ನೀಟ್ ಪರೀಕ್ಷೆ  ಅಕ್ರಮ ಬಹುದೊಡ್ಡ ಹಗರಣ: ಸಚಿವ ಶರಣಪ್ರಕಾಶ್ ಪಾಟೀಲ್

ರಾಯಚೂರು: ವೈದ್ಯಕೀಯ ಪ್ರವೇಶಾತಿಗೆ ನಡೆಯುವ ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ಪ್ರಧಾನಿ ನರೇಂದ್ರಮೋದಿ ಸರ್ಕಾರದ ಬಹುದೊಡ್ಡ  ಹಗರಣ ಇದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ   ಹಾಗೂ ಜೀವನೋಪಾಯ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಆರೋಪಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನದಿಂದ ದಿನಕ್ಕೆ ನೀಟ್ ಪರೀಕ್ಷೆಯಲ್ಲಿ ಹೊಸ ಹೊಸ ಪ್ರಕರಣಗಳು ಆಚೆಗೆ ಬರುತ್ತಿವೆ. ಕೇಂದ್ರ ಸರ್ಕಾರದ ವೈಫಲ್ಯಗಳಿಂದಾಗಿ ಇತಿಹಾಸದಲ್ಲಿ ಮೊದಲ ಬಾರಿಗೆ ನೀಟ್ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವುದು ಆಶ್ಚರ್ಯ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀಟ್-ಯುಜಿ ಹಾಗೂ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕೆಂದು ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತವೆ. ಆದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಷಾದಿಸಿದರು.

ಕೇಂದ್ರ ಸರ್ಕಾರದ ನಡೆವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ  ಯಾರನ್ನೋ ರಕ್ಷಣೆ ಮಾಡಲು ಹೊರಟಂತಿದೆ. ಇದರಲ್ಲಿ ಪಕ್ಷ ರಾಜಕಾರಣ ಬೇಡವೇ ಬೇಡ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ  ಅಡಗಿರುವುದರಿಂದ ಸಿಬಿಐ ತನಿಖೆಗೆ ವಹಿಸಬೇಕು, ಯಾರೇ ಭಾಗಿಯಾಗಿದ್ದರೂ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಬೇಜಾವಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರದ ನಿಲುವುಗಳು ಬಹಳ ಅನುಮಾನಸ್ಪದವಾಗಿ ಕಾಣುತ್ತಿದೆ. ದೊಡ್ಡ ಮಟ್ಟದ ಹಗರಣವಾಗಿದೆ ಎಂದು ಪಕ್ಷಾತೀತವಾಗಿ ಬೀದಿಗಿಳಿದು ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಹೋರಾಟ ಮಾಡುತ್ತಿದ್ದಾರೆ.  ಎರಡೂ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕೆಂಬುದು ಬಹುತೇಕ ರಾಜ್ಯಗಳ ಒಕ್ಕೋರಲಿನ ಬೇಡಿಯಾಗಿದೆ. ಈ ಮನವಿಯನ್ನು ಪರಿಷ್ಕರಿಸದೆ ಮೌನಕ್ಕೆ ಜಾರಿಯಾಗಿರುವುದನ್ನು ಗಮನಿಸಿದರೆ ಕೇಂದ್ರದ ಮೇಲೆ ಸಂಶಯಾಸ್ಪದವಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

ದೇಶದ 24 ಲಕ್ಷ ಮಕ್ಕಳು ಪರೀಕ್ಷೆ ಬರೆದಿದ್ದಾರೆ.. ಅವರ ಭವಿಷ್ಯದ ಜೊತೆ ಮೋದಿ ಸರ್ಕಾರ ಚೆಲ್ಲಾಟ ಆಡುತ್ತಿದೆ. ತಿರಸ್ಕಾರ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ನೀಟ್ ನಡೆಸುವ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಇದೆ. ಕೇಂದ್ರ ಸರ್ಕಾರದ ಕಾಯಿದೆಯಿಂದ ನೀಟ್ ಬಂದಿದೆ. ಹಾಗಾಗಿ ನೀಟ್ ರದ್ದು ಮಾಡಲು ಸುಪ್ರೀಂಕೋರ್ಟ್ ತೀರ್ಪು ಆಗಬೇಕು ಎಂದು ಹೇಳಿದರು.

 

ತಮಿಳುನಾಡು ಸರ್ಕಾರ ಅದರ ಭಾವನೆ ಹೇಳಿದೆ. ನಾವು ಕರ್ನಾಟಕದಲ್ಲಿ ಇದೇ ರೀತಿ ಮಾಡಬೇಕಾದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ. ಸುಪ್ರೀಂಕೋರ್ಟ್ ಸಹ ಕೇಂದ್ರ ಸರ್ಕಾರಕ್ಕೆ ನಿಮ್ಮ ತಪ್ಪು ಇದ್ದರೆ ಒಪ್ಪಿಕೊಳ್ಳಿ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ಸ್ಪಷ್ಟಪಡಿಸಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top