ಮತಗಳ್ಳತನ ಪ್ರಕರಣದ ತನಿಖೆಗೆ SIT ರಚನೆ..!

Kannada Nadu
ಮತಗಳ್ಳತನ ಪ್ರಕರಣದ ತನಿಖೆಗೆ SIT ರಚನೆ..!

ಬೆಂಗಳೂರು: ರಾಜ್ಯದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗಾಗಿ ಕರ್ನಾಟಕ ಸರ್ಕಾರ ಶನಿವಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.

ಹೌದು.. 2023ರ ವಿಧಾನಸಭಾ ಚುನಾವಣೆಗೆ ಮುನ್ನ ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ 6,018 ಹೆಸರುಗಳನ್ನು ಅಳಿಸಲು ಯತ್ನಿಸಲಾಗಿದೆ ಎಂಬ ಆರೋಪದ ತನಿಖೆಗಾಗಿ ಕರ್ನಾಟಕ ಸರ್ಕಾರ ಶನಿವಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.

ಮಹದೇವಪುರ ಮತ್ತು ಆಳಂದ ಕ್ಷೇತ್ರ ಸೇರಿ ರಾಜ್ಯದ ಎಲ್ಲಾ ಮತಗಳ್ಳತನ ಪ್ರಕರಣಗಳನ್ನ ತನಿಖೆ ನಡೆಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ ಆದೇಶ ಹೊರಡಿಸಿದೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಳಂದ ಕ್ಷೇತ್ರದ ಸಾವಿರಾರು ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ ಎಂದು ಆರೋಪ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ.

ಸಿಐಡಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಬಿ.ಕೆ ಸಿಂಗ್‌ ಅವರ ನೇತೃತ್ವದಲ್ಲಿ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಬಿಕೆ ಸಿಂಗ್‌ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿರಲಿದ್ದು, ಸಿಸಿಡಿ, ಸಿಐಡಿ ಅಧೀಕ್ಷಕ ಸೈದುಲು ಅದಾವತ್‌ ಹಾಗೂ ಎಸ್‌ಇಡಿ, ಸಿಐಡಿ ಅಧೀಕ್ಷಕಿ ಶುಭಾನ್ವಿತ ಅವರು ತಂಡದಲ್ಲಿ ಇರಲಿದ್ದಾರೆ.

2023ರಲ್ಲಿ ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳನ್ನು ಅಳಿಸಲು ಕೆಲವು ವಿಫಲ ಪ್ರಯತ್ನಗಳನ್ನು ಮಾಡಲಾಗಿತ್ತು. ಈ ವಿಷಯದ ಬಗ್ಗೆ ತನಿಖೆ ನಡೆಸಲು ಚುನಾವಣಾ ಆಯೋಗದಿಂದಲೇ ಎಫ್‌ಐಆರ್‌ ದಾಖಲಿಸಲಾಗಿದೆ. 2023ರ ಫೆಬ್ರವರಿ 21ರಂದು ನೀಡಿದ ದೂರಿನ ಮೇರೆಗೆ ಆಳಂದ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 182, 419, 464, 465 ರಂತೆ ಪ್ರಕರಣ (ಮೊಕದ್ದಮೆ ಸಂಖ್ಯೆ: 26/2023) ದಾಖಲಾಗಿದೆ.

ಈ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ರಾಜ್ಯದ ಇತರೇ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ಹಾಗೂ ದಾಖಲಾಗಬಹುದಾದ ಇತರ ಪ್ರಕರಣಗಳ ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ.

ಎಸ್ಐಟಿಗೆ ಪೊಲೀಸ್ ಠಾಣೆಯ ಅಧಿಕಾರವನ್ನು ನೀಡಲಾಗಿದ್ದು, ಆಳಂದ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ಅದಕ್ಕೆ ವರ್ಗಾಯಿಸಲಾಗುತ್ತದೆ. ಈಗಾಗಲೇ ನೋಂದಾಯಿಸಲ್ಪಟ್ಟ ಅಥವಾ ಭವಿಷ್ಯದಲ್ಲಿ ನೋಂದಾಯಿಸಲ್ಪಡುವ ಯಾವುದೇ ಸಂಬಂಧಿತ ಪ್ರಕರಣಗಳನ್ನು ಸಹ SIT ನಿರ್ವಹಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಹುಲ್ ಗಾಂಧಿ ಹೇಳಿದ್ದೇನು?

ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಮತ ದೋಚುವವರಿಗೆ ಮತ್ತು ಭಾರತದ ಪ್ರಜಾಪ್ರಭುತ್ವವನ್ನು ನಾಶಪಡಿಸಿದವರ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ರಾಹುಲ್, ಕರ್ನಾಟಕದ ಆಳಂದ ಮತ್ತು ಮಹಾರಾಷ್ಟ್ರದ ರಾಜೂರ ಕ್ಷೇತ್ರಗಳ ಉದಾಹರಣೆಗಳನ್ನು ಉಲ್ಲೇಖ ಮಾಡಿ, ಸಾಫ್ಟ್‌ವೇರ್ ಬಳಸಿ ದೇಶಾದ್ಯಂತ ಮತದಾರರ ಪಟ್ಟಿಯಿಂದ ಹೆಸರುಗಳನ್ನು ವ್ಯವಸ್ಥಿತವಾಗಿ ತೆಗೆದು ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಆಳಂದ ಕ್ಷೇತ್ರದಲ್ಲಿನ 6,018 ಮತಗಳನ್ನು ರಾಜ್ಯದ ಹೊರಗಿನಿಂದ ಸಾಫ್ಟ್‌ವೇರ್ ಮತ್ತು ಫೋನ್ ಸಂಖ್ಯೆಗಳನ್ನು ಬಳಸಿ ಅಳಿಸಲು ಪ್ರಯತ್ನಿಸಿದ್ದಾರೆ ಎಂದು ರಾಹುಲ್ ಹೇಳಿಕೆ ನೀಡಿದ್ದರು. ಇದಷ್ಟೆ ಅಲ್ಲದೇ ಹೆಸರುಗಳನ್ನು ಅಳಿಸಲು ಬಳಸಲಾಗಿದೆ ಎನ್ನಲಾದ ಮೊಬೈಲ್ ನಂಬರ್ ಗಳನ್ನು ಸಹ ಬಹಿರಂಗಪಡಿಸಿದರು.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";