ಬೆಂಗಳೂರು: ಕೆ.ಆರ್.ಎಸ್ ಜಲಾಶಯದಿಂದ ಸುಮಾರು 50,000 ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಬಿಡಲಾಗುವುದು.
ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಹಾಗೂ ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಾನಗಳಿಗೆ ತೆರಳಲು ಕಾವೇರಿ ನೀರವರಿ ನಿಗಮದ ಕಾರ್ಯಪಾಲಕ ಅಭಿಯಂತರರು ಮನವಿ ಮಾಡಿದ್ದಾರೆ
ಮಂಡ್ಯ ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್ ಅಣೆಕಟ್ಟು ಭರ್ತಿಯ ಸನಿಹಕ್ಕೆ ಬಂದಿದ್ದು, 120 ಅಡಿ ದಾಟಿದೆ.
ಅಣೆಕಟ್ಟೆ ತುಂಬಲು ಇನ್ನು ಕೇವಲ ನಾಲ್ಕು ಅಡಿ ಬಾಕಿ ಇದೆ. ಕಳೆದ ಒಂದು ವಾರದಲ್ಲಿ 15 ಟಿಎಂಸಿಗೂ ಹೆಚ್ಚು ನೀರು ಜಲಾಶಯಕ್ಕೆ ಹರಿದು ಬಂದಿದೆ. ಇಂದು 51 ಸಾವಿರದ 375 ಕ್ಯೂಸೆಕ್ ಒಳಹರಿವಿದ್ದು, 4 ಸಾವಿರದ 714 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಕಾವೇರಿ ನದಿ ಪಾತ್ರದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟೆಯಲ್ಲಿ ಈ ಬಾರಿ ಹೆಚ್ಚಿನ ನೀರು ಸಂಗ್ರಹವಾಗಿದೆ. ಈಗಾಗಲೇ ಒಂದು ಸಾವಿರ ಕ್ಯೂಸೆಕ್ ನೀರನ್ನು ಅಣೆಕಟ್ಟೆಯಿಂದ ನದಿಗೆ ಹರಿಸಲಾಗುತ್ತಿದೆ. ಅಣೆಕಟ್ಟೆ ಭರ್ತಿಯಾದ ಮೇಲೆ ಇನ್ನೂ ಹೆಚ್ಚಿನ ನೀರನ್ನು ನದಿಗೆ ಬಿಡಲಿದ್ದು, ಕಾವೇರಿ ನದಿ ಸನಿಹದ ಪ್ರವಾಸಿ ತಾಣಗಳು ಮತ್ತು ಗ್ರಾಮಗಳಲ್ಲಿ ನದಿಗೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.