ ಅಡುಗೆಯಲ್ಲಿ ಹಲ್ಲಿ ಬಿದ್ದಿರಬಹುದು ಎಂಬ ಶಂಕೆಯಿದೆ.
ಸ್ಥಳಕ್ಕೆ ಸಿರವಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ. ಇದು ಫುಡ್ ಪಾಯ್ಸನ್ ಅಲ್ಲ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ಎಂಎಲ್‌ಸಿ ವರದಿ ಆಧರಿಸಿ ಫುಡ್ ಪಾಯ್ಸನ್ ಅಂತ ಪ್ರಾಥಮಿಕ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಆತ್ಮಹತ್ಯೆ ಆರೋಪದ ಹಿನ್ನೆಲೆಯಲ್ಲಿ ಆ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಘಟನೆಯ ಕುರಿತಂತೆ ಮಾತನಾಡಿರುವ ಜಿಲ್ಲಾಧಿಕಾರಿ ನಿತೀಶ್ ಅವರು ಆಹಾರದೊಂದಿಗೆ ಕೀಟನಾಶಕ ಮಿಶ್ರಣವಾಗಿರುವ ಸಂಭವವಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ನಿನ್ನೆ ಕುಟುಂಬದ ಮುಖ್ಯಸ್ಥ ಭೀಮಣ್ಣ ಈ ಊಟ ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಪತ್ನಿ, ಓರ್ವ ಮಗ ಮತ್ತೊಬ್ಬ ಪುತ್ರಿಯನ್ನು ರಿಮ್ಸ್‌ಗೆ ದಾಖಲಿಸಲಾಗಿತ್ತು. ಮೇಲ್ನೋಟಕ್ಕೆ ಆಹಾರದಲ್ಲಿ ಕ್ರಿಮಿನಾಶಕ ಅಲ್ಯೂಮೀನಿಯಂ ಪಾಸ್ಪ್ರೆಟ್ ಮಿಶ್ರಣವಾಗಿರುವ ಸಾಧ್ಯತೆ ಇದೆ. ಏಕೆಂದರೆ ಸಾವು ಸಂಭವಿಸಿದವರಲ್ಲಿ ಹಠಾತ್ ರಕ್ತದೊತ್ತಡ ಕಡಿಮೆಯಾಗಿರುವುದು ಹೈಪೋಗ್ಲೈಸೀಮಿಯಾ ಮತ್ತು ಲಿವರ್ ಕಾರ್ಯಾಚರಣೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿರುವುದು ಅಲ್ಯೂಮೀನಿಯಂ ಪಾಸ್ಪ್ರೆಟ್ ಸೇವಿಸಿದವರಲ್ಲಿ ಪ್ರಮುಖವಾಗಿ ಕಂಡು ಬರುವ ಲಕ್ಷಣಗಳಾಗಿವೆ. ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಈಗಾಗಲೇ ಶವಗಳನ್ನು ಶವ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ವರದಿ ಬಂದ ನಂತರವಷ್ಟೆ ಸಾವಿಗೆ ನಿರ್ದಿಷ್ಟ ಕಾರಣ ಏನು ಎಂಬುದು ತಿಳಿಯಲಿದೆ. ಸದ್ಯ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಭೀಮಣ್ಣ ಅವರ ಮತ್ತೊಬ್ಬ ಪುತ್ರಿಗೆ ಚಿಕಿತ್ಸೆಗೆ ಮುಂದುವರೆಸಲಾಗಿದೆ ಎಂದು ತಿಳಿಸಿದರು.