ಬೆಂಗಳೂರು: ಹಲವಾರು ಮಹಿಳೆಯರ ಮೇಲೆ ಲೈಂಗಿಕ ಕ್ರೌರ್ಯ ಎಸಗಿರುವ ಪ್ರಕರಣದಲ್ಲಿ ಸಿಲುಕಿರುವ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಿಂದ ವಾಪಸ್ ಬಂದು ತಕ್ಷಣವೇ ಎಸ್.ಐ.ಟಿ ತನಿಖೆ ಎದುರಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಕಿವಿ ಮಾತು ಹೇಳಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಎಲ್ಲಿಯೇ ಇದ್ದರೂ ಸಹ ಮೊದಲು ಎಸ್.ಐ.ಟಿ ಮುಂದೆ ಹಾಜರಾಗಬೇಕು. ಎಸ್.ಐ.ಟಿ ತನಿಖೆ ಎದುರಿಸಬೇಕು ಎಂದರು.
ರಾಜ್ಯ ಸರ್ಕಾರ ವರ್ಷದ ಸಂಭ್ರಮದಲ್ಲಿದೆ. ಆದರೆ, ಕೇಂದ್ರ ಸರ್ಕಾರ ನೀಡಿರುವ ಬೆಳೆ ಪರಿಹಾರ ಹಣವು ಸಾಲಕ್ಕೆ ಜಮೆ ಆಗುತ್ತಿದೆ. ಇದು ಈ ಸರ್ಕಾರದ ವೈಖರಿ. ಸರ್ಕಾರ ಎಲ್ಲಾ ಸಾಧನೆಗಳನ್ನು ಹೇಳಿಕೊಳ್ಳುತ್ತಿದೆ. ಆದರೆ, ಪೆನ್ ಡ್ರೈವ್ ಸಾಧನೆ ಮಾತ್ರ ಇವರು ಹೇಳಿಕೊಳ್ಳುತ್ತಿಲ್ಲ. ವಿದ್ಯುತ್ ಸಂಚಲನ ಉಂಟು ಮಾಡಿದ, ವಿಶ್ವದಾದ್ಯಂತ ಸಂಚಲನ ಮೂಡಿಸಿದ ವಿಷಯವನ್ನು ಇವರು ಹೇಳೇ ಇಲ್ಲ. ಇದು ನನಗೆ ಆಶ್ಚರ್ಯ ಉಂಟು ಮಾಡಿದೆ ಎಂದು ಅವರು ತೀಕ್ಷ್ಣವಾಗಿ ಕುಟುಕಿದರು.
ರೈತರು ಬರದಿಂದ ಕಂಗೆಟ್ಟು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಈ ಸರ್ಕಾರದ ಕೊಡುಗೆ ಏನೂ ಇಲ್ಲ. ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಆರಂಭ ಆಗಿವೆ. ಬರ ಪರಿಹಾರ ಹಣವನ್ನು ಸಾಲಕ್ಕೆ ವಜಾ ಮಾಡ್ತಿದ್ದಾರೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿಲ್ಲ. ಹಲವು ಇಲಾಖೆಗಳಲ್ಲಿ ವೇತನ ನೀಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಕಳೆದ ಒಂದು ವರ್ಷದಲ್ಲಿ ಎಷ್ಟು ಮಂತ್ರಿಗಳು ಜಿಲ್ಲೆಗಳಲ್ಲಿ ಸಭೆ ಮಾಡಿದ್ದಾರೆ. ಸಮಸ್ಯೆಗಳ ಬಗ್ಗೆ ಏನು ಸೂಚನೆಗಳನ್ನು ಕೊಟ್ಟಿದ್ದಾರೆ. ಜನರ ಕಷ್ಟಗಳನ್ನು ಬಗೆಹರಿಸಿದ್ದಾರೆಯೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಸಭೆ ನಡೆಸಿ ಅಧಿಕಾರಿಗಳ ಮೇಲೆ ವಾಗ್ದಾಳಿ ನಡೆಸಿದ್ದರು. ಆದರೆ, ಜನರ ಕೆಲಸಗಳು ಏನಾಗಿವೆ? ಅಭಿವೃದ್ಧಿ ಕೆಲಸಗಳು ಎಲ್ಲಾದರೂ ಆಗಿವೆಯೇ? ಕೇವಲ ಗ್ಯಾರಂಟೀಗಳ ಹೆಸರು ಹೇಳಿಕೊಂಡು ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ರಾಜ್ಯದ ನೀರಾವರಿ ಯೋಜನೆಗಳ ಪರಿಸ್ಥಿತಿ ಏನಾಗಿದೆ? ರಸ್ತೆಯ ಪರಿಸ್ಥಿತಿ ಹೇಗಾಗಿದೆ? ಕಳೆದ ಒಂದು ವರ್ಷದಿಂದ ಬ್ರ್ಯಾಂಡ್ ಬೆಂಗಳೂರು ಏನಾಗಿದೆ? ಮಳೆ ಬಂದು ಬೆಂಗಳೂರಿನ ಪರಿಸ್ಥಿತಿ ಏನಾಗಿದೆ ಎನ್ನುವುದನ್ನು ಈಗ ಕಣ್ಣಾರೆ ನೋಡುತ್ತಿದ್ದೇವೆ. ಎರಡು ದಿನ ಸುರಿದ ಮಳೆಗೆ ಬೆಂಗಳೂರು ಜನರು ನರಕ ನೋಡುತ್ತಿದ್ದಾರೆ. ಮನೆಗಳಿಗೆ ಬೀಗ ಹಾಕಿ ಹೋಟೆಲ್ ಗೆ ಹೋಗಿ ಜೀವನ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಅತ್ಯಂತ ಮೌಲ್ಯವಾದ ದಿನಗಳನ್ನು ನಾವು ಒಂದು ವರ್ಷದಲ್ಲಿ ಕಳೆದುಕೊಂಡಿದ್ದೇವೆ. ರಾಜ್ಯದ ಅಭಿವೃದ್ಧಿ ಹಿಮ್ಮುಖವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಇಲಾಖೆಗಳ ಕೆಲಸ ನೋಡಿದರೆ ಅರ್ಥ ಆಗುತ್ತದೆ. ಎಂಟು ಪ್ರಮುಖ ಇಲಾಖೆಗಳಲ್ಲಿ 35,471 ಕಡತಗಳು ವಿಲೇವಾರಿ ಆಗಿಲ್ಲ ಎಂಬ ವರದಿಯನ್ನು ಓದಿದೆ. ಇದು ಸರ್ಕಾರದ ಸಾಧನೆಯೇ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು ಮಾಜಿ ಮುಖ್ಯಮಂತ್ರಿಗಳು.
ಚುನಾವಣೆ ನಂತರ ಓರ್ವ ಮಂತ್ರಿಯಾದರೂ ಜಿಲ್ಲೆಗಳಿಗೆ ಭೇಟಿ ನೀಡಿದ್ದೀರಾ? ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಕೆಲಸ ಮಾಡಿಸಿದ್ದಾರಾ? ಇಲ್ಲ. ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ನಾಡಿನ ಅಭಿವೃದ್ಧಿಗೆ ಪೂರಕವಾದ ಕೆಲಸ ಆಗಿಲ್ಲ. ಸರ್ಕಾರದ ಐದು ವರ್ಷದ ಆಡಳಿತಾತ್ಮಕ ಮಂಜೂರಾತಿ ಮುಂದುವರಿಸಿದ್ದು ಬಿಟ್ಟರೆ ಏನೂ ಆಗಿಲ್ಲ. ವರ್ಗಾವಣೆ ದಂಧೆಯೂ ನಿಂತಿಲ್ಲ. ವರ್ಗಾವಣೆಗೆ ಸಿ ಎಸ್ ಆರ್ ಫಂಡ್ ಹೆಸರನ್ನು ಸಂಜ್ಞೆಯಾಗಿ ಬಳಕೆ ಮಾಡಲಾಗುತ್ತಿದೆ ಎಂದು ಅವರು ಆರೋಪ ಮಾಡಿದರು.
ಉಪ ಮುಖ್ಯಮಂತ್ರಿ ಅವರು ನಗರ ಪ್ರದಕ್ಷಿಣೆ ಮಾಡ್ತಿದ್ದಾರೆ. ಕಳೆದ ಬಾರಿಯೂ ಪ್ರದಕ್ಷಿಣೆ ಮಾಡಿದಿರಿ. ಏನು ಪ್ರಯೋಜನ ಆಯಿತು. ಬೆಂಗಳೂರು ನಗರಕ್ಕೆ ಏನಾದರೂ ಉಪಯೋಗ ಆಯಿತಾ? ಎಷ್ಟು ಸಮಸ್ಯೆ ಪರಿಹಾರ ಆಗಿದೆ ಎಂದು ಮಾಹಿತಿ ಕೊಡಿ ಎಂದು ಕಟುವಾಗಿ ಪ್ರಶ್ನಿಸಿದರು ಮಾಜಿ ಮುಖ್ಯಮಂತ್ರಿಗಳು.
ನಾನು ಕೂಡ ಸರ್ಕಾರ ನಡೆಸಿದ್ದೇನೆ. ನಾನು ಮಾಡದ ಕೆಲಸದ ಬಗ್ಗೆ ಜಾಹೀರಾತು ಕೊಟ್ಟು ಪ್ರಚಾರ ಪಡೆದಿಲ್ಲ. ಜನರ ತೆರಿಗೆ ಹಣವನ್ನ ದುರ್ಬಳಕೆ ಮಾಡಿಕೊಂಡಿಲ್ಲಾ. ಇದು ಜಾಹೀರಾತು ಸರ್ಕಾರ! ಜಾಹಿರಾತು ಕೊಟ್ಟಿದ್ದೇ ಈ ಸರ್ಕಾರದ ಸಾಧನೆ ಎಂದು ಕುಮಾರಸ್ವಾಮಿ ಅವರು ಟೀಕಿಸಿದರು.
ಶಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ, ಸಾ.ರಾ.ಮಹೇಶ್, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಉಪಸ್ಥಿರಿದ್ದರು.