ಮೆಕ್ಕಾ: ಮೆಕ್ಕಾದಿಂದ ಮದೀನಾಗೆ ಭಾರತೀಯ ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಡೀಸೆಲ್ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಪರಿಣಾಮ, ಸುಮಾರು 42 ಮಂದಿ ಭಾರತೀಯ ಯಾತ್ರಿಕರು ಸಾವನ್ನಪ್ಪಿರುವ ದುರಂತವೊಂದು ಸೋಮವಾರ ಸಂಭವಿಸಿದೆ.
ಸೋಮವಾರ ಬೆಳಗಿನ ಜಾವ ಮೆಕ್ಕಾದಿಂದ ಮದೀನಾಗೆ ಭಕ್ತರನ್ನು ಕರೆದೊಯ್ಯಲಾಗುತ್ತಿತ್ತು. ದುರಂತದ ಸಮಯದಲ್ಲಿ ಸುಮಾರು 20 ಮಹಿಳೆಯರು ಮತ್ತು 11 ಮಕ್ಕಳು ಬಸ್ಸಿನಲ್ಲಿದ್ದರು.
ಈ ವೇಳೆ ಬಸ್ ಡೀಸೆಲ್ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಬಸ್ಸಿನಲ್ಲಿದ್ದ 42 ಭಾರತೀಯ ಉಮ್ರಾ ಯಾತ್ರಿಕರು ಸಜೀವ ದಹನವಾಗಿದ್ದಾರೆಂದು ತಿಳಿದುಬಂದಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಮುಫ್ರಿಹತ್ ಎಂದು ಗುರುತಿಸಲಾದ ಸ್ಥಳದಲ್ಲಿ ಭಾರತೀಯ ಕಾಲಮಾನ ಬೆಳಗಿನ ಜಾವ 1.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
ಸ್ಥಳಧಲ್ಲಿ ತುರ್ತು ಕಾರ್ಯಾಚರಣೆಗಳು ನಡೆಯುತ್ತಿದ್ದು, ಹಜ್ ಮತ್ತು ಉಮ್ರಾ ಸಚಿವಾಲಯ ಹಾಗು ಪ್ರಯಾಣ ಸಂಸ್ಥೆ ಅಪಘಾತವನ್ನು ದೃಢಪಡಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಸ್ಥಳೀಯ ಮೂಲಗಳು 42 ಸಾವುಗಳನ್ನು ವರದಿ ಮಾಡಿದ್ದರೂ, ಅಧಿಕಾರಿಗಳು ಇನ್ನೂ ನಿಖರ ಸಾವುನೋವುಗಳ ಸಂಖ್ಯೆ ಮತ್ತು ಬದುಕುಳಿದವರ ಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ.
ಘಟನೆಯಲ್ಲಿ ಓರ್ವ ಯುವಕ ಮಾತ್ರ ಬದುಕುಳಿದಿದ್ದು, ಆತನನ್ನು 25 ವರ್ಷದ ಅಬ್ದುಲ್ ಶುಹೈಬ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಘಟನೆಯ ಸಂದರ್ಭದಲ್ಲಿ ಯಾತ್ರಿಕರೆಲ್ಲರೂ ನಿದ್ರೆಯಲ್ಲಿದ್ದದ್ದರಿಂದ ಭಾರೀ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಸಹಾಯವಾಣಿ ಆರಂಭ
ಈ ನಡುವೆ ಜಿದ್ದಾದ ಭಾರತೀಯ ರಾಯಭಾರಿ ಕಚೇರಿಯಲ್ಲಿ 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದ್ದು, ಸಹಾಯವಾಣಿಗಾಗಿ 8002440003 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ಘಟನೆಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಪ್ರತಿಕ್ರಿಯಿಸಿದ್ದು, ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.
ಸೌದಿ ಅರೇಬಿಯಾದ ಮದೀನಾದಲ್ಲಿ ಭಾರತೀಯ ಪ್ರಜೆಗಳು ಅಪಘಾತದಲ್ಲಿ ಸಾವನ್ನಪ್ಪಿರುವುದು ತೀವ್ರ ಆಘಾತ ತಂದಿದೆ.
ರಿಯಾದ್ನಲ್ಲಿರುವ ನಮ್ಮ ರಾಯಭಾರ ಕಚೇರಿ ಮತ್ತು ಜಿದ್ದಾದ ರಾಯಭಾರ ಕಚೇರಿ ಈ ಅಪಘಾತದಿಂದ ಹಾನಿಗೊಳಗಾದ ಭಾರತೀಯ ಪ್ರಜೆಗಳು ಮತ್ತು ಕುಟುಂಬಗಳಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿವೆ. ಮೃತರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆಂದು ತಿಳಿಸಿದ್ದಾರೆ.



