ಬೆಂಗಳೂರು: ನಾಟಕದಲ್ಲಿ ಅಭಿನಯಿಸುತ್ತಲೇ ವೇದಿಕೆ ಮೇಲೆ ಕುಸಿದು ಕಲಾವಿದರೊಬ್ಬರು ಸಾವನ್ನಪ್ಪಿರುವ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.
ದೇವನಹಳ್ಳಿ ತಾಲೂಕು ಅರದೇಶಹಳ್ಳಿಯ ನಿವಾಸಿಯಾದ ಎನ್. ಮುನಿಕೆಂಪಣ್ಣ ಮೃತ ಕಲಾವಿದ. ಶುಕ್ರವಾರ ರಾತ್ರಿ ಯಲಹಂಕ ತಾಲೂಕಿನ ಸಾತನೂರು ಬಳಿ ಕುರುಕ್ಷೇತ್ರ ನಾಟಕ ಪ್ರರ್ಶನ ನಡೆಯುತ್ತಿತ್ತು. ಈ ವೇಳೆ, ನಾಟಕದಲ್ಲಿ ಶಕುನಿಯ ಪಾತ್ರ ನರ್ವಹಿಸುತ್ತಿದ್ದ ಮುನಿಕೆಂಪಣ್ಣ ರಾತ್ರಿ ೧.೩೦ರ ಸುಮಾರಿಗೆ ಪಾತ್ರದಲ್ಲಿ ಅಭಿನಯಿಸುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಹೃದಯಾಘಾತದಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸಾವಿಗೂ ಮುನ್ನ ಮುನಿಕೆಂಪಣ್ಣ ಅವರು ವೇದಿಕೆಯಲ್ಲಿ ಡೈಲಾಗ್ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮೃತ ಮುನಿಕೆಂಪಣ್ಣ ಅವರು ನಿವೃತ್ತ ಉಪನ್ಯಾಸಕರು, ಸಾಹಿತಿ, ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ದೇವನಹಳ್ಳಿಯ ೨೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಇಂದು ಮಧ್ಯಾಹ್ನ ಮೂರು ಗಂಟೆಗೆ ಮುನಿಕೆಂಪಣ್ಣ ಅವರ ಹುಟ್ಟೂರಾದ ಅರದೇಶಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.