ಚೆನ್ನೈ ಸೂಪರ್ ಕಿಂಗ್ಸ್ ಎದುರು ಗುಜರಾತ್ ಟೈಟನ್ಸ್‌ಗೆ 35 ರನ್‌ಗಳ ಗೆಲುವು

ಅಹಮದಾಬಾದ್‌: ಇಲ್ಲಿಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2024ರ ಐಪಿಎಲ್ 59ನೇ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟನ್ಸ್ ತಂಡದ ಬ್ಯಾಟಿಂಗ್ ಅಬ್ಬರದ ಎದುರು ಚೆನ್ನೈ ಸೂಪರ್ ಕಿಂಗ್ಸ್ ತಂಡ 35 ರನ್‌ಗಳ ಸೋಲು ಅನುಭವಿಸಿದೆ.

ಗುಜರಾತ್ ಟೈಟನ್ಸ್ ತಂಡ ಐಪಿಎಲ್ 2024ರಲ್ಲಿ ಆಡಿದ 12 ಪಂದ್ಯಗಳಲ್ಲಿ 5 ಗೆಲುವು ಮತ್ತು 7 ಸೋಲು ಕಂಡಿದ್ದು, 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೇರಿದೆ. ಸಿಎಸ್‌ಕೆ ತಂಡ ಆಡಿದ 12 ಪಂದ್ಯಗಳಲ್ಲಿ 6 ಗೆಲುವು ಮತ್ತು 6 ಸೋಲು ಕಂಡು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಮುಂದುವರೆದಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ ತಂಡದ ಗೆಲುವು ಮತ್ತೊಂದು ಪರಿಣಾಮ ಬೀರಿದ್ದು, ಐಪಿಎಲ್ 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪ್ಲೇಆಫ್ ಅವಕಾಶಕ್ಕೆ ಸಹಾಯ ಮಾಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ಸಾಯಿ ಸುದರ್ಶನ್ ಮತ್ತು ನಾಯಕ ಶುಭ್ಮನ್ ಗಿಲ್ ಅವರ ಭರ್ಜರಿ ಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 231 ರನ್ ಕಲೆ ಹಾಕಿತ್ತು.

232 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ (ಡ್ಯಾರಿಲ್ ಮಿಚೆಲ್ ಮತ್ತು ಮೊಯಿನ್ ಅಲಿ ಅವರ ಅಮೋಘ ಅರ್ಧಶತಕಗಳ ಹೊರತಾಗಿಯೂ) ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 196 ರನ್‌ಗಳನ್ನಷ್ಟೇ ಮಾತ್ರ ಗಳಿಸಲು ಶಕ್ತವಾಯಿತು.

ಇದೇ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿ ಭರ್ಜರಿ ಆಟ ಎಲ್ಲರಿಗೆ ಕೂಡ ಇಷ್ಟವಾಗಿತ್ತು. ಕೇವಲ 11 ಬಾಲ್‌ಗೆ 26 ರನ್ ಸಿಡಿಸಿದ ಮಹೇಂದ್ರ ಸಿಂಗ್ ಧೋನಿ 236.36 ಸ್ಟ್ರೈಕ್ ರೇಟ್ ಮೂಲಕ 3 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು. ಆದರೂ ಚೆನ್ನೈ ಈ ಪಂದ್ಯದಲ್ಲಿ ಸೋಲು ಕಂಡಿರುವುದು ಧೋನಿ ಅಭಿಮಾನಿಗಳಿಗೆ ಬೇಸರ ತರಿಸಿದೆ.

 

ಬೌಲಿಂಗ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಪರ ಮೋಹಿತ್ ಶರ್ಮಾ 4 ಓವರ್‌ಗಳಲ್ಲಿ 31 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ರಶೀದ್ ಖಾನ್ 4 ಓವರ್‌ಗಳಲ್ಲಿ 38 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಉಮೇಶ್ ಯಾದವ್ ಮತ್ತು ಸಂದೀಪ್ ವಾರಿಯರ್ ತಲಾ ಒಂದೊಂದು ವಿಕೆಟ್ ಪಡೆದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top