ಬಳ್ಳಾರಿ: ತುಂಗಭದ್ರಾ ಡ್ಯಾಂ ವ್ಯಾಪ್ತಿಯ ನಾಲ್ಕು ಜಿಲ್ಲೆಗಳ ರೈತರ ಎರಡನೇ ಬೆಳೆಗೆ (ಬೇಸಿಗೆ ಬೆಳೆ) ನೀರು ಹಾಯಿಸಲು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಸಿರುಗುಪ್ಪ ತಾಲ್ಲೂಕಿನ ಕರೂರಿನಿಂದ ತುಂಗಭದ್ರಾ ಜಲಾಶಯದವರೆಗೆ ಪಾದಯಾತ್ರೆ ನಡೆಸಲಿದೆ.
ನ.12 ಬುಧವಾರದಿಂದ ಕರೂರಿನಿಂದ ಪ್ರಾರಂಭವಾಗುವ ರೈತರ ಪಾದಯಾತ್ರೆಯು ಭಾನುವಾರ ತುಂಗಭದ್ರಾ ಜಲಾಶಯದ ಸ್ಥಳಕ್ಕೆ ತಲುಪಲಿದೆ. ಬೇಸಿಗೆ ಬೆಳೆಗೆ ನೀರು ಹಾಯಿಸಲೇಬೇಕೆಂದು ಆಗ್ರಹಿಸಿ, ರಾಜ್ಯ ರೈತ ಸಂಘವು ಈ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಕರೂರು ಮಾಧವರೆಡ್ಡಿ ತಿಳಿಸಿದ್ದಾರೆ.
ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.12ರಂದು ಸಿರುಗುಪ್ಪ ತಾಲೂಕಿನ ಕರೂರಿನಿಂದ ಪಾದಯಾತ್ರೆ ಆರಂಭವಾಗಲಿದೆ. ಕರೂರಿನಿಂದ ಕುರುಗೋಡು ಮಾರ್ಗವಾಗಿ ಕಂಪ್ಲಿಯ ಮೂಲಕ ತೆರಳಿ ನ.16 ರಂದು ತುಂಗಭದ್ರಾ ಜಲಾಶಯವನ್ನು (ಟಿ.ಬಿ. ಡ್ಯಾಂ) ತಲುಪಿ ಅಲ್ಲಿ ರೈತರು ಬೃಹತ್ ಪ್ರತಿಭಟನೆ ಹಾಗೂ ಅನಿರ್ಧಿಷ್ಟಾವಧಿ ಧರಣಿ ನಡೆಸಲಿದ್ದಾರೆ ಎಂದರು.
ರೈತರು ಬೆಳೆದಿರುವ ಈಗಿನ ಬೆಳೆಗೆ ಡಿಸೆಂಬರ್‍ವರೆಗೂ ನೀರು ಪೂರೈಸಬೇಕು. ಆನಂತರ ಬೇಸಿಗೆ ಬೆಳೆಗೂ (ಎರಡನೇ ಬೆಳೆಗೂ) ನೀರು ಬಿಡಬೇಕು ಎಂದರಲ್ಲದೇ, ಟಿ.ಬಿ.ಡ್ಯಾಂನ ಎಲ್ಲಾ ಕ್ರಸ್ಟ್‍ಗೇಟ್‍ಗಳನ್ನು ಮುಂದಿನ ವರ್ಷದ ಜೂನ್ ವೇಳೆಗೆ ಅಳವಡಿಸಬೇಕು ಎಂದು ಕರೂರು ಮಾಧವರೆಡ್ಡಿ ಒತ್ತಾಯಿಸಿದರು.
ತುಂಗಭದ್ರಾ ಡ್ಯಾಂನ ವ್ಯಾಪ್ತಿಯ ಬಳ್ಳಾರಿ, ಕೊಪ್ಪಳ, ವಿಜಯನಗರ ಮತ್ತು ರಾಯಚೂರು ಜಿಲ್ಲೆಗಳ ಸಾವಿರಾರು ರೈತರು ಈ ಪಾದಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಬೇಸಿಗೆ ಬೆಳೆಗೆ ನೀರು ಹಾಯಿಸಲು ಆಗ್ರಹಿಸಿ ಕರೂರಿನಿಂದ ಟಿ.ಬಿ.ಡ್ಯಾಂಗೆ ರೈತರ ಪಾದಯಾತ್ರೆ



