ಭ್ರಷ್ಟ ಹಾಗೂ ಸ್ವಜನ ಪಕ್ಷಪಾತಿ ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ

ಬೆಂಗಳೂರು : ಸಿದ್ದರಾಮಯ್ಯ ನವರು ಭಾಗಿಯಾಗಿರುವ ಮೈಸೂರು ಮೂಡಾ ಹಗರಣ ಖಂಡಿಸಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಸೇರಿದಂತೆ ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸೌಧದಲ್ಲಿ ಉಭಯ ಸದನಗಳ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರೊಂದಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದರು. 

ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಮೀಸಲಾಗಿದ್ದ ಮಹರ್ಷಿ ವಾಲ್ಮೀಕಿ ನಿಗಮದ 187 ಕೋಟಿ ಹಣ ದರೋಡೆ ಮಾಡಿ ಈಗಾಗಲೇ ‘ಇಡಿ ಇಕ್ಕಳ’ಕ್ಕೆ ಸಿಲುಕಿ ಶಾಸಕ ಬಿ ನಾಗೇಂದ್ರ ಜೈಲು ಸೇರಿರುವುದರ ಹಿಂದೆಯೇ ಸರತಿ ಸಾಲಿನಲ್ಲಿ ನಿಂತು ಜೈಲಿನ ಬಾಗಿಲು ತಟ್ಟುತ್ತಿದ್ದೀರಿ. •ವಿತ್ತ ಖಾತೆಯನ್ನು ಹೊತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಈ ಹಗರಣದ ಬಗ್ಗೆ ತಮಗೇನೂ ತಿಳಿದಿಲ್ಲ’ ಗುಳುಂ’ ಆಗಿರುವ ವಾಲ್ಮೀಕಿ ನಿಗಮದ 187 ಕೋಟಿ ರೂ.ಗಳ ರಕ್ಷಣೆಯ ಹೊಣೆ ನನ್ನದಲ್ಲ ಎಂದು ಹೇಳುತ್ತಿರುವುದು ಬರೀ ನೈತಿಕತೆಯ ಪ್ರಶ್ನೆ ಅಲ್ಲವೇ ಅಲ್ಲ. ಜವಾಬ್ದಾರಿಯಿಂದ ನುಣುಕಿಕೊಳ್ಳುವ ಕುತಂತ್ರದ ಯೋಚನೆಯಾಗಿದೆ, ಇದಕ್ಕೆ ತನಿಖೆಯ ಹಾದಿಯಲ್ಲಿ ನಿಮಗೆ ತಕ್ಕ ಉತ್ತರ ದೊರಕಲಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದರು.

ಪರಿಶಿಷ್ಟ ಜಾತಿಗಳ ಕಲ್ಯಾಣ ಕಾರ್ಯಕ್ಕೆ ಮಾತ್ರ ಬಳಸಬೇಕಿದ್ದ ಸಾವಿರಾರು ಕೋಟಿ ರೂಪಾಯಿಗಳನ್ನು ಅನ್ಯ ಕಾರ್ಯಗಳಿಗೆ ಬಳಸಿ ನೀವು ಮತ್ತು ನಿಮ್ಮ ಸರ್ಕಾರ ಪರಿಶಿಷ್ಟರ ದ್ರೋಹಿಯಾಗಿದ್ದೀರಿ, ನಿಮಗೆ ಪರಿಶಿಷ್ಟ ಸಮುದಾಯಗಳೇ ಪಾಠ ಕಲಿಸಲಿವೆ. ನಿಮ್ಮ ತವರು ಜಿಲ್ಲೆ ಮೈಸೂರಿನಲ್ಲಿ ಸೂರು ಹೊಂದುವ ಜೀವಮಾನದ ಕನಸನ್ನು ನನಸು ಮಾಡಿಕೊಳ್ಳಲು ದಶಕಗಳಿಂದ ಕಾದು ಕುಳಿತಿದ್ದ ಲಕ್ಷಕ್ಕೂ ಹೆಚ್ಚಿನ ಅರ್ಜಿದಾರ ವಸತಿ ರಹಿತರು ಹಾಗೂ ಬಡವರಿಗೆ ದಕ್ಕಬೇಕಾದ ಮೂಡಾ ನಿವೇಶನಗಳನ್ನು ಬಲಾಢ್ಯರು, ನೆಲಬಾಕರು, ಪ್ರಭಾವಿಗಳಿಗೆ ನೀತಿ ನಿಯಮಗಳನ್ನು ಮೀರಿ ಕೋಟ್ಯಂತರ ರೂಪಾಯಿ ಬೆಲೆಬಾಳುವ 5000ಕ್ಕೂ ಹೆಚ್ಚು ನಿವೇಶನಗಳನ್ನು ಧಾರೆ ಎರೆದು ಕೊಟ್ಟಿರುವ ನಿವೇಶನ ಅಕ್ರಮದ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ನೀವು ಏಕೆ ಹಿಂದೇಟು ಹಾಕುತ್ತಿದ್ದೀರಿ ? ಏಕೆಂದರೆ ಈ ಹಗರಣದ ಪಿತಾಮಹ ನೀವೇ ಆಗಿದ್ದೀರಿ, ನಿಮ್ಮ ಪತ್ನಿಯವರ ಹೆಸರಿನಲ್ಲಿ ಬೆಳೆಬಾಳುವ 14 ನಿವೇಶನಗಳನ್ನು ನಿಯಮ ಬಾಹಿರವಾಗಿ ಪಡೆದುಕೊಂಡು ನೈಜ ಫಲಾನು ಭವಿ ಪರಿಶಿಷ್ಟ ಕುಟುಂಬವನ್ನು ವಂಚಿಸಿ ನಾಡಿನ ಮುಖ್ಯಮಂತ್ರಿ ಸ್ಥಾನದ ಘನತೆ ಗೌರವಗಳನ್ನು ಗಾಳಿಗೆ ತೂರಿ, ಸ್ವಜನ ಪಕ್ಷಪಾತ ಹಾಗೂ ಭ್ರಷ್ಟತೆಯ ಕಿರೀಟ ಧರಿಸಿ ಭಂಡತನದಿಂದ ನಿಮ್ಮನ್ನು ನೀವೇ ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.

ನಿಮ್ಮ ಅಕ್ರಮಗಳ ವಿರುದ್ಧ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಡಲು ಅವಕಾಶ ನೀಡದೇ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ದಮನ ಮಾಡುತ್ತಿದ್ದೀರಿ, ಮತ್ತೊಂದೆಡೆ ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದ ಉಭಯ ಸದನಗಳಲ್ಲೂ ವಿರೋಧ ಪಕ್ಷವಾಗಿ ಜನಪರ ದನಿಯಾಗಿ ನಿಂತು ಹಗರಣವನ್ನು ಬಯಲು ಮಾಡಲು ಅವಕಾಶ ನೀಡದೆ ಸಾಂವಿಧಾನಿಕ ಹಕ್ಕಿನ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದೀರಿ. ಪಕ್ಷಪಾತಿ ಸ್ಪೀಕರ್ ಅವರು ನಿಮ್ಮ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಶಾಸಕಾಂಗ ವ್ಯವಸ್ಥೆಯ ಕಪ್ಪು ಚುಕ್ಕೆಯಾಗಿದೆ. 70 ರ ದಶಕದ ತುರ್ತು ಪರಿಸ್ಥಿತಿಯ ಕರಾಳ ಸಂದರ್ಭವನ್ನು ಮತ್ತೆ ಪ್ರತಿಷ್ಠಾಪಿಸಲು ನೀವು ಹೊರಟಂತಿದೆ. ನಿಮ್ಮ ದಮನಕಾರಿ ಧೋರಣೆ ವಿರುದ್ಧ ಅಹೋರಾತ್ರಿ ಧರಣಿ ಅಷ್ಟೇ ಅಲ್ಲ, ಜನತಂತ್ರ ವ್ಯವಸ್ಥೆಯನ್ನು ಕತ್ತಲು ಮಾಡಲು ಹೊರಟಿರುವ, ಭ್ರಷ್ಟಾಚಾರವನ್ನು ರಕ್ಷಿಸುತ್ತಿರುವ ನಿಮ್ಮ ನೇತೃತ್ವದ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.

 

ಈ ಸಂದರ್ಭದಲ್ಲಿ ಎನ್.ರವಿಕುಮಾರ್, ನಾರಾಯಣಸ್ವಾಮಿ, ಪ್ರಭು ಚೌಹಾಣ್‍, ಭೈರತಿ ಬಸವರಾಜ್‍ ಸೇರಿದಂತೆ ಇನ್ನಿತರೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top