ರೈತರಿಂದ ಕನಿಷ್ಠ 15 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಲು ಆಗ್ರಹ

Kannada Nadu
ರೈತರಿಂದ ಕನಿಷ್ಠ 15 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಲು ಆಗ್ರಹ

ಬಳ್ಳಾರಿ : ರಾಜ್ಯ ಸರ್ಕಾರವು ಮೆಕ್ಕೆಜೋಳ ಬೆಳೆದ ರೈತರಿಂದ ಖರೀದಿ ಕೇಂದ್ರಗಳ ಮೂಲಕ ಮೆಕ್ಕೆಜೋಳ ಖರೀದಿಸುವುದಾಗಿ ಘೋಷಿಸಿ, ಅನೇಕ ದಿನಗಳು ಕಳೆದರೂ, ಈವರೆಗೂ ಅದು ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಗಣಪಾಲ ಐನಾಥರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಪ್ರತಿಯೋರ್ವ ರೈತರಿಂದ ಕೇವಲ ಐದು ಕ್ವಿಂಟಾಲ್‍ಗಳಷ್ಟು ಮಾತ್ರವೇ ಮೆಕ್ಕೆಜೋಳ ಖರೀದಿಸುವುದಾಗಿ ಅಧಿಕಾರಿಗಳು ಹೇಳುತ್ತಿರುವುದು ರೈತ ವಿರೋಧಿ ಧೋರಣೆ ಹಾಗೂ ಅವೈಜ್ಞಾನಿಕ ನೀತಿಯಾಗಿದೆ ಎಂದು ಖಂಡಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿ ಎಕರೆಗೆ ಅಂದಾಜು 30 ಕ್ವಿಂಟಾಲ್‍ಗಳವರೆಗೆ ಇಳುವರಿ ಇದ್ದು, ಖರೀದಿ ಕೇಂದ್ರಗಳಲ್ಲಿ ಕೇವಲ ಐದು ಕ್ವಿಂಟಾಲ್‍ಗಳಷ್ಟು ಮಾತ್ರವೇ ಖರೀದಿ ಮಾಡಿದರೆ ಅದರ ಸಾಗಣೆ ವೆಚ್ಚವೂ ಸಹ ರೈತನ ಕೈಗೆ ಎಟುಕುವುದಿಲ್ಲ. ಈಗಾಗಲೇ ಜಿಲ್ಲೆಯ ರೈತರು, ಎರಡನೇ ಬೆಳೆಗೆ (ಬೇಸಿಗೆ ಬೆಳೆಗೆ) ನೀರಿಲ್ಲದೇ, ಬೆಳೆ ನಷ್ಟದ ಸಂಕಷ್ಟದಲ್ಲಿದ್ದಾರೆ, ಕಾರಣ ಪ್ರತಿಯೋರ್ವ ರೈತರಿಂದ ಕನಿಷ್ಠ 15 ಕ್ವಿಂಟಾಲ್‍ಗಳಷ್ಟು ಮೆಕ್ಕೆಜೋಳವನ್ನು ಖರೀದಿಸಬೇಕು ಎಂದು ಗಣಪಾಲ್ ಐನಾಥರೆಡ್ಡಿಯವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹ ಪಡಿಸಿದ್ದಾರೆ.
ವಿಶ್ವ ಮಣ್ಣು ದಿನಾಚರಣೆ : ಅಂತೆಯೇ ಇಂದು ವಿಶ್ವ ಮಣ್ಣು ದಿನವನ್ನು ಆಚರಿಸುತ್ತಿದ್ದು, ಪರಿಸರ ವ್ಯವಸ್ಥೆ ಮತ್ತು ಸಕಲ ಜೀವರಾಶಿಗಳ ಯೋಗಕ್ಷೇಮಕ್ಕೆ ಮಣ್ಣು ಪ್ರಮುಖ ಅಡಿಪಾಯವಾಗಿದ್ದು, ಈ ಮಣ್ಣಿನ ಅತ್ಯಮೂಲ್ಯವಾದ ಪ್ರಾಮುಖ್ಯತೆಯನ್ನು ಗಮನದಲ್ಲಿರಿಸಿಕೊಂಡು, ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಲು, ಮಣ್ಣು ಹಾಗೂ ಮಣ್ಣಿನ ಆರೋಗ್ಯವನ್ನು ಸಂರಕ್ಷಿಸಲು ಡಿ.5ರಂದು ವಿಶ್ವ ಮಣ್ಣು ದಿನವನ್ನು ಆಚರಿಸುತ್ತಿದ್ದು, ರೈತರು ಈ ನಿಟ್ಟಿನಲ್ಲಿ ಮಣ್ಣಿನ ಆರೋಗ್ಯ ಸಂರಕ್ಷಿಸಬೇಕೆಂದು ಐನಾಥರೆಡ್ಡಿ ಕೋರಿದ್ದಾರೆ.
ಮಣ್ಣಿನ ಸವೆತವು ದಿನ-ದಿನವೂ ಹೆಚ್ಚಾಗುತ್ತಿದ್ದು, ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ, ಮಣ್ಣಿನ ಫಲವತ್ತತೆ ಹಾಳಾಗುತ್ತಿದ್ದು, ರೈತರು ಇದರ ಬಳಕೆಯನ್ನು ಆದಷ್ಟೂ ಕಡಿಮೆ ಮಾಡಬೇಕೆಂದು ಮತ್ತು ಮುಖ್ಯವಾಗಿ ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಈ ಹಿನ್ನೆಲೆಯಲ್ಲಿ ಮಣ್ಣಿನ ಹಾನಿಯನ್ನು ತಡೆಗಟ್ಟುವುದು, ಮಣ್ಣಿನ ಫಲವತ್ತತೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";