ಮಾಧ್ಯಮಗಳ ಮುಂದೆ ಮಾತನಾಡುವವರು, ಹೈಕಮಾಂಡ್ ಬಳಿ ಹೋಗಿ ಮಾತನಾಡಲಿ: ಡಿ.ಕೆ.ಶಿ

ಬೆಂಗಳೂರು:  “ಹೆಚ್ಚುವರಿ ಡಿಸಿಎಂ ವಿಚಾರವಾಗಿ ಮಾಧ್ಯಮಗಳ ಮುಂದೆ ಮಾತನಾಡುತ್ತಿರುವವರು, ಹೈಕಮಾಂಡ್ ನಾಯಕರ ಬಳಿ ಹೋಗಿ ಮಾತನಾಡಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

ಹೆಚ್ಚುವರಿ ಡಿಸಿಎಂ ಚರ್ಚೆ ಕುರಿತಾಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತನಾಡುತ್ತೀರಾ ಎಂದು ಕೇಳಿದಾಗ, “ಮಾಧ್ಯಮಗಳು ಪ್ರಚಾರ ಮಾಡುತ್ತವೇ ಹೊರತು, ಪರಿಹಾರ ನೀಡುವುದಿಲ್ಲ. ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ನಾನು ಕೂಡ ಮಾಧ್ಯಮಗಳ ಮುಂದೆ ಚರ್ಚೆ ಮಾಡುವುದಿಲ್ಲ. ಯಾರು ಬೇಕಾದರೂ ಹೈಕಮಾಂಡ್ ನಾಯಕರ ಬಳಿ ಹೋಗಿ ಪರಿಹಾರ ಹುಡುಕಿಕೊಂಡು ಬರಲಿ” ಎಂದರು.

 

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವಾಗಿ ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಬಹಳ ಸಂತೋಷ. ಸಮಯ ವ್ಯರ್ಥ ಮಾಡಬಾರದು. ಅವರಿಗೆ ಪರಿಹಾರ ಕಂಡುಕೊಳ್ಳಲು ಎಲ್ಲಿ ಹೋಗಬೇಕೋ ಅಲ್ಲಿ ಹೋಗಲಿ. ಆರೋಗ್ಯ ಸರಿಯಿಲ್ಲ ಎಂದು ವೈದ್ಯರ ಬಳಿ ಹೋದರೆ  ಔಷಧಿ ನೀಡುತ್ತಾರೆ. ಅದೇ ರೀತಿ ಅವರು ಎಲ್ಲಾದರೂ ಪರಿಹಾರವನ್ನು ಹುಡುಕಿಕೊಂಡು ಹೋಗಲಿ” ಎಂದು ತಿಳಿಸಿದರು.

ಮುಂದಿನ ವರ್ಷದಿಂದ ಇಂತಹ ತಪ್ಪು ಆಗದಂತೆ ಕ್ರಮ:

ಕೆಂಪೇಗೌಡರ ಜಯಂತಿಗೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡದ ವಿಚಾರವಾಗಿ ರಾಜ್ಯ ಒಕ್ಕಲಿಗರ ಸಂಘ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, “ಯಾರನ್ನೂ ಅಗೌರವಿಸುವ ಉದ್ದೇಶ ನಮಗಿಲ್ಲ. ಒಕ್ಕಲಿಗ ಸಮುದಾಯದ ನಾಯಕರಾಗಿ ಎಸ್.ಎಂ ಕೃಷ್ಣ, ಸದಾನಂದ ಗೌಡರು, ದೇವೇಗೌಡರು, ಕುಮಾರಸ್ವಾಮಿ ಅವರು ಇದ್ದಾರೆ. ಪ್ರಾಧಿಕಾರದ ಅಧಿಕಾರಿಗಳು ಶಿಷ್ಟಾಚಾರವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ವ್ಯಾಪ್ತಿಯ ಜನಪ್ರತಿನಿಧಿಗಳನ್ನು ಮಾತ್ರ ಆಹ್ವಾನ ನೀಡಿದ್ದಾರೆ. ಕುಮಾರಸ್ವಾಮಿ ಮಂಡ್ಯಕ್ಕೆ ಹೋಗಿದ್ದು, ದೇವೇಗೌಡರು ಹಾಸನದ ಪ್ರತಿನಿಧಿಯಾಗಿದ್ದಾರೆ. ಈ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಿತ್ತು. ಮುಂದಿನ ವರ್ಷ ಈ ರೀತಿಯ ತಪ್ಪುಗಳು ನಡೆಯದಂತೆ ಸರಿಪಡಿಸಲಾಗುವುದು.

 

ಒಕ್ಕಲಿಗ ಸಮುದಾಯದವರ ಜತೆಗೆ ಬೇರೆ ಸಮುದಾಯದ ಮುಖಂಡರು ಹಾಗೂ ಸ್ವಾಮೀಜಿಗಳನ್ನು ಆಹ್ವಾನಿಸುವಂತೆ ಸೂಚಿಸಲಾಗಿದೆ. ಕೆಂಪೇಗೌಡರು ಎಲ್ಲ ಸಮುದಾಯದವರಿಗೂ ಸೇರಿ ಬೆಂಗಳೂರನ್ನು ಕಟ್ಟಿದ್ದಾರೆ. ಹೀಗಾಗಿ ಎಲ್ಲ ಸಮುದಾಯದವರು ಕೆಂಪೇಗೌಡ ಜಂಯತಿ ಆಚರಣೆಯಲ್ಲಿ ಭಾಗಿಯಾಗಬೇಕು. ಇದರಲ್ಲಿ ರಾಜಕೀಯ ಮಾಡುವವರು ಮಾಡಲಿ” ಎಂದು ತಿಳಿಸಿದರು.

ಕೆಂಪೇಗೌಡ ಜಯಂತಿ ವಿಜೃಂಭಣೆಯಿಂದ ಆಚರಿಸಲು ಹೆಚ್ಚಿನ ಅನುದಾನ

ರಾಜ್ಯದೆಲ್ಲೆಡೆ ಕೆಂಪೇಗೌಡರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಕನ್ನಡ ಮತ್ತು ಸಂಸ್ಕತಿ ಇಲಾಖೆಯಿಂದ ನೀಡುವ 25 ಸಾವಿರದ ಜತೆಗೆ ಬಿಬಿಎಂಪಿಯಿಂದ 1 ಲಕ್ಷ ಅನುದಾನ ನೀಡಲಾಗುವುದು. ಕೆಂಪೇಗೌಡರು ಎಲ್ಲರ ಆಸ್ತಿ. ಒಂದು ಜಾತಿ ಹಾಗೂ ಧರ್ಮಕ್ಕೆ ಸೇರಿದವರಲ್ಲ. ಇವರ ಬಗ್ಗೆ ಹೆಚ್ಚಿನ ಪ್ರಚಾರ ಮಾಡಲು ನಮ್ಮ ಸರ್ಕಾರ ಮುಂದಾಗಿದೆ.

ರಾಜ್ಯದ ಸಮಸ್ಯೆ ಬಗ್ಗೆ ಸಂಸದರ ಜತೆ ಚರ್ಚೆ:

 

ದೆಹಲಿ ಪ್ರಯಾಣದ ಬಗ್ಗೆ ಕೇಳಿದಾಗ, “ಕರ್ನಾಟಕ ರಾಜ್ಯದಿಂದ ನೂತನವಾಗಿ ಆಯ್ಕೆಯಾಗಿರುವ ಸಂಸದರನ್ನು ಭೇಟಿ ಮಾಡಿ, ನಮ್ಮ ರಾಜ್ಯದಲ್ಲಿ ಬಾಕಿ ಉಳಿದಿರುವ ಕೇಂದ್ರದ ಯೋಜನೆಗಳು, ಅನುದಾನ ಬಾಕಿ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ರಾಜ್ಯದ ಹಿತಕ್ಕಾಗಿ ಧ್ವನಿ ಎತ್ತುವಂತೆ ಚರ್ಚೆ ಮಾಡಲಾಗುವುದು” ಎಂದು ತಿಳಿಸಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top