ಬಳ್ಳಾರಿ: ಕಳೆದ 20 ವರ್ಷಗಳಿಂದ 21ನೇ ವಾರ್ಡಿನ ಜನ ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದ್ದೀರಿ, ಆದರೆ ಅವರು ವಾರ್ಡಿನ ಅಭಿವೃದ್ಧಿ ಮಾಡಲಿಲ್ಲ, ಅಭಿವೃದ್ಧಿ ಮಾಡದ ಬಿಜೆಪಿಯವರನ್ನು ಜನರು ಪ್ರಶ್ನಿಸಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಬಳ್ಳಾರಿ ನಗರದ 21ನೇ ವಾರ್ಡಿನ ಕೆಇಬಿ ಸರ್ಕಲ್ ಬಳಿ ಬುಧವಾರ ಸಂಜೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ತುಕಾರಾಂ ಅವರ ಪರ ಮತ ಯಾಚಿಸಿ ಮಾತನಾಡಿದರು.
ಕಳೆದ 9 ತಿಂಗಳಲ್ಲಿ 21ನೇ ವಾರ್ಡಿಗೆ 7 ಕೋಟಿ 70 ಲಕ್ಷ ರೂ.ಗಳ ಅನುದಾನ ತಂದಿದ್ದೇನೆ, ನೆಹರೂ ಕಾಲೋನಿಯ 2 ಪಾರ್ಕ್ ಗಳು, ಬಳ್ಳಾರಿ ನಗರಕ್ಕೆ ಪ್ರವೇಶಿಸುವ ಸಂಗನಕಲ್ ರಸ್ತೆಯ (ಕೆಆರೆಸ್ ಹಾಲ್ ನಿಂದ ಕೆಇಬಿ ಸರ್ಕಲ್ ವರೆಗೆ) ಅಭಿವೃದ್ಧಿಗೆ ಅನುದಾನ ತಂದಿರುವೆ ಎಂದರು.
ಈಗಾಗಲೇ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಮಾಡಿರುವ ಮನವಿಯಂತೆ ಚುನಾವಣೆಯ ನಂತರ ಕೆಇಬಿ ಸರ್ಕಲ್ ಅನ್ನು ಬಸವೇಶ್ವರ ಸರ್ಕಲ್ ಆಗಿ ನಾಮಕರಣ ಆಗಿದೆ ಅದನ್ನು ಇನ್ನು ಹೆಚ್ಚಿನ ಅಭಿವೃದ್ಧಿ ಮಾಡಲಾಗುವುದು ಎಂದ ಶಾಸಕ ಭರತ್ ರೆಡ್ಡಿ, ಕಾಂಗ್ರೆಸ್ ಪಕ್ಷದ ಲಿಂಗಾಯತ ಸಮುದಾಯದ ಮುಖಂಡರಿಗೆ ಶಕ್ತಿ ತುಂಬುವ ಮೂಲಕ ನನ್ನ ಹಾಗೂ ತುಕಾರಾಂ ಅವರ ಕೈ ಬಲಪಡಿಸಬೇಕು ಎಂದರು.
ಕೇಂದ್ರದಲ್ಲಿ ಕಾಂಗ್ರೆಸ್ಸಿನ ಸರ್ಕಾರ ಅಧಿಕಾರಕ್ಕೆ ಬಂದರೆ ಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕ ಒಂದು ಲಕ್ಷ ರೂ. ನೀಡಲಾಗುವುದು ಅದೇ ರೀತಿ ಇನ್ನೂ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರಲಾಗುವುದು, ಹೀಗಾಗಿ ಕಾಂಗ್ರೆಸ್ಸಿನ ಅಭ್ಯರ್ಥಿ ಈ.ತುಕಾರಾಂ ಅವರಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಡಿಸಿಸಿ ನೂತನ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಮಾತನಾಡಿ; ಮೇ 7ರಂದು ಮತದಾನ ನಡೆಯಲಿದೆ, ಅಂದು ಕಾಂಗ್ರೆಸ್ಸಿನ ಅಭ್ಯರ್ಥಿ ತುಕಾರಾಂ ಅವರಿಗೆ ಮತ ನೀಡಿ, ನಾಲ್ಕು ಸಲ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಅಂತಹ ಅಭಿವೃದ್ಧಿ ಪರ ವ್ಯಕ್ತಿಯನ್ನು ನಾವು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿಯವರು ಮೋದಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ, ಇವರೇನು ಕೆಲಸ ಮಾಡುತ್ತಾರೆ? ಎಂಬುದಕ್ಕೆ ಉತ್ತರ ಇಲ್ಲ ಎಂದ ಅವರು, ಗುತ್ತಿ ಅಂಕೋಲಾ ರಾ.ಹೆ. ವರ್ಷಗಳಿಂದ ಪೂರ್ಣ ಆಗಿಲ್ಲ, ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಮಾತು ಹೇಳಿದರು, ಮಾಡಲಿಲ್ಲ, ಬಡವರ ಜಮೀನು ಕಸಿದುಕೊಂಡಿದ್ದಷ್ಟೇ ಇವರ ಸಾಧನೆ ಎಂದು ಅಲ್ಲಂ ಪ್ರಶಾಂತ್ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಿವಾನಂದ ದಂಡಿನ, 21ನೇ ವಾರ್ಡಿನ ಕಾಂಗ್ರೆಸ್ ಮುಖಂಡೆ ಲತಾ ಚಾನಾಳ್ ಶೇಖರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿದಾನಂದಪ್ಪ ಯಾದವ್, ಡಿಸಿಸಿ ಕಾರ್ಯಾಧ್ಯಕ್ಷ ವಿಷ್ಣು , ಯಾಲ್ಪಿ ಪೊಂಪನ ಗೌಡ, ಸೂರ್ಯ ಪ್ರಕಾಶ್ ಸ್ವಾಮಿ, ಜಾನೆಕುಂಟೆ ಬಸವರಾಜ್ (ಕುಮ್ಮಿ), ಸೂರ್ಯಪ್ರಕಾಶ್, ಹೆಚ್ ಎಸ್ ಹಿರೇಮಠ್, ವಾಸುರೆಡ್ಡಿ, ಅಂಗಡಿ ಶಂಕರ್, ಭಾಸ್ಕರ್ ರೆಡ್ಡಿ, ಪ್ರಭಾಕರ್ ರೆಡ್ಡಿ, ಶಬರಿ ರವಿಕುಮಾರ್, ಕೊರ್ಲಗುಂದಿ ಬಸವನಗೌಡ, ಆನಂದ್ ಗೌಡ, ಸಾರ್ವತಮ್ ರೆಡ್ಡಿ, ಮಂಜು ಸ್ವಾಮಿ ಕಗ್ಗಲ್, ನಾಲಾಗಡ್ಡೆ ಸೂರಿ, ಶೇಖರ ಹಾಗು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಯಿಸಿದ್ದರು