ಬೆಂಗಳೂರು: ಕಲುಶಿತ ನೀರಿನ ಸಂಸ್ಕರಣೆ ಹಾಗೂ ಮರುಬಳಕೆ ಕುರಿತು ಸಾರ್ವಜನಿಕರು ಹಾಗೂ ಉದ್ದಿಮೆದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ವಾಟರ್ ಇಂಡಿಯಾ ಕಂಪನಿಯು ನಗರದ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಮ್ಯಾನ್ಫೋ ಕನ್ವೆಂಷನ್ ಸೆಂಟರ್ನಲ್ಲಿ ಮೂರು ದಿನಗಳು ಮೇಳ ಜೂನ್ 27ರಿಂದ 29ರ ವರೆಗೂ ಆಯೋಜಿಸಿರುವ ‘ವಾಟರ್ ಎಕ್ಸ್ಪೋ 2024’ಕ್ಕೆ ಚಾಲನೆ ನೀಡಲಾಯಿತು. ಗ್ರಾಹಕರೇ ಈ ಪ್ರದರ್ಶನವನ್ನು ಉದ್ಘಾಟಿಸಿ ಚಾಲನೆ ನೀಡಿದ್ದು ವಿಶೇಷವಾಗಿತ್ತು.
‘ವಾಟರ್ ಎಕ್ಸ್ಪೋ 2024’ ಸಾವಿರಾರು ಮಂದಿ ಸಾರ್ವಜನಿಕರು ಹಾಗೂ ಉದ್ದಿಮೆದಾರರು ಭಾಗಿಯಾಗಿದ್ದು, ತಮ್ಮ ದಿನ ನಿತ್ಯದ ಬಳಕೆಯ ನಡುವೆಯೂ ನೀರಿನ ಶೇಖರಣೆ ಹಾಗೂ ಸಂಸ್ಕರಣೆ (ನೀರನ್ನು ಹೇಗೆ ಉಳಿಸುವುದು ಹಾಗೂ ಅಂತರ ಜಲದ ಮಟ್ಟ ಹೆಚ್ಚಿಸುವುದು) ಎಂಬುದರ ಬಗ್ಗೆ ಈ ವಸ್ತುಪ್ರದರ್ಶನದಲ್ಲಿ ತಿಳಿದುಕೊಂಡರು. ಈ ಪ್ರದರ್ಶನವು ಇದೇ27ರಿಂದ 29ವರೆಗೂ ನಡೆಯಲಿದೆ.
ವಿಶ್ವದೆಲ್ಲೆಡೆ ಜಾಗತಿಕ ತಾಪಮಾನ ಹೆಚ್ಚುತ್ತಿದ್ದು, ಅದರ ಪರಿಣಾಮ ಪರೋಕ್ಷವಾಗಿ ನೀರಿನ ಮೇಲೆ ಬೀರುತ್ತಿದೆ. ಹೀಗಾಗಿ, ಬಳಕೆಗೆ ಯೋಗ್ಯವಾದ ನೀರಿನ ಲಭ್ಯತೆ ಪ್ರಮಾಣವು ದಿನೇ ದಿನೇ ಕುಗ್ಗುತ್ತಿದೆ. ನೀರನ್ನು ಜೀವ ಜಲ ಎನ್ನುತ್ತಾರೆ. ಅತ್ಯಮೂಲ್ಯವಾದ ಈ ನೀರು ಈಗೀಗ ಕುಡಿಯಲು ಸಹ ಸಿಗದ ಪರಿಸ್ಥಿತಿ ದೇಶ ಹಾಗೂ ವಿದೇಶದ ಹಲವೆಡೆ ಕಂಡುಬಂದಿದೆ.
ಇಂತಹ ಪರಿಸ್ಥಿತಿಯಲ್ಲಿ ನೀರಿನ ಸದ್ಬಳಕೆ ಹಾಗೂ ಬಳಕೆಯಾದ ನೀರಿನ ಮರುಬಳಕೆ ಅಗತ್ಯ. ಹೀಗಾಗಿ, ನೀರಿನ ಮಹತ್ವ ಸಾರುವ ಹಾಗೂ ಅದಕ್ಕಿರುವ ಮಾರ್ಗೋಪಾಯಗಳ ಕುರಿತು ಈ ವಸ್ತು ಪ್ರದರ್ಶನದಲ್ಲಿ ತಿಳಿಸಲಾಗುತ್ತಿದೆ. ಮಲೀನಗೊಂಡ ನೀರಿನ ಮರುಬಳಕೆ, ಶುದ್ಧೀಕರಣ ಕುರಿತು ಸುಮಾರು 100ಕ್ಕೂ ಹೆಚ್ಚಿನ ನೀರಿನ ಶುದ್ದೀಕರಣ ದೇಶ ಹಾಗೂ ವಿದೇಶಿ ಕಂಪನಿಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದು, ಜೊತೆಗೆ ತಾವು ತಯಾರಿಸಿದ ನೀರಿನ ಬಳಕೆಗೆ ನೆರವಾಗುವ ಉತ್ಪನ್ನಗಳ ಮಾದರಿಯ ಪ್ರಾತ್ಯಕ್ಷಿಕೆಯನ್ನು ಇಲ್ಲಿ ಪ್ರದರ್ಶಿಸುತ್ತಿವೆ.
100ಕ್ಕೂ ಅಧಿಕ ಮಳಿಗೆಗಳಲ್ಲಿ ವಿವಿಧ ಕಂಪನಿಗಳ ತಮ್ಮ ಮಾದರಿಗಳನ್ನು ಇಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಜಪಾನ್, ಜರ್ಮನ್, ಚೀನಾ ಭಾರತ ಸೇರಿದಂತೆ ಹಲವು ದೇಶಗಳ ಹಾಗೂ ಭಾರತದ ಹಲವು ರಾಜ್ಯಗಳ ಕಂಪನಿಗಳು ಪ್ರದರ್ಶನದಲ್ಲಿ ಭಾಗಿಯಾಗಿವೆ.
ವಾಟರ್ ಬಾಟಲ್ ತಯಾರಿಕ ಯಂತ್ರಗಳು, ನೀರು ಶುದ್ಧೀಕರಣದ ಅತ್ಯಾಧುನಿಕ ಯಂತ್ರಗಳು (ಸಣ್ಣ ಪ್ರಮಾಣದಿಂದ ದೊಡ್ಡ ಪ್ರಮಾಣದಲ್ಲಿ ನೀರು ಶುದ್ಧೀಕರಣ), ಕಲುಷಿತ ನೀರಿನ ಸಂಸ್ಕರಣೆಯ ವಿನೂತನ ಮಾದರಿಗಳು, ಮನೆಗಳಲ್ಲಿ ಬಳಕೆಯಲ್ಲಿರುವ ನೀರು ಶುದ್ಧೀಕರಣ ಯಂತ್ರಗಳು ಇಲ್ಲಿ ಕಾಣಬಹುದಾಗಿದೆ.
ನೀರಿನ ಬಳಕೆ, ಕುಡಿಯುವ ನೀರಿನ ಶುದ್ಧೀಕರಣ ಹಾಗೂ ನೀರು ಮಿತವ್ಯಯ ಸೇರಿದಂತೆ ಜಲಸಂಪನ್ಮೂಲ ಸದ್ಬಳಕೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯೂ ಒಂದೇ ಸೂರಿನಡಿ ಲಭಿಸುವಂತೆ ಮಾಡುವ ಸಲುವಾಗಿ ವಾಟರ್ ಇಂಡಿಯಾ ಸಂಸ್ಥೆಯು ಆಯೋಜಿಸಿದೆ. ನೀರಿನ ಮಿತಬಳಕೆ, ಕೊಳವೆ ಜೋಡಣೆ, ಶುದ್ಧ ನೀರಿನ ಘಟಕ ಸೇರಿದಂತೆ ಹತ್ತು ಹಲವು ಬಗೆಯ ತಂತ್ರಜ್ಞಾನಗಳು ಹಾಗೂ ಮಾರ್ಗೋಪಾಯಗಳು ಇಲ್ಲಿ ಲಭ್ಯ. ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಗೆ ಅನುಕೂಲವಾಗುವಂಥ ಉತ್ಪನ್ನಗಳು ಇಲ್ಲಿವೆ.
ಮಳೆ ನೀರು ಮತ್ತು ಚರಂಡಿ ನೀರನ್ನು ಶುದ್ದಿಕರಿಸಿ ಮತ್ತೇ ಮನೆಗಳಿಗೆ ಮರುಬಳಕೆ ಮಾಡುವ ಯಂತ್ರವನ್ನು ಪ್ರದರ್ಶನ ಮಾಡಲಾಗಿದೆ . ಸಾರ್ವಜನಿಕರು,ಬೃಹತ್ ಕಂಪನಿಗಳು ಇಂತಹ ಯಂತ್ರ ಖರೀದಿಸಿದರೆ ನೀರನ್ನು ಮರುಬಳಕೆ ಮಾಡಿ ಪ್ರಕೃತಿ, ಪರಿಸರ ಉಳಿಸಬಹುದು.
ಸಣ್ಣ ಪ್ರಮಾಣದ ಕೈಗಾರಿಕಾ ಸಂಸ್ಥೆಗಳೂ ವಿವಿಧ ಮಾದರಿಗಳನ್ನು ಪ್ರದರ್ಶನಕ್ಕಿಟ್ಟಿವೆ. ಇಲ್ಲಿನ ಬಹುತೇಕ ಯಂತ್ರೋಪಕರಣಗಳು ಕೇಂದ್ರಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯಡಿ ಹೊಸದಾಗಿ ತಯಾರಿಸಲಾಗಿದೆ ಎಂದು ಆಯೋಜಕ ರಾಜೇಶ್ ರವರು ತಿಳಿಸಿದ್ದಾರೆ.