ರಂಗೇರಿದ ರಾಯಚೂರು ಚುನಾವಣಾ ಕಣ

ರಾಯಚೂರು: ಬಿಸಿಲ ನಾಡು ರಾಯಚೂರು ಜಿಲ್ಲೆಯಲ್ಲಿ ದಿನೇ ದೆನೇ ಬಿಸಿಲಿನ ಕಾವು ಏರಿಕೆಯಾಗುತ್ತಿದ್ದಂತೆ ಲೋಕಸಭಾ ಚುನಾವಣೆಯ ಕಾವು ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉರಿ ಬಿಸಿಲಿನಲ್ಲಿ ನಾಯಕರು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಸಭೆ- ಸಮಾರಂಭ ನಡೆಸುವುದರಲ್ಲಿ ಬ್ಯುಸಿಯಾಗಿದ್ದಾರೆ.

 

ಇತ್ತ ಚುನಾವಣೆ ಆಯೋಗವು ಸಹ ಲೋಕಸಭಾ ಚುನಾವಣೆ ಶಾಂತ ರೀತಿಯಿಂದ ನಡೆಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದೆ. ಅಷ್ಟೇ ಅಲ್ಲದೆ ಚುನಾವಣೆ ವೇಳೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯ ಬಾರದು ಎಂದು ನೀತಿ ಸಂಹಿತೆ ಜಾರಿ ಮಾಡಿ ಚೆಕ್ ಪೋಸ್ಟ್ ಗಳನ್ನ ನಿರ್ಮಿಸಿ ತಪಾಸಣೆ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾ ವಣೆ ನಡೆಸಲು ಆಯೋಗ ದಿನಾಂಕ ಪ್ರಕಟಿಸಿದೆ. ಅದರಂತೆ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಚುನಾವಣೆ ಆಯೋಗ ಸಿಬ್ಬಂ ದಿಗೆ ನಾನಾ ರೀತಿಯ ತರಬೇತಿ ನೀಡಲಾಗಿದೆ.

 

ರಾಯಚೂರು ಲೋಕಸಭಾ ಕ್ಷೇತ್ರವೂ ಎಸ್‌ಟಿ ( ಪರಿಶಿಷ್ಟ ಪಂಗಡ) ಮೀಸಲು ಕ್ಷೇತ್ರವಾಗಿದೆ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ೮ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಯಾದಗಿರಿ ಜಿಲ್ಲೆಯ ೩ ವಿಧಾನಸಭಾ ಕ್ಷೇತ್ರಗಳು ಹಾಗೂ ರಾಯಚೂರು ಜಿಲ್ಲೆಯ ೫ ವಿಧಾನಸಭಾ ಕ್ಷೇತ್ರಗಳು ಒಳಗೊಂಡು ರಾಯಚೂರು ಲೋಕಸಭಾ ಕ್ಷೇತ್ರವಾಗಿದೆ.  ಶೋರಾಪುರ( ಸುರಪುರ)- ವಿಧಾನಸಭಾ ಕ್ಷೇತ್ರದಲ್ಲಿ ೩೧೭ ಮತಗಟ್ಟೆಗಳು, ಶಹಾಪೂರ ವಿಧಾನಸಭಾ ಕ್ಷೇತ್ರದಲ್ಲಿ ೨೬೫ ಮತಗಟ್ಟೆಗಳು, ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ೨೬೮, ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ೨೭೫, ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ೨೫೦, ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ೨೭೬, ದೇವದುರ್ಗದಲ್ಲಿ ೨೬೭ ಹಾಗೂ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ೨೮೫ ಮತಗಟ್ಟೆಗಳು ಬರಲಿವೆ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ೨೨೦೩ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 

ಬಿಸಿಲುನಾಡು ಎಂದು ಕರೆಸಿಕೊಳ್ಳುವ ರಾಯಚೂರಿನಲ್ಲಿ ದಿನೇ ದಿನೇ ಬಿಸಿಲು ಹೆಚ್ಚಾಗುತ್ತಿದೆ. ಅದರಂತೆ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದರಿಂದ ಬಿರುಬಿಸಿಲಿನಲ್ಲಿಯೂ ಚುನಾವಣೆಗಾಗಿ ಸಕಲ ರೀತಿಯ ಸಿದ್ಧತೆಗಳು ನಡೆದಿವೆ. 

ಈಗಾಗಲೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಜಿ.ಕುಮಾರ ನಾಯಕ ಕಣಕ್ಕೆ ಇಳಿದಿದ್ದು, ಪ್ರಚಾರದ ಭರಾಟೆ ಜೋರಾಗಿ ನಡೆದಿದೆ. ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಸಭೆ ಸಮಾರಂಭ ನಡೆಸಿ ಮತ ಭೇಟೆ ಶುರು ಮಾಡಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿಯಾಗಿ ರಾಜಾ ಅಮರೇಶ್ವರ ನಾಯಕ ಕಣಕ್ಕಿಳಿದಿದ್ದು  ಭರ್ಜರಿಯಾಗಿ  ಮತ ಬೇಟೆ ಶುರು ಮಾಡಿದ್ದಾರೆ.

ರಾಯಚೂರು ಲೋಕಸಭಾ ಚುನಾವಣೆ ಎರಡನೇ ಹಂತದಲ್ಲಿ ಬರುವ ಚುನಾವಣೆ ಆಗಿದೆ. ಏಪ್ರಿಲ್ ೧೨ರಂದು ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಹೊರಡಿಸಲಾಗುವುದು. ಏಪ್ರಿಲ್ ೧೨ರಿಂದ ಅಭ್ಯರ್ಥಿಗಳು ಏಪ್ರಿಲ್ ೧೯ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಏಪ್ರಿಲ್ ೨೦ರಂದು ಸಲ್ಲಿಕೆ ಮಾಡಿದ ನಾಮಪತ್ರದಲ್ಲಿ ಏನಾದರೂ ತಪ್ಪುಗಳು ಇದ್ರೆ ಪರಿಶೀಲನೆ ಮಾಡಿಕೊಳ್ಳಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಏಪ್ರಿಲ್ ೨೨ರಂದು ಅಭ್ಯರ್ಥಿಗಳು ತಾವು ಸಲ್ಲಿಕೆ ಮಾಡಿದ ನಾಮಪತ್ರ ವಾಪಸು ಪಡೆಯಲು ಸಹ ಅವಕಾಶವಿದೆ. ನಾಮಪತ್ರ ಸಲ್ಲಿಕೆ ಮಾಡಲು ಸಹ ಚುನಾವಣೆ ಆಯೋಗ ಹತ್ತಾರು ರೀತಿಯ ನಿಯಮಗಳು ಜಾರಿಗೆ ತಂದಿದೆ. ಬೆಳಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೩ಗಂಟೆವರೆಗೆ ನಾಮಪತ್ರ ಸಲ್ಲಿಕೆ ಮಾಡಬೇಕು. ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿ ಜೊತೆಗೆ ೪ ಜನರಿಗೆ ಮಾತ್ರ ಪ್ರವೇಶವಿದೆ. ಒಬ್ಬ ಅಭ್ಯರ್ಥಿ ನಾಲ್ಕು ನಾಮಪತ್ರ ಸಲ್ಲಿಕೆಗೆ ಚುನಾವಣಾ ಆಯೋಗ ಅವಕಾಶ ನೀಡಿದೆ. ನಾಮಪತ್ರ ಸಲ್ಲಿಕೆ ವೇಳೆ ಮೂರು ವಾಹನಗಳಿಗೆ ಮಾತ್ರ ಒಳಗಡೆ ಪ್ರವೇಶ ಇರುತ್ತೆ, ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಯೂ ೯೦ ಲಕ್ಷದವರೆಗೆ ಮಾತ್ರ ಚುನಾವಣೆ ವೆಚ್ಚ ಮಾಡಲು ಮಿತಿಗೊಳಿಸಿದೆ. ಒಂದು ವೇಳೆ ೯೦ ಲಕ್ಷಕ್ಕೂ ಅಧಿಕ ವೆಚ್ಚ ಮಾಡಿದ ಅಭ್ಯರ್ಥಿಗಳ ವಿರುದ್ಧ ಕೇಸ್ ಸಹ ಬುಕ್ ಆಗಬಹುದು. ಅಲ್ಲದೆ ನಾಮಪತ್ರ ಸಲ್ಲಿಕೆ ಆದ ಬಳಿಕ ಪ್ರಚಾರಕ್ಕೆ ಬಳಕೆ ಆಗುವ ಪ್ರತಿಯೊಂದು ವಸ್ತುಗಳ ಅನುಮತಿ ಪಡೆದು ಚುನಾವಣೆ ಪ್ರಚಾರ ಮಾಡಬೇಕು.

ಅಭ್ಯರ್ಥಿಗಳು ಅಥವಾ ಪಕ್ಷದ ಮುಖಂಡರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ರೆ ಸಾರ್ವಜನಿಕರು ಸಹ ದೂರು ನೀಡಲು ಚುನಾವಣೆ ಆಯೋಗ ಅವಕಾಶ ನೀಡಿದೆ. ಟೋಲ್ ಫ್ರೀ ೧೯೫೦ಗೆ ದೂರು ನೀಡಬಹುದು ಅಥವಾ ಸಿ- ವಿಜಿಲ್ ಮುಖಾಂತರ ದೂರು ನೀಡಲು ಪ್ರಕಟಣೆಯಲ್ಲಿ ತಿಳಿಸಿದೆ.

ಒಟ್ಟಾರೆ ಲೋಕಸಭಾ ಚುನಾವಣೆ ನಡೆಸಲು ಚುನಾವಣಾ ಅಧಿಕಾರಿಗಳು ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಏಪ್ರಿಲ್ ೧೨ರಿಂದ ನಾಮಪತ್ರ ಸಲ್ಲಿಕೆ ಶುರುವಾಗಲಿದ್ದು, ಮೇ ೭ರಂದು ಮತದಾನ ನಡೆಯಲಿದೆ. ಜೂನ್ ೪ರಂದು ಮತ ಎಣಿಕೆ ನಡೆಯಲಿದ್ದು. ಅಭ್ಯರ್ಥಿಗಳ ಆಯ್ಕೆ ಖಚಿತವಾಗಲಿದೆ.

ಮಹಿಳಾ ಮತದಾರರದ್ದೇ ದರ್ಬಾರ್

ದೇಶದ ತುಂಬಾ ಲೋಕಸಭೆ ಚುನಾವಣೆ ಪ್ರಚಾರ ಜೋರಾಗಿ ನಡೆದಿದೆ. ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ಮತದಾರರ ಪಟ್ಟಿ ಹಿಡಿದುಕೊಂಡು ಲೆಕ್ಕಾಚಾರ ಹಾಕಲು ಶುರು ಮಾಡಿದ್ದಾರೆ. ಅದರಂತೆ ರಾಯಚೂರು ಲೋಕಸಭಾ ಕ್ಷೇತ್ರದ ವಿಚಾರಕ್ಕೆ  ಬಂದ್ರೆ ೮ ವಿಧಾನಸಭಾ ಕ್ಷೇತ್ರ ಸೇರಿ ಒಟ್ಟು ೧೯,೯೩,೭೫೫ ಮತದಾರರು ಇದ್ದಾರೆ. ಅದರಲ್ಲಿ ಪುರುಷರು ೯,೮೫,೬೭೫ ಮತದಾರರು ಇದ್ರೆ, ಮಹಿಳಾ ಮತದಾರರು ೧೦,೦೫,೨೪೨ ಇದ್ದಾರೆ. ಹೀಗಾಗಿ ಅಭ್ಯರ್ಥಿಗಳು ಮಹಿಳಾ ಮತದಾರ ಮನಸೆಳೆಯುವ ಕಸರತ್ತು ಶುರು ಮಾಡಿದ್ದಾರೆ. ೮ ವಿಧಾನಸಭಾ ಕ್ಷೇತ್ರದಲ್ಲಿ ಸುರಪುರ ಕ್ಷೇತ್ರ ಹೊರತುಪಡಿಸಿ ಇನ್ನುಳಿದ ೭ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ.

 

ಈಗಾಗಿ ಮಹಿಳಾ ಮತದಾರರನ್ನು ಮನಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ಮಾಡತೊಡಗಿದ್ದಾರೆ.

Facebook
Twitter
LinkedIn
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top