ಗ್ಯಾರಂಟಿ ಯೋಜನೆಯೊಂದಿಗೆ ಅಭಿವೃದ್ಧಿಯ ಬಜೆಟ್ ಮಂಡಿಸಿದ ಸಿದ್ದರಾಮಯ್ಯ

ವಿಧಾನಸೌಧ (ಬೆಂಗಳೂರು ): ಸಾಮಾಜಿಕ ನ್ಯಾಯ ಎನ್ನುವುದು ನಮ್ಮ ನಂಬಿಕೆ ಮಾತ್ರವಲ್ಲ; ಅದು ಉದಾತ್ತ ಜೀವನ ದೃಷ್ಟಿಕೋನ. ಸಮ ಸಮಾಜ ನಿರ್ಮಾಣದಲ್ಲಿ ಬಸವಾದಿ ಶರಣರ ಕಾಯಕ ಮತ್ತು ದಾಸೋಹ ತತ್ವಗಳು ನಮಗೆ ಪ್ರೇರಣೆಯಾಗಿದೆ. ದುಡಿಮೆಯ ಒಂದು ಭಾಗವನ್ನು ದಾಸೋಹಕ್ಕೆ ಬಳಸಬೇಕೆಂಬ ಶರಣರ ಚಿಂತನೆ, ಸಮಾಜದಲ್ಲಿ ಸಂಪತ್ತಿನ ನ್ಯಾಯಯುತ ಹಂಚಿಕೆ ಮಾಡುವ ನಮ್ಮ ಆಶಯಕ್ಕೆ ಆಧಾರವಾಗಿದೆ.

ವರನಟ ಡಾ|| ರಾಜ್‌ಕುಮಾರ್‌ ಅಭಿನಯದ ಹಾಗೂ ಆರ್.ಎನ್.ಜಯಗೋಪಾಲ್‌ ರಚಿಸಿದ ಬಂಗಾರದ ಮನುಷ್ಯ ಚಿತ್ರದ ಈ ಹಾಡಿನಂತೆ ದೇಶದ ಯಾವುದೇ ಸರ್ಕಾರ ಜಾರಿಗೊಳಿಸದ ಅತ್ಯಂತ ಬೃಹತ್‌ ಪ್ರಮಾಣದ ನೇರ ನೆರವು ನೀಡುವ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಶ್ರೇಯ ನಮ್ಮದಾಗಿದೆ. ನಮ್ಮ ಮಹತ್ವಾಕಾಂಕ್ಷೆಯ ಗ್ಯಾರಂಟಿಗಳು ಜನರ ಆಶೋತ್ತರಗಳನ್ನು ಆಧರಿಸಿವೆ.

ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ನಮ್ಮ ಯುಪಿಎ ಸರ್ಕಾರವು ಜನರ ಆಹಾರ, ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ವಾಸದ ಭದ್ರತೆಗಾಗಿ ವಿವಿಧ ಜನಕೇಂದ್ರಿತ ಯೋಜನೆಗಳು ಹಾಗೂ ಕಾನೂನುಗಳನ್ನು ರೂಪಿಸಿ ಬಡಜನರಿಗೆ ನ್ಯಾಯ ಒದಗಿಸುವ ಕಾರ್ಯಗಳನ್ನು ಕೈಗೊಂಡಿತ್ತು. ಆದರೆ, ಹಿಂದಿನ ೧೦ ವರ್ಷಗಳ ಅವಧಿಯಲ್ಲಿನ ಕೇಂದ್ರ ಸರ್ಕಾರದ ಜನವಿರೋಧಿ ನಿಲುವುಗಳಿಂದಾಗಿ  ಅಸಮಾನತೆ ಹೆಚ್ಚಳ, ಕೆಲವೇ ಜನರ ಬಳಿ ಸಂಪತ್ತಿನ ಶೇಖರಣೆ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಹೆಚ್ಚುತ್ತಿರುವ ಪ್ರಭಾವ ಮುಂತಾದ ಅನಪೇಕ್ಷಿತ ಬೆಳೆವಣಿಗೆಗಳಿಗೆ ಎಡೆ ಮಾಡಿದೆ.

 

ಅದಕ್ಕಾಗಿಯೇ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡ ಕೇಂದ್ರ ಸರ್ಕಾರ ಮಾಡದ ಕೆಲಸವನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ. ನಾವು ರೂಪಿಸಿದ ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಗಿಮಿಕ್‌ ಅಲ್ಲ. ಭಾರತ್‌ ಜೋಡೋ ಯಾತ್ರೆಯ ಸಂದರ್ಭದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಸಂಗ್ರಹಿಸಿದ ಜನಾಭಿಪ್ರಾಯದ ಫಲವಾಗಿದೆ. ಇದು ಉದ್ಯೋಗ ಸೃಜಿಸಿ, ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಿಸುವ ಪ್ರಯತ್ನವಾಗಿದೆ. ನಿಷ್ಪಕ್ಷಪಾತ ಮತ್ತು ನ್ಯಾಯಯುತ ಸಮಾಜ ನಿರ್ಮಾಣಕ್ಕಾಗಿ ಸಂಪತ್ತಿನ ಮರುಹಂಚಿಕೆ ಮಾಡುವ ಕಾರ್ಯಕ್ರಮಗಳು ಇವಾಗಿವೆ.

2024-25 ರಲ್ಲಿ 5,000 ಕೋಟಿ ರೂ. ಗಳನ್ನು ಐದು ಗ್ಯಾರಂಟಿಗಳಾದ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳ ಮೂಲಕ ಕೋಟ್ಯಾಂತರ ಜನರ ಕೈಗೆ ಹಂಚಿಕೆ ಮಾಡಲಾಗುತ್ತಿದೆ. ಈ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 5,000 ದಿಂದ 55,000 ರೂ. ಗಳನ್ನು ಒದಗಿಸಲಾಗುತ್ತಿದೆ.

ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಇಡೀ ಜಗತ್ತು ನಮ್ಮತ್ತ ಮೆಚ್ಚುಗೆಯ ನೋಟ ಬೀರಿದೆ. ಸಮಯ ಕಳೆದಂತೆ ಇದರ ಆರ್ಥಿಕ ಮತ್ತು ಸಾಮಾಜಿಕ ಅನುಕೂಲಗಳು ಇನ್ನಷ್ಟು ಸ್ಪಷ್ಟವಾಗಿ ಗೋಚರಿಸಲಿವೆ. ಹಲವು ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ನಮ್ಮ ಕೆಲಸದ ಅಧ್ಯಯನ ನಡೆಸಿ, ಶ್ಲಾಘಿಸಿವೆ. ಆದರೆ ಗ್ಯಾರಂಟಿ ಯೋಜನೆಗಳ ಮೇಲಿನ ನನ್ನ ನಂಬಿಕೆ ದೃಢವಾಗಲು  ಕೇವಲ ಈ ಅಧ್ಯಯನಗಳಷ್ಟೇ ಕಾರಣವಲ್ಲಬಸ್‌ ಹತ್ತುವ ಮುನ್ನ ತಲೆಬಾಗಿ ನಮಸ್ಕರಿಸಿದ ಮಹಿಳೆಯ ಮುಖದಲ್ಲಿದ್ದ ಸಂತೋಷ, ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಲಕ್ಷಾಂತರ ಮಹಿಳೆಯರ ಪ್ರಾರ್ಥನೆ, ಯುವನಿಧಿಯಡಿ ನೆರವು ಪಡೆದ ನಿರುದ್ಯೋಗಿ ಯುವಕನ ಆನಂದಬಾಷ್ಪ- ಇವು ಗ್ಯಾರಂಟಿ ಯೋಜನೆಗಳ ಮೇಲಿನ ನನ್ನ ನಂಬಿಕೆಯನ್ನು ಇನ್ನಷ್ಟು ಬಲಪಡಿಸಿದೆ. ಅಭಿವೃದ್ಧಿಯ ಫಲವನ್ನು ಅದರ ಹಕ್ಕುದಾರರಾದ ಜನಸಾಮಾನ್ಯರಿಗೆ ಹಿಂತಿರುಗಿಸುವುದರಲ್ಲಿ ಅನನ್ಯವಾದ ಸಂತೃಪ್ತಿಯಿದೆ.

ಆದರೆ ವಿರೋಧಿಗಳು ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು ಬಣ್ಣಿಸಿ ರಾಜ್ಯ ದಿವಾಳಿಯಾಗಿದೆ, ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲ ಎಂದು ಸುಳ್ಳು ಸುದ್ದಿಗಳನ್ನು ಹರಡಿ ನಮ್ಮ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದ ಸಂಕಷ್ಟಗಳಿಗೆ ಸ್ಪಂದಿಸಲಾಗದವರು ತಮ್ಮ ಹುಳುಕನ್ನು ಮುಚ್ಚಿಹಾಕಲು ಇಂತಹ ಟೀಕೆಗಳನ್ನು ಮಾಡುತ್ತಿದ್ದಾರೆ. ಇನ್ನೊಂದೆಡೆ ನಮ್ಮ ಗ್ಯಾರಂಟಿಗಳನ್ನು ಕದ್ದು ಅವರ ಗ್ಯಾರಂಟಿಗಳೆಂದು ನಂಬಿಸಲು ಹೆಣಗಾಡುತ್ತಿರುವುದು ವಿಪರ್ಯಾಸ. ಇಂತಹ ಟೀಕೆಗಳಿಗೆ ನಾನಲ್ಲ; ಶರಣರೇ ಉತ್ತರ ನೀಡಿದ್ದಾರೆ:

ಗ್ಯಾರಂಟಿ ಯೋಜನೆಯೊಂದಿಗೆ ಅಭಿವೃದ್ಧಿಯ ಮುನ್ನೋಟ (Guarantees and Beyond)

ಭವಿಷ್ಯದ ಕುರಿತ ನಮ್ಮ ದೂರದೃಷ್ಟಿ ಗ್ಯಾರಂಟಿ ಯೋಜನೆಗಳಿಗಷ್ಟೇ ಸಿಮೀತವಾಗಿರುವುದಿಲ್ಲ. ಇಷ್ಟು ದೊಡ್ಡ ಮಟ್ಟದ ಗ್ಯಾರಂಟಿ ಯೋಜನೆಗಳ ಮಧ್ಯೆಯೂ ನಮ್ಮ ಸರ್ಕಾರದ ಒಂಭತ್ತು ತಿಂಗಳ ಅವಧಿಯಲ್ಲಿ ಸುಮಾರು 21,168 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಸಚಿವ ಸಂಪುಟದ ಅನುಮೋದನೆ ನೀಡಿದ್ದೇವೆ ಮತ್ತು ಹಿಂದೆ ಅನುಮೋದನೆಗೊಂಡ ಕಾಮಗಾರಿಗಳ 2,230 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಿದ್ದೇವೆ.

 

2,188 ಕೋಟಿ ರೂ.ಗಳ ಕ್ರಿಯಾ ಯೋಜನೆಗೂ ಅನುಮೋದನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಹಾಗೂ ತ್ವರಿತ ಆರ್ಥಿಕ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣಕ್ಕೆ ನಾವು ಒತ್ತು ನೀಡಿದ್ದೇವೆ. ಆರ್ಥಿಕ ಅಭಿವೃದ್ಧಿಗೆ ಪೂರಕ ಮೂಲಸೌಕರ್ಯಗಳಾದ ಎಕ್ಸ್‌ಪ್ರೆಸ್‌ವೇ, ಅತ್ಯುತ್ತಮ ಗ್ರಾಮೀಣ ರಸ್ತೆಗಳು, ವಿಶ್ವದರ್ಜೆಯ ವಿಮಾನ ನಿಲ್ದಾಣಗಳು, ಕೈಗಾರಿಕಾ ಕಾರಿಡಾರ್‌ಗಳು ಮತ್ತು ನಗರ ಪ್ರದೇಶಗಳಲ್ಲಿ ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ರೂಪಿಸಲು ಅಗತ್ಯ ಸಂಪನ್ಮೂಲ ಕ್ರೋಢೀಕರಿಸಲಾಗುವುದು. ವಿದ್ಯುತ್‌ ಉತ್ಪಾದನೆಯಲ್ಲಿ ಮತ್ತೆ ಮುಂಚೂಣಿಯ ರಾಜ್ಯವಾಗಿ ಹೊರಹೊಮ್ಮಲು ಇಂಧನ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಲಾಗುವುದು. 

ಬೆಂಗಳೂರು ನಗರವನ್ನು ವಿಶ್ವದರ್ಜೆಯ ಮೂಲಸೌಕರ್ಯ ಒದಗಿಸುವ ಮೂಲಕ ಜಾಗತಿಕ ಮಟ್ಟದ ನಗರವಾಗಿ ಅಭಿವೃದ್ಧಿಪಡಿಸಲಾಗುವುದು. ಐಟಿ ಮತ್ತು ಬಿಟಿ ವಲಯ, ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್‌, ಸೆಮಿ-ಕಂಡಕ್ಟರ್‌, ಆಟೋಮೊಬೈಲ್‌ ಮತ್ತು ಇತರ ಪ್ರವರ್ಧಮಾನಕ್ಕೆ ಬರುತ್ತಿರುವ ವಲಯಗಳ ಜಾಗತಿಕ ಪ್ರತಿಭೆಗಳನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗುವುದು. ಈ ವಿಷಯದಲ್ಲಿ ನಾವು ದೇಶಕ್ಕೇ ಮಾದರಿಯಾಗಿ ಕಾರ್ಯನಿರ್ವಹಿಸಲಿದ್ದೇವೆ. ಇದು ನಮ್ಮ ಕಾಯಕ.

ಮಾನವ ಸಂಪನ್ಮೂಲ ಅಭಿವೃದ್ಧಿಗೆ ತಳಪಾಯವಾದ ಶಿಕ್ಷಣ, ಆರೋಗ್ಯ ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಲಾಗುವುದು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅತ್ಯುತ್ತಮ ಗುಣಮಟ್ಟದ ಶಾಲೆಗಳನ್ನು ಅಭಿವೃದ್ಧಿಪಡಿಸಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿ, ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆ ರೂಪಿಸಲಿದೆ. ನಮ್ಮ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ಸ್ಥಳೀಯವಾಗಿಯೇ ಅತ್ಯುತ್ತಮ ಪ್ರಾಥಮಿಕ ಆರೋಗ್ಯ ಸೇವೆಗಳು ಹಾಗೂ ಸೂಪರ್‌-ಸ್ಪೆಷಾಲಿಟಿ ಆಸ್ಪತ್ರೆಗಳ ಸೇವೆಗಳನ್ನು ದೊರಕಿಸಲಿದೆ. ಕೌಶಲ್ಯಾಭಿವೃದ್ಧಿ ವಲಯದಲ್ಲಿ ಯುವನಿಧಿ ಮತ್ತು ಯುವನಿಧಿ ಪ್ಲಸ್ ಉಪಕ್ರಮಗಳ ಜೊತೆಗೆ ಮುಂದಿನ 5 ವರ್ಷಗಳಲ್ಲಿ ಯುವಜನರು ಉದ್ಯಮದ ಬೇಡಿಕೆಗೆ ತಕ್ಕಂತ ಉದ್ಯೋಗಗಳಿಗೆ ಸಜ್ಜಾಗಲಿದ್ದಾರೆ. ಈ ಉಪಕ್ರಮಗಳಿಗೆ ನಮ್ಮ ಬದ್ಧತೆ ಅಚಲವಾದುದು.

ಈ ಎಲ್ಲಾ ದಿಟ್ಟ ಹಾಗೂ ದೂರದೃಷ್ಟಿಯ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ದಕ್ಷ ಹಾಗೂ ಸಂಕಲ್ಪಶಕ್ತಿಯುಳ್ಳ ಆಡಳಿತ ವ್ಯವಸ್ಥೆಯನ್ನು ಹೊಂದುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಸಾಂಸ್ಥಿಕ ಸುಧಾರಣೆಗಳು, ವಿಕೇಂದ್ರೀಕರಣ, ಹೊಣೆಗಾರಿಕೆ ಹಾಗೂ ಫಲಿತಾಂಶ ಆಧಾರಿತ ಆಡಳಿತದ ಮೂಲಕ ಆಡಳಿತ ವ್ಯವಸ್ಥೆಯ ಕುರಿತು ಜನರಲ್ಲಿ ಮತ್ತೆ ವಿಶ್ವಾಸ ಮೂಡಿಸುವುದು ನಮ್ಮ ಆಶಯವಾಗಿದೆ.

ಅಭಿವೃದ್ಧಿಯ ಈ ನೀಲ ನಕಾಶೆಯನ್ನು ಯಶಸ್ವಿಯಾಗಿ ವಾಸ್ತವಕ್ಕಿಳಿಸಲು ಅವಿರತವಾಗಿ ಮುಂದಿನ ನಾಲ್ಕು ವರ್ಷ ಶ್ರಮಿಸುತ್ತೇವೆ. ವಿನೂತನ ಚಿಂತನೆಗಳು, ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಬಸವಣ್ಣ ಮತ್ತು ಅಂಬೇಡ್ಕರ್‌ ಅವರ ಹಾದಿಯಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನಿಡಬೇಕಾಗಿದೆ. ಈ ಆಯವ್ಯಯವು ನಮ್ಮ ರಾಜ್ಯದ ಮುಂದಿನ ನಡೆಯನ್ನು ನಿರೂಪಿಸುತ್ತದೆ. ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಪರ್ವವನ್ನೊಳಗೊಂಡ ಕರ್ನಾಟಕದ ಅಭಿವೃದ್ಧಿಗೆ ಮುಂದಿನ ಒಂದು ದಶಕದ ಹಾದಿಯನ್ನು ನಿಚ್ಚಳಗೊಳಿಸಲಿದೆ.

ಈ ಆಯವ್ಯಯವು ಗ್ಯಾರಂಟಿ ಯೋಜನೆಗಳೊಂದಿಗೆ ಉದ್ಯೋಗ ಸೃಜನೆ, ಶಿಕ್ಷಣ, ಆರೋಗ್ಯ, ಹಸಿವು ನಿವಾರಣೆ, ಕೃಷಿ ಮತ್ತು ನೀರಾವರಿಗೆ ಪ್ರೋತ್ಸಾಹ, ಮೂಲಸೌಕರ್ಯ ಅಭಿವೃದ್ಧಿ ಮತ್ತಿತರ ವಲಯಗಳ ಅಭಿವೃದ್ಧಿಗೆ ಒತ್ತು ನೀಡಲಿದೆ. ಎಲ್ಲಾ ದುರ್ಬಲ ವರ್ಗದ ಜನರಿಗೆ ಗೌರವಯುತ ಸ್ಥಾನಮಾನ ದೊರಕಿಸಲು ಆದ್ಯತೆ ನೀಡಲಿದೆ. ಈ ಆಯವ್ಯಯವು ಕರ್ನಾಟಕ ಮಾದರಿ ಅಭಿವೃದ್ಧಿಯ ಹೊಸ ದೃಷ್ಟಾಂತವನ್ನು ರೂಪಿಸಲಿದೆ.

ರಾಜ್ಯದ ಆರ್ಥಿಕತೆ

ರಾಜ್ಯದ ಆರ್ಥಿಕತೆಯು 2023-24ನೇ ಸಾಲಿನಲ್ಲಿ ಶೇ.6.6ರಷ್ಟು

(ಸ್ಥಿರ ಬೆಲೆಗಳಲ್ಲಿ) ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದ ಈ ಶ್ಲಾಘನೀಯ ಬೆಳವಣಿಗೆಯು, ದೇಶದ ಆರ್ಥಿಕತೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂಬುದನ್ನು ದೃಢಪಡಿಸಿದೆ.

ಸೇವಾ ಮತ್ತು ಕೈಗಾರಿಕಾ ವಲಯಗಳು ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಕಳೆದ ಸಾಲಿಗೆ ಹೋಲಿಸಿದರೆ, 2023-24ನೇ ಸಾಲಿನಲ್ಲಿ ಸೇವಾ ವಲಯವು ಶೇ.8.7ರಷ್ಟು (ಸ್ಥಿರ ಬೆಲೆಗಳಲ್ಲಿ) ಮತ್ತು ಕೈಗಾರಿಕೆ ವಲಯವು ಶೇ.7.5ರಷ್ಟು

(ಸ್ಥಿರ ಬೆಲೆಗಳಲ್ಲಿ) ಬೆಳವಣಿಗೆ ಸಾಧಿಸಿದೆ. ಪ್ರಸಕ್ತ ವರ್ಷದಲ್ಲಿ ಮುಂಗಾರು ವೈಫಲ್ಯದಿಂದ ರಾಜ್ಯವು ತೀವ್ರ ಬರಗಾಲವನ್ನು ಎದುರಿಸಬೇಕಾಯಿತು. ಇದರಿಂದಾಗಿ ಕೃಷಿ ಕ್ಷೇತ್ರವು ಶೇ.1.8ರಷ್ಟು (ಸ್ಥಿರ ಬೆಲೆಗಳಲ್ಲಿ) ಋಣಾತ್ಮಕ ಬೆಳವಣಿಗೆ ಹೊಂದಿದೆ.

ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿನ ಕುಸಿತ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿನ ಬಡ್ಡಿ ದರಗಳ ಹೆಚ್ಚಳದಿಂದ ಪ್ರಸಕ್ತ ವರ್ಷದ ಮೊದಲ ಆರು ತಿಂಗಳುಗಳಲ್ಲಿ ನಮ್ಮ ದೇಶಕ್ಕೆ ವಿದೇಶಿ ನೇರ ಹೂಡಿಕೆಯ ಕುಸಿತದ ನಡುವೆಯೂ, ರಾಜ್ಯದಲ್ಲಿ ಸೆಪ್ಟೆಂಬರ್ 2023ರ ಅಂತ್ಯದವರೆಗೆ 2.8 ಶತಕೋಟಿ ಅಮೇರಿಕನ್ ಡಾಲರ್ಗಳಷ್ಟು ವಿದೇಶಿ ಹೂಡಿಕೆಯಾಗಿರುತ್ತದೆ. ಇದು ವಿದೇಶಿ ಬಂಡವಾಳದಾರರಿಗೆ ರಾಜ್ಯವು ಆಕರ್ಷಕ ಹೂಡಿಕೆ ಕೇಂದ್ರವಾಗಿರುವುದನ್ನು ಸಾಬೀತುಪಡಿಸಿದೆ.

ರಾಜ್ಯದ ಆರ್ಥಿಕ ಸ್ಥಿತಿ

ಕರ್ನಾಟಕ ರಾಜ್ಯವು ದೇಶದಲ್ಲಿ ಅತಿ ಹೆಚ್ಚು ಜಿ.ಎಸ್.ಟಿ ತೆರಿಗೆ ಸಂಗ್ರಹಿಸುವ 2ನೇ ರಾಜ್ಯವಾಗಿದ್ದು, 2022-23ಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯು ಶೇ.18ರಷ್ಟು ಹೆಚ್ಚಳ ಕಂಡಿದೆ. ಸ್ವಂತ ತೆರಿಗೆ ರಾಜಸ್ವವು ಹಿಂದಿನ ವರ್ಷಕ್ಕೆ ಹೋಲಿಸಿದರೆ 2023-24ರಲ್ಲಿ ಶೇ.12ರಷ್ಟು ಬೆಳವಣಿಗೆಯನ್ನು ಸಾಧಿಸಲಿದೆ. ಗ್ಯಾರಂಟಿ ಯೋಜನೆಗಳಿಂದ ಜನರ ಆದಾಯ ಪ್ರಮಾಣ ಹೆಚ್ಚಾಗಿ, ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಿರುವುದನ್ನು ಇದು ತೋರಿಸುತ್ತದೆ.

ಕೇಂದ್ರ ಹಾಗೂ ರಾಜ್ಯಗಳ ಸಂಬಂಧ ನೌಕರ ಹಾಗೂ ಯಜಮಾನರ ಸಂಬಂಧಗಳಾಗದೆ ಸಂವಿಧಾನದತ್ತ ಅಧಿಕಾರ ವ್ಯಾಪ್ತಿಯೊಳಗೆ ಸ್ವಾಯತ್ತ ಘಟಕಗಳಾಗಿರಬೇಕು. ರಾಜ್ಯಗಳ ಜೊತೆ ಸಮಾನತೆಯ ಆಧಾರದಲ್ಲಿ ವ್ಯವಹರಿಸಬೇಕು.

–           ಭಾರತ ರತ್ನ ಕರ್ಪೂರಿ ಠಾಕೂರ್

 

ಸರಕು ಮತ್ತು ಸೇವಾ ತೆರಿಗೆಯನ್ನು ಪರಿಚಯಿಸುವ ಮೂಲಕ ರಾಜ್ಯಗಳ ತೆರಿಗೆ ಸಂಗ್ರಹಣೆಯು ಶೇ.14ರಷ್ಟು ಬೆಳವಣಿಗೆ ಹೊಂದಲಿದ್ದು, ಒಂದು ವೇಳೆ ಅಂದಾಜಿಗಿಂತ ಕಡಿಮೆ ಸಂಗ್ರಹವಾದಲ್ಲಿ, ಕೇಂದ್ರ ಸರ್ಕಾರದಿಂದ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರಗಳಿಗೆ ಭರವಸೆ ನೀಡಲಾಗಿತ್ತು. ಶೇ.14ರಷ್ಟು ಬೆಳವಣಿಗೆ ದರದಂತೆ 2017 ರಿಂದ 2023-24ರವರೆಗೆ ರಾಜ್ಯದಲ್ಲಿ ಒಟ್ಟು 4,92,296 ಕೋಟಿ ರೂ.ಗಳ ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ವಾಸ್ತವಿಕವಾಗಿ ರಾಜ್ಯದಲ್ಲಿ 3,26,764 ಕೋಟಿ ರೂ.ಗಳ ಜಿ.ಎಸ್.ಟಿ ತೆರಿಗೆ ಸ್ವೀಕೃತವಾಗಿದೆ. ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯಲ್ಲಿನ ಕೊರತೆ 1,65,532 ಕೋಟಿ ರೂ.ಗಳಿಗೆ ಎದುರಾಗಿ, ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೇವಲ 1,06,258 ಕೋಟಿ ರೂ. ಪರಿಹಾರವನ್ನು ಮಾತ್ರ ಬಿಡುಗಡೆ ಮಾಡಿದೆ.  ಜಿ.ಎಸ್.ಟಿ. ತೆರಿಗೆಯ ಈ ಅವೈಜ್ಞಾನಿಕ ಅನುಷ್ಠಾನದಿಂದ ರಾಜ್ಯಕ್ಕೆ ಕಳೆದ ಏಳು ವರ್ಷಗಳ ಅವಧಿಯಲ್ಲಿ ಒಟ್ಟು 59,274 ಕೋಟಿ ರೂ.ಗಳ ನಷ್ಟವಾಗಿರುತ್ತದೆ.

15ನೇ ಹಣಕಾಸು ಆಯೋಗವು 2020-21ಕ್ಕೆ ಅನ್ವಯವಾಗುವಂತೆ ನೀಡಿದ್ದ ಮಧ್ಯಂತರ ವರದಿಯ ಶಿಫಾರಸ್ಸಿನಿಂದ ರಾಜ್ಯಕ್ಕಾದ ಅನ್ಯಾಯವನ್ನು ಸರಿಪಡಿಸುವಲ್ಲಿ ಹಿಂದಿನ ಸರ್ಕಾರವು ವಿಫಲವಾಯಿತು. ಹಿಂದಿನ ಸರ್ಕಾರ ಕೈಚೆಲ್ಲಿ ಕೂತಿದ್ದರ ಪರಿಣಾಮವಾಗಿ ಅಂತಿಮ ವರದಿಯ ಶಿಫಾರಸ್ಸಿನಲ್ಲಿಯೂ ಸಹ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಬೇಕಾಯಿತು. ರಾಜ್ಯದ ಜಿ.ಎಸ್.ಡಿ.ಪಿ ಲೆಕ್ಕಾಚಾರ ಮಾಡುವ ವಿಧಾನದಲ್ಲಿ ಬದಲಾವಣೆ ಹಾಗೂ 1971ರ ಬದಲು 2011ರ ಜನಗಣತಿ ವರದಿಯ ಬಳಕೆಯಿಂದಾಗಿ ಅಭಿವೃದ್ಧಿಶೀಲ ರಾಜ್ಯಗಳಿಗೆ ಭಾರೀ ನಷ್ಟವುಂಟಾಗಿದೆ. 14ನೇ ಹಣಕಾಸು ಆಯೋಗ ಶಿಫಾರಸ್ಸು ನೀಡಿದ್ದ ಹಂಚಿಕೆಯ ಸೂತ್ರವನ್ನು ಪಾಲಿಸಿದ್ದರೆ ಕರ್ನಾಟಕ ರಾಜ್ಯಕ್ಕೆ

2,77,350 ಕೋಟಿ ರೂ.ಗಳ ತೆರಿಗೆ ಪಾಲು ಸ್ವೀಕೃತವಾಗುತ್ತಿತ್ತು. ಆದರೆ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಿಂದ ರಾಜ್ಯಕ್ಕೆ  2,15,253 ಕೋಟಿ ರೂ.ಗಳು ಮಾತ್ರ ಹಂಚಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. 15ನೇ ಹಣಕಾಸು ಆಯೋಗದ ಆರು ವರ್ಷದ ಅವಧಿಯಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಹಂಚಿಕೆಯಾಗುವ ಒಟ್ಟು ತೆರಿಗೆ ಹಂಚಿಕೆಯಲ್ಲಿ, ರಾಜ್ಯಕ್ಕೆ 62,098 ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ, 15ನೇ ಹಣಕಾಸು ಆಯೋಗವು ಮೊದಲನೆಯ ವರದಿಯಲ್ಲಿ 2020-21ನೇ ವರ್ಷಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ಒದಗಿಸುವಂತೆ ಹಾಗೂ ಅಂತಿಮ ವರದಿಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ 6,000 ಕೋಟಿ ರೂ. ರಾಜ್ಯ ಕೇಂದ್ರಿತ ಅನುದಾನವನ್ನು ಶಿಫಾರಸ್ಸು ಮಾಡಿತ್ತು. ಆದರೆ ಈ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರವು ತಿರಸ್ಕರಿಸಿರುತ್ತದೆ. ರಾಜ್ಯದಲ್ಲಿ ಡಬಲ್ ಇಂಜಿನ್ ಎಂದು ಹೇಳಿಕೊಳ್ಳುವ ಸರ್ಕಾರ ಇದ್ದರೂ ಸಹ ಕೇಂದ್ರದಿಂದ ಒಟ್ಟು 11,495 ಕೋಟಿ ರೂ.ಗಳ ವಿಶೇಷ ಅನುದಾನ ಪಡೆಯುವಲ್ಲಿ ಹಿಂದಿನ ಸರ್ಕಾರವು ಅಸಮರ್ಥವಾಗಿರುತ್ತದೆ.

15ನೇ ಹಣಕಾಸು ಆಯೋಗಕ್ಕೆ ಸರಿಯಾದ ವಿಶ್ಲೇಷಣೆಯೊಂದಿಗೆ ಜ್ಞಾಪನಾ ಪತ್ರದ (Memorandum) ಮೂಲಕ ಹಕ್ಕೊತ್ತಾಯ ಮಂಡಿಸಿದ್ದರೂ, ರಾಜ್ಯಕ್ಕೆ ನ್ಯಾಯ ಸಿಕ್ಕಿರುವುದಿಲ್ಲ. ಈ ಅನ್ಯಾಯವು ಮರುಕಳಿಸದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಸಚಿವ ಸಂಪುಟದ ಮಾರ್ಗದರ್ಶನದೊಂದಿಗೆ ವಿಷಯ ತಜ್ಞರನ್ನು ಒಳಗೊಂಡ ತಾಂತ್ರಿಕಕೋಶವನ್ನು ರಚಿಸಿ ರಾಜ್ಯಕ್ಕೆ ಹೆಚ್ಚು ತೆರಿಗೆ ಪಾಲು ಮತ್ತು ಅನುದಾನಗಳನ್ನು ಪಡೆಯಲು ಒಂದು ಜ್ಞಾಪನಾ ಪತ್ರವನ್ನು (Memorandum) ಸಿದ್ಧಪಡಿಸಿ ಸಮರ್ಥವಾದ ಮತ್ತು ವೈಜ್ಞಾನಿಕವಾಗಿ ವಿಶ್ಲೇಷಿಸಿದ ಅಂಕಿಅಂಶಗಳೊಂದಿಗೆ 16ನೇ ಹಣಕಾಸು ಆಯೋಗಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ. 

ಕೇಂದ್ರ ಸರ್ಕಾರವು ಸೆಸ್ ಮತ್ತು ಸರ್ಚಾರ್ಜ್ಗಳನ್ನು ಹೆಚ್ಚಿಸುತ್ತಿದ್ದು, ಅವುಗಳನ್ನು ರಾಜ್ಯಗಳೊಂದಿಗೆ ಹಂಚಿಕೆ ಮಾಡುವುದಿಲ್ಲ.

ಕೇಂದ್ರ ಸರ್ಕಾರವು ವಿಧಿಸುವ ಸೆಸ್ ಮತ್ತು ಸರ್ಚಾರ್ಜ್ಗಳು 2017-18 ರಿಂದ 2023-24ರ ಅವಧಿಯಲ್ಲಿ ಶೇ.153ರಷ್ಟು ಹೆಚ್ಚಾಗಿರುತ್ತದೆ. ಸೆಸ್ ಮತ್ತು ಸರ್ಚಾರ್ಜ್ಗಳನ್ನು ರಾಜ್ಯಗಳೊಂದಿಗೆ ಹಂಚಿಕೆ ಮಾಡಿದ್ದರೆ, ರಾಜ್ಯಗಳಿಗೆ ಒಟ್ಟು 11,34,301 ಕೋಟಿ ರೂ.ಗಳು ಹಂಚಿಕೆಯಾಗುತ್ತಿತ್ತು. ಇದರಿಂದ ಕರ್ನಾಟಕ ರಾಜ್ಯಕ್ಕೆ ಮಾತ್ರ ಕಳೆದ ಏಳು ವರ್ಷಗಳ ಅವಧಿಯಲ್ಲಿ ಒಟ್ಟು 45,322 ಕೋಟಿ ರೂ.ಗಳ ನಷ್ಟ ಉಂಟಾಗಿದೆ.

ಜಿ.ಎಸ್.ಟಿ.ಯ ಅವೈಜ್ಞಾನಿಕ ಅನುಷ್ಠಾನ, ಸೆಸ್ ಮತ್ತು ಸರ್ಚಾರ್ಜ್ಗಳ ಹೆಚ್ಚಳ ಮತ್ತು ತೆರಿಗೆ ಹಂಚಿಕೆಯ ಸೂತ್ರ ಬದಲಾವಣೆ –

ಕೇಂದ್ರ ಸರ್ಕಾರದ ಈ ಮೂರು ಬಗೆಯ ಅನ್ಯಾಯಗಳಿಂದ ಹಾಗೂ ನ್ಯಾಯಯುತವಾಗಿ ರಾಜ್ಯಗಳಿಗೆ ಹಣ ಬಿಡುಗಡೆ ಮಾಡದ ಕಾರಣದಿಂದಾಗಿ ದೇಶದ ಎಲ್ಲಾ ರಾಜ್ಯಗಳ ಹಣಕಾಸು ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷವೇ, ದೇಶದ ಹಲವು ರಾಜ್ಯಗಳಲ್ಲಿ ಆಡಳಿತದಲ್ಲಿರುವ ಕಾರಣ ಅವರಿಗೆ ಈ ಅನ್ಯಾಯಗಳ ವಿರುದ್ಧ ದನಿಯೆತ್ತಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದನಿಯೆತ್ತಿ, ರಾಜ್ಯಗಳ ಹಕ್ಕಿನ ರಕ್ಷಣೆ ಮಾಡುವ ಹೊಣೆಗಾರಿಕೆ ನಮ್ಮದಾಗಿದೆ.

ಬೆಲೆ ಏರಿಕೆ, ನಿರುದ್ಯೋಗ ಮತ್ತು ಆದಾಯದ ಅಸಮಾನತೆಗಳಿಂದ ರಾಷ್ಟ್ರದ ಜನತೆ ತತ್ತರಿಸಿದ್ದು, ಬಡವರಿಗೆ ನೇರವಾಗಿ ಪ್ರಯೋಜನವಾಗುವ ಕಲ್ಯಾಣ ಯೋಜನೆಗಳಿಗೆ ಆಯವ್ಯಯ ಹಂಚಿಕೆಯನ್ನು ಹೆಚ್ಚಿಸುವುದು ರಾಜ್ಯದ ಕರ್ತವ್ಯವಾಗಿದೆ. ರಾಜಸ್ವ ಕೊರತೆಯಲ್ಲಿ ಹೆಚ್ಚಳವಾದರೂ ಸಹ, ಅಭಿವೃದ್ಧಿಯ ಫಲಗಳು ಬಡಜನತೆಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಅಂತಹ ಕಲ್ಯಾಣ ವೆಚ್ಚಗಳು ಅವಶ್ಯಕ. ಸಂಕಷ್ಟದ ಸಮಯದಲ್ಲಿ ಬಡವರು ಮತ್ತು ನಿರ್ಗತಿಕರ ನೆರವಿಗೆ ರಾಜ್ಯ ಸರ್ಕಾರ ಬರದಿದ್ದರೆ ರಾಜಸ್ವ ಹೆಚ್ಚುವರಿ ಸಾಧನೆಯು ಅರ್ಥಹೀನವಾಗಿರುತ್ತದೆ.

 

ಈ ಹಿನ್ನಲೆಯಲ್ಲಿ, ನಾವು ರಾಜಸ್ವ ಕೊರತೆಯ ಆಯವ್ಯಯವನ್ನು ಮಂಡಿಸಿದ್ದರೂ ಸಹ, 2024-25ರ ಆಯವ್ಯಯದಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ 1,20,373 ಕೋಟಿ ರೂ.ಗಳ ಅನುದಾನವನ್ನು ಹಂಚಿಕೆ ಮಾಡಿರುತ್ತೇವೆ. ಅಲ್ಲದೆ ಬಂಡವಾಳ ವೆಚ್ಚಕ್ಕೆ ಅನುದಾನದ ಕೊರತೆ ಉಂಟಾಗದಂತೆ, ನಾವು ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿ.ಯ ಶೇ.3ರೊಳಗೆ ಮತ್ತು ಒಟ್ಟು ಬಾಕಿಯಿರುವ ಹೊಣೆಗಾರಿಕೆಗಳನ್ನು ಜಿ.ಎಸ್.ಡಿ.ಪಿ.ಯ ಶೇ.25ರೊಳಗೆ ಕಾಯ್ದುಕೊಳ್ಳುವ ಮೂಲಕ ವಿತ್ತೀಯ ಹೊಣೆಗಾರಿಕೆಯನ್ನು ಪಾಲಿಸಿರುತ್ತೇವೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top