ಯಾವ ತಪ್ಪು ಮಾಡದ ನನ್ನ ಮೇಲೆ ಏಕಿಷ್ಟು ದ್ವೇಷ..? ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪ್ರಶ್ನೆ

Kannada Nadu
ಯಾವ ತಪ್ಪು ಮಾಡದ ನನ್ನ ಮೇಲೆ ಏಕಿಷ್ಟು ದ್ವೇಷ..? ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪ್ರಶ್ನೆ

ಮಂಗಳೂರು: ‘ಯಾವ ತಪ್ಪು ಮಾಡದೆ, ಯಾರನ್ನೂ ನೋಯಿಸದೆ ಕರ್ತವ್ಯ ನಿಭಾಯಿಸುತ್ತ ಬಂದಿದ್ದೇನೆ. ನನ್ನ ಮೇಲೆ ಕೆಲವರು ಏಕೆ ದ್ವೇಷ ಕಾರುತ್ತಿದ್ದಾರೆ? ಏಕೆ ನಿಷ್ಠುರವಾಗಿ ವರ್ತಿಸುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ’ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮಸ್ಥಳ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಧರ್ಮಸ್ಥಳದಲ್ಲಿ ಊರ ಜನರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಶ್ರೀ ಮಂಜುನಾಥಸ್ವಾಮಿ ಸನ್ನಿಧಿ ಹಾಗೂ ಅಣ್ಣಪ್ಪಸ್ವಾಮಿ ಬೆಟ್ಟದ ಎದುರು ಶುಕ್ರವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಅವರು ಮಾತನಾಡಿದರು.
‘ಕೆಲ ವಿಷಯಗಳ ಹಿಂದೆ ಏನೆಲ್ಲ ಇದೆ, ಯಾಕೆ ಏಕೆ ಇದೆ ಎಂಬುದು ತಿಳಿದಿದೆ. ಆದರೆ ಕೋಪ ಯಾಕೆ ಎಂಬುದು ತಿಳಿದಿಲ್ಲ. ಬೆಂಬಿಡದೆ ಕಾಡುವ ಬೇತಾಳನಂತೆ ಅಪಚಾರಗಳು ಬಂದಾಗ ಊರ ಜನರು, ಕ್ಷೇತ್ರದ ಭಕ್ತರು ತೋರಿದ ಪ್ರೀತಿ, ವಿಶ್ವಾಸ ನನ್ನ ಜೀವಂತವಾಗಿರಿಸಿದೆ’ ಎಂದರು.
‘ಬಹಳ ಮಂದಿ ನಿರಂತರವಾಗಿ ಬೈದರು. ಆದರೆ ಯಾಕೆ ಬೈಯುತ್ತಿದ್ದಾರೆ ಎಂದು ಹೇಳಲೇ ಇಲ್ಲ. ತಪ್ಪು ಮಾಡಲಿಲ್ಲ, ಯಾರನ್ನೂ ಹೀಯಾಳಿಸಿಲ್ಲ ಎಂಬ ಆತ್ಮವಿಶ್ವಾಸ ಮತ್ತು ಊರವರು ಇರಿಸಿದ ನಂಬಿಕೆಯಿAದ ನಿಶ್ಚಿಂತನಾಗಿದ್ದೇನೆ’ ಎಂದೂ ಹೇಳಿದರು.
‘ರಾಜ್ಯ ಸರ್ಕಾರಕ್ಕೆ ಕೃತಜ್ಞ…’
ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬAಧಿಸಿದAತೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕೃತಜ್ಞತೆ ಸಲ್ಲಿಸಿದ್ದು, ತಪ್ಪು ಮಾಡದಿದ್ದರೂ ನಮ್ಮ ಮೇಲೆ ಯಾಕಿಷ್ಟು ದ್ವೇಷ-ಆರೋಪ ಎಂದು ಪ್ರಶ್ನಿಸಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ವೀರೇಂದ್ರ ಹೆಗ್ಗಡೆ ಅವರು, ಧರ್ಮಸ್ಥಳ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ, ಇದರಿಂದಾಗಿ ಸತ್ಯ ಹೊರಬರುತ್ತಿದೆ. ನಾನು ಹಲವಾರು ಪುಸ್ತಕಗಳನ್ನು ಓದುತ್ತಿದ್ದೇನೆ. ಸೇವೆ ಮತ್ತು ಧರ್ಮ ನಮ್ಮ ಆದ್ಯತೆ ಎಂದು ಹೇಳಿದ ಸಿದ್ಧಗಂಗಾ ಶ್ರೀಗಳ ಪುಸ್ತಕಗಳನ್ನು ನಾನು ಓದಿದ್ದೇನೆ. ಏನೂ ತಪ್ಪು ಮಾಡಿದಿದ್ದರೂ ನಮ್ಮ ಮೇಲೆ ಇಷ್ಟೊಂದು ದ್ವೇಷ ಮತ್ತು ಆರೋಪಗಳು ಏಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಾವು ಸೇವೆಯನ್ನು ನೀಡುತ್ತಿದ್ದೇವೆ ಮತ್ತು ಈ ನಿಸ್ವಾರ್ಥ ಸೇವೆಯೇ ನಮ್ಮನ್ನು ಆರೋಗ್ಯವಾಗಿಟ್ಟಿದೆ. ಧರ್ಮಸ್ಥಳ ಮತ್ತು ಧರ್ಮಸ್ಥಳದ ಗ್ರಾಮಸ್ಥರು ಪ್ರತ್ಯೇಕವಾಗಿಲ್ಲ ಎಂದು ಹೇಳಿದರು.
ಇಷ್ಟು ವರ್ಷ ನಾವು ಆರೋಗ್ಯವಾಗಿರಲು ನಮ್ಮ ನಿಸ್ವಾರ್ಥ ಸೇವೆಯೇ ಕಾರಣ. ನಮ್ಮ ಎಲ್ಲಾ ಕಾರ್ಯಕ್ರಮಗಳನ್ನು ನೀವು ಎಲ್ಲರೂ ಗಮನಿಸಿದ್ದೀರಿ. ನಾವು ಇಲ್ಲಿ ನಿಮಿತ್ತ ಮಾತ್ರ. ಆದರೆ, ಮುಂದುವರೆಸಿಕೊAಡು ಹೋಗಿದ್ದು ಅದಕ್ಕೆ ಸಂಬAಧಪಟ್ಟ ಇಲಾಖೆಯವರು. ಕೆಲವರು ಪ್ರೀತಿಯಲ್ಲಿ ಟೀಕೆ ಮಾಡಿದ್ದರು. ಇವರ ಹಾಗೆ ಟೀಕೆ ಮಾಡಿಲ್ಲ. ನಿಮಗೆ ನಾನು ಎಷ್ಟು ಕೃತಜ್ಞತೆ ಸಲ್ಲಿಸಿದ್ರೂ ಕಡಿಮೆಯೇ. ಧರ್ಮಸ್ಥಳ ಬೇರೆ, ಧರ್ಮಸ್ಥಳದ ಊರಿನವರು ಬೇರೆ ಅಲ್ಲ. ಎಷ್ಟು ನಿಷ್ಠುರವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆದಿದೆ ಎಂದು ನೀವು ನೋಡಿದ್ದೀರಿ. ಯಾಕೆ ಇಷ್ಟು ದ್ವೇಷ ನನ್ನ ಮೇಲೆ ಇದೆ ಎಂದು ನನಗೆ ಗೊತ್ತಾಗಿಲ್ಲ. ಈಗ ಮನಸ್ಸು ಸ್ವಲ್ಪ ಹಗುರವಾಗಿದೆ, ಎತ್ತರದ ಬೆಟ್ಟದಿಂದ ನೀರು ಹರಿದಿದೆ ಎಂದು ಭಾವುಕರಾದರು.
ನಮ್ಮ ಮೇಲೆ ದೃಢವಾದ ನಂಬಿಕೆ ಇಟ್ಟ ಎಲ್ಲರಿಗೂ ನಾನು ಆಭಾರಿ. ಈಗಾಗಲೇ ಲಕ್ಷಾಂತರ ಜನರು ಇಲ್ಲಿಗೆ ಬಂದು ಹೋಗಿದ್ದಾರೆ ನಿಮ್ಮ ಧರ್ಮ ಸೋತರೆ, ನಮ್ಮ ಧರ್ಮ ಸೋತ ಹಾಗೆ ಅಂತ ಹೇಳಿದ್ದಾರೆ. ಈ ಶತ್ರುತ್ವ ಯಾಕೆ ಎಂದು ಕೇಳ್ತಾರೆ, ನನಗೂ ಈ ದ್ವೇಷ ಯಾಕೆ ಬೇಕು? ನಾವು ಯಾರನ್ನೂ ಹೀಯಾಳಿಸಿಲ್ಲ. ದ್ವೇಷ ಕೂಡ ಮಾಡಿಲ್ಲ. ನಾವು ತಪ್ಪು ಮಾಡದ ಕಾರಣ ನಮಗೆ ಆತ್ಮವಿಶ್ವಾಸ ಇದೆ. ಬೆಂಗಳೂರು ಆಥವಾ ಎಲ್ಲೋ ಕೂತು ಟೀಕೆ ಮಾಡೋರು ನಮಗೆ ಬೇಡ. ನಮಗೆ ನಮ್ಮವರು ಬೇಕು, ನಮ್ಮ ಜೊತೆ ನಿಲ್ಲೋರು ಬೇಕು. ನಮ್ಮ ಮೇಲೆ ಪ್ರೀತಿ ತೋರಿದ ಎಲ್ಲಾ ಹೆಣ್ಮಕ್ಕಳಿಗೂ ನಾನು ಆಭಾರಿ. ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿ ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ನಾವು ಸತ್ಯದ ಹಾದಿಯಲ್ಲಿದ್ದೇವೆ. ಈ ಹಾದಿಯನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು.
ವಿಶೇಷ ಪೂಜೆ, ಪ್ರಾರ್ಥನೆ: ಕ್ಷೇತ್ರದ ವಿರುದ್ಧದ ಅಪಪ್ರಚಾರ ಇಲ್ಲದಾಗಬೇಕು ಎಂದು ನಾಗರಿಕರು ದೇವಸ್ಥಾನದ ಎದುರು ತೆಂಗಿನಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅಣ್ಣಪ್ಪಸ್ವಾಮಿ ಬೆಟ್ಟದ ಬಳಿಯೂ ಪ್ರಾರ್ಥಿಸಿದರು. ಅಮೃತವರ್ಷಿಣಿ ಸಭಾಭವನಕ್ಕೆ ಮೆರವಣಿಗೆಯಲ್ಲಿ ತೆರಳಿ ಸಾಮೂಹಿಕ ಲಲಿತಾ ಪಂಚಾಕ್ಷರಿ ಪಠಣ ಮಾಡಿದರು. ಮಹಿಳೆಯರಿಗೆ ಬಾಗಿನ ನೀಡಿ ಗೌರವಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಹೇಮಾವತಿ ವೀ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್, ನಂದೀಶ್, ಮೈತ್ರಿ ನಂದೀಶ್, ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾ, ಧರ್ಮಸ್ಥಳ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";