ತನು, ಮನ, ಭಾವ, ನಡೆ-ನುಡಿಗಳಲ್ಲಿ ಶುಚಿತ್ವ ಕಾಪಾಡುವವನು ನಿಜವಾದ ಜ್ಞಾನಿ

ಬೆಂಗಳೂರು : ತನು, ಮನ, ಭಾವ, ನಡೆ-ನುಡಿ, ಇವುಗಳಲ್ಲಿ ಶುಚಿತ್ವ ಕಾಪಾಡುವವನು ನಿಜವಾದ ಜ್ಞಾನಿ ಎಂದು ಶಿರೂರು ಮಠದ ಬಸವಲಿಂಗ ಮಹಾ ಸ್ವಾಮೀಜಿ ಅವರು ತಿಳಿಸಿದರು.

 

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಬೆಂಗಳೂರು ಇವರ ಸಹಯೋಗದಲ್ಲಿ ಗಾಂಧಿ ಭವನದಲ್ಲಿ ಚಿತ್ತರಗಿ ಇಳಕಲ್ ಶ್ರೀ ವಿಜಯ ಮಹಂತೇಶ್ವರ ಸಂಸ್ಥಾಪನದ ಪೂಜ್ಯ ಡಾ. ಮಹಾಂತ ಶಿವಯೋಗಿಗಳ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾದ ‘ವ್ಯಸನಮುಕ್ತ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಕ್ಕಳಲ್ಲಿ ಒಳ್ಳೆಯ ಹವ್ಯಾಸ ಬೆಳೆಯಬೇಕು. ನಮ್ಮಲ್ಲಿರುವ ಒಡವೆಯೆಂದರೆ ಜ್ಞಾನ ರತ್ನ. ಮಾನವೀಯತೆಯೇ ದೇವರು. ಇತರರಿಗೆ ಒಳಿತನ್ನು ಬಯಸಿ ಅವರ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸುವುದೇ ನಿಜವಾದ ಮನುಷ್ಯತ್ವ. ನಮ್ಮ ಮನಸ್ಸನ್ನು ಚಂಚಲಗೊಳಿಸದೆ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

 

          ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಮನೋವೈದ್ಯಕೀಯ ತಜ್ಞರಾದ ಡಾ.ಸಿ.ಆರ್. ಚಂದ್ರಶೇಖರ್ ಅವರು ಮಾತನಾಡಿ, ಸಿಗರೇಟ್, ಗಾಂಜಾ, ಮದ್ಯಪಾನಕ್ಕೆ ದಾಸರಾದವರು ತಮ್ಮ ಮೈಮನಸ್ಸುಗಳನ್ನು ಹಾಳುಮಾಡಿಕೊಳ್ಳುವರು. ಮುಖ್ಯವಾಗಿ ಇವು ಮೆದುಳಿಗೆ ಹಾನಿ ಉಂಟು ಮಾಡುತ್ತದೆ. ಇವುಗಳಿಗೆ ದಾಸರಾದವರು ತಮ್ಮ ಕುಟುಂಬ, ಹಣ, ಮನಸ್ಸಿನ ದೇಹದ ಸ್ವಾಸ್ಥ್ಯ  ಕಳೆದುಕೊಳ್ಳುವರು. ಅಲ್ಲದೆ ದೇಹದ ಮೇಲೆ ಮಾದಕ ವಸ್ತುಗಳು ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತವೆ. ಯುವ ಜನರು ಇವುಗಳ ಚಟಕ್ಕೆ ಬೀಳಬಾರದೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷರಾದ ನಾಡೋಜ ಡಾ. ವೂಡೇಂ. ಪಿ. ಕೃಷ್ಣ  ಅವರು ಮಾತನಾಡಿ, ಮದ್ಯ ಮಾರಾಟದಿಂದ ದೇಶ ಹಾಗೂ ರಾಜ್ಯಕ್ಕೆ ಕೋಟ್ಯಾಂತರ ರೂಗಳ ಆದಾಯ ಬರುತ್ತದೆ.  ಜನರನ್ನು ಅದರಲ್ಲೂ ಯುವಜನರನ್ನು ವ್ಯಸನಮುಕ್ತಗೊಳಿಸುವುದು ನಮ್ಮೆಲ್ಲರ ಗುರಿಯಾಗಬೇಕು. ದಿನದಲ್ಲಿ ಒಂದು ಗಂಟೆ ಇತರರ ಒಳಿತಿಗೆ ಶ್ರಮಿಸಿದರೆ ನಮಗೆ ನೆಮ್ಮದಿ ಆತ್ಮತೃಪ್ತಿ ಸಿಗುತ್ತದೆ. ಗಾಂಧೀಜಿ ಅಖಂಡ ಭಾರತ ಪ್ರವಾಸ ಮಾಡಿ ಬಡತನ, ವ್ಯಸನವನ್ನು ಮುಕ್ತವಾಗಿಸಲು ಹೋರಾಟ ನಡೆಸಿದರು. ಅದರಲ್ಲೂ ಗ್ರಾಮೀಣ ಜನರು ಮದ್ಯಪಾನಕ್ಕೆ ದಾಸರಾಗಿ ತಮ್ಮ ಹಾಗೂ ಕುಟುಂಬದವರ ಜೀವನವನ್ನು ಹಾಳು ಮಾಡುತ್ತಿರುವುದರ ವಿರುದ್ದ ದನಿ ಎತ್ತಿದರು. ಅವರು ವ್ಯಸನಮುಕ್ತ, ಕೋಮುಸೌಹಾರ್ದ, ಅಸ್ಪೃಶ್ಯತೆ ಮುಕ್ತ ಸಮಾಜವನ್ನು ಬಯಸಿ ಹೋರಾಟ ನಡೆಸಿದರು. ಯುವಜನರು ಮದ್ಯಪಾನ, ಮಾದಕ ವಸ್ತುಗಳನ್ನು ಸೇವಿಸದೆ ಸ್ವಾಸ್ಥ್ಯ ಸಮಾಜ ನಿರ್ಮಿಸಿ ಇತರರಿಗೂ ಈ ಕುರಿತು ತಿಳಿಸಬೇಕೆಂದರು.

 

          ಇದೇ ಸಂದರ್ಭದಲ್ಲಿ ಡಾ. ಸಿ.ಎನ್. ಚಂದ್ರಶೇಖರ್ ಬರೆದಿರುವ ‘ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಹೇಗೆ ಪರಿಹಾರ ಹೇಗೆ’ ಕಿರು ಹೊತ್ತಿಗೆಯನ್ನು ಗಣ್ಯರು ಬಿಡುಗಡೆಗೊಳಿಸಿದರು. 

ಕಾರ್ಯಕ್ರಮದಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಮನೋವೈದ್ಯಕೀಯ ತಜ್ಞರಾದ  ಡಾ.ಗುರುಪ್ರಸಾದ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ನಿರ್ದೇಶಕರಾದ ಡಾ.ಶಿವರಾಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರಾದ ಬಿ.ಕೆ.ರಾಮಲಿಂಗಪ್ಪ, ಕರ್ನಾಟಕ ಮಧ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿಗಳಾದ ಎಸ್.ಎನ್.ಮಹೇಶ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top