ಹೊಸಪೇಟೆ:ದೆಹಲಿ ಕೆಂಪು ಕೋಟೆ ಬಳಿ ಸೋಮವಾರ ರಾತ್ರಿ ಬಾಂಬ್ ಸ್ಪೋಟಗೊಂಡು ಸಾವು- ನೋವು ಸಂಭವಿಸಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಶ್ವವಿಖ್ಯಾತ ಹಂಪಿ ಹಾಗೂ
ತುಂಗಭದ್ರಾ ಅಣೆಕಟ್ಟು ಸೇರಿದಂತೆ ಜನನಿ ಬಿಡ ಪ್ರದೇಶದಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿದ ಕಟ್ಟೆಚ್ಚರ ವಹಿಸಿದ್ದು, ಅಪರಿಚಿತ ವಾಹನ ಹಾಗೂ ವ್ಯಕ್ತಿಗಳ ಮೇಲೆ ತೀವ್ರ ನಿಗಾವಹಿಸಲಾಗಿದೆ.
ದೆಹಲಿಯಲ್ಲಿ ಬಾಂಬ್ ಸ್ಫೋಟಗೊಳ್ಳುತ್ತಿದ್ದಂತೆ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಎಸ್ಪಿ ಎಸ್.ಜಾಹ್ನವಿ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಎಲ್ಲೆಡೆ ಬಿಗಿ ಭದ್ರತೆ ಕೈಗೊಂಡಿದೆ. ಎಸ್ಪಿ ಜಾಹ್ನವಿ ಅವರು ತಡ ರಾತ್ರಿಯೇ ಬಾಂಬ್ ಸ್ಕಾಡ್, ಶ್ವಾನ ಪಡೆಯೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, ಕ್ರಸ್ಟ್ ಗೇಟ್‌ಗಳು, ಮುಖ್ಯ ಪ್ರವೇಶ ದ್ವಾರ ಹಾಗೂ ವೈಕುಂಠ ಪ್ರದೇಶದಲ್ಲಿ ತಪಾಸಣೆ ನಡೆಸಿ, ಇದೇ ವೇಳೆ ಭದ್ರತಾ ಕ್ರಮವನ್ನು ಪರಿಶೀಲಿಸಿ, ಅಧಿಕಾರಿ- ಸಿಬ್ಬಂದಿ ಸೂಕ್ತ ಮಾರ್ಗದರ್ಶನ ನೀಡಿದರು.
ಹಂಪಿ ಸುತ್ತಮುತ್ತ ಬಿಗಿ ಭದ್ರತೆ:
ವಿಶ್ವವಿಖ್ಯಾತ ಹಂಪಿಗೆ ಆಗಮಿಸುವ ದೇಶ- ವಿದೇಶದ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಐತಿಹಾಸಿಕ ತಾಣಗಳಲ್ಲಿ ಖಾಕಿ ಕಣ್ಗಾವಲು ಹೆಚ್ಚಿಸ ಲಾಗಿದೆ. ಅದರೊಂದಿಗೆ ತಡ ರಾತ್ರಿಯೇ ಹೊಸಪೇಟೆ ಮತ್ತು ಹಂಪಿ ಭಾಗದ ಲಾಡ್ಜ್, ರೆಸಾರ್ಟ್, ಹೋಂ ಸ್ಟೇಗಳಿಗೆ ಭೇಟಿ ನೀಡಿದ ಖಾಕಿ ಪಡೆ, ಅಲ್ಲಿ ವಾಸ್ತವ್ಯ ಹೂಡಿದವರ ಪೂರ್ವ ಪರ ಮಾಹಿತಿ ಕಲೆ ಹಾಕಿದರು. ಸೂಕ್ತ ದಾಖಲೆ ನೀಡದವರಿಗೆ ವಾಸ್ತವ್ಯಕ್ಕೆ ಅನುಮತಿ ನೀಡಬಾರದು. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣವೇ ಸಮೀಪದ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ ೧೧೨ಗೆ ಕರೆ ಮಾಡುವಂತೆ ಸೂಚಿಸಿದರು.
ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ, ವಿಜಯ ವಿಠ್ಠಲ ಮಂದಿರ, ರಾಣಿ ಸ್ನಾನ ಗೃಹ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಹೊಸಪೇಟೆ ರೈಲ್ವೇ ನಿಲ್ದಾಣದಲ್ಲೂ ರೈಲ್ವೇ ಪೊಲೀಸ್ ಬಾಂಬ್ ನಿಗ್ರಹ ಪಡೆ ವಾಹನಗಳ ಪಾರ್ಕಿಂಗ್ ಏರಿಯಾದಲ್ಲಿ ಅನುಮಾನಾಸ್ಪದ ವಸ್ತುಗಳು, ಸ್ಪೋಟಕಗಳಿರುವ ಬಗ್ಗೆ ಪರಿಶೀಲನೆ ನಡೆಸಿದರು. ಅದರಂತೆ ಜಿಲ್ಲೆಯ ಎಲ್ಲ ಬಸ್ ನಿಲ್ದಾಣಗಳಲ್ಲಿ ಆಯಾ ಠಾಣಾ ಸಿಬ್ಬಂದಿ ಪರಿಶೀಲನೆ ನಡೆಸಿದರು.
ಹೊಸಪೇಟೆ ಸೇರಿದಂತೆ ವಿವಿಧ ತಾಲೂಕು ಕೇಂದ್ರ ಹಾಗೂ ಗ್ರಾಮೀಣ ಭಾಗದಲ್ಲಿ ತಡ ರಾತ್ರಿ ಸಂಚರಿಸುತ್ತಿದ್ದ ವಾಹನಗಳನ್ನು ಪೊಲೀಸರು ತಡೆದು ಪರಿಶೀಲನೆ ನಡೆಸಿದರು. ವಾಹನಗಳ ದಾಖಲೆಗಳು ಹಾಗೂ ಅದರಲ್ಲಿರುವ ಲಗೇಜ್‌ಗಳನ್ನೂ ತಪಾಸಣೆ ನಡೆಸಿದರು. ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬಾರದಿದ್ದರಿಂದ ವಾಹನಗಳನ್ನು ಬಿಟ್ಟು ಕಳುಹಿಸಿದರು.
ದೆಹಲಿ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲೆಡೆ ಕಟ್ಟೆಚ್ಚರ ವಹಿಸಲು ಸೂಚಿಸಿದೆ. ಆದರೆ, ವಿಶ್ವವಿಖ್ಯಾತ ಹಂಪಿ ಇರುವುದಿಂದ ಜಿಲ್ಲೆಯಲ್ಲಿ ಸದಾ ಪೊಲೀಸ್ ಭದ್ರತೆ ಕೈಗೊಳ್ಳಲಾಗಿರುತ್ತದೆ. ಈ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಕೊಂಚ ಹೆಚ್ಚಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಮುಂಜಾಗ್ರತೆ ಕೈಗೊಳ್ಳಲಾಗಿದೆ.
– ಎಸ್.ಜಾಹ್ನವಿ, ಎಸ್ಪಿ, ವಿಜಯನಗರ



