ಜಾತಿಗಣತಿ ಮರು ಸಮೀಕ್ಷೆಗೆ ಸರ್ಕಾರ ನಿರ್ಧಾರ

Kannada Nadu
ಜಾತಿಗಣತಿ ಮರು ಸಮೀಕ್ಷೆಗೆ ಸರ್ಕಾರ ನಿರ್ಧಾರ

ಬೆಂಗಳೂರು: ಜಾತಿಗಣತಿ ಮರು ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಸೆಪ್ಟೆಂಬರ್ 22ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೆ.22ರಿಂದ ಜಾತಿಗಣತಿ ಮರು ಸಮೀಕ್ಷೆ ನಡೆಸಲಾಗುತ್ತಿದ್ದು, ಅ.7ರವರೆಗೆ ಒಟ್ಟು 15 ದಿನಗಳ ಕಾಲ ಸಮೀಕ್ಷೆ ನಡೆಯಲಿದೆ. ವೈಜ್ಞಾನಿಕವಾಗಿ ಸಮೀಕ್ಷೆ ನಡೆಯಬೇಕು. ಯಾವುದೇ ಮನೆಗಳು ತಪ್ಪಿ ಹೋಗದಂತೆ ಯಶಸ್ವಿಯಾಗಿ ಸಮೀಕ್ಷೆ ಕೈಗೊಳ್ಳಲು ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.

2015ರಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ಅವರು ವರದಿಯನ್ನು ಸಲ್ಲಿಸಿದ್ದರು. ಕಾಂತರಾಜ್ ಅವರು ವರದಿಯನ್ನು ಸಲ್ಲಿಸಿ 10ವರ್ಷ ಆದ ಕಾರಣ ಹೊಸ ಸಮೀಕ್ಷೆಗೆ ತೀರ್ಮಾನ ಮಾಡಿ ಆ ಕಾರ್ಯವನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಈಗ ವಹಿಸಲಾಗಿದೆ. ಸಮಾಜದಲ್ಲಿ ಅನೇಕ ಜಾತಿಗಳು ಇದ್ದು, ವೈರುಧ್ಯತೆಯಿಂದಾಗಿ ಕೂಡಿದ್ದು, ಅಸಮಾನತೆ ಈಗಲೂ ಇದೆ. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುತ್ತದೆ. ಸಾಮಾಜಿಕ ನ್ಯಾಯವನ್ನು ಎಲ್ಲರಿಗೂ ಒದಗಿಸಬೇಕು ಎಂದು ಸಂವಿಧಾನ ಹೇಳುತ್ತದೆ. ಡಾ.ಅಂಬೇಡ್ಕರ್ ಅವರು ಹೇಳಿದಂತೆ 1950 ಜನವರಿ 26ರಂದು ಜಾರಿಯಾದಾಗ, ನಾವು ವೈರುಧ್ಯತೆಯಿಂದ ಕೂಡಿದ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ನಮ್ಮ ಸ್ವಾತಂತ್ರ‍್ಯ ಯಶಸ್ವಿಯಾಗಬೇಕಾದರೆ, ಪ್ರಜಾಪ್ರಭುತ್ವ ಉಳಿಯಬೇಕಾದರೆ ನಾವು ಅಸಮಾನತೆಯನ್ನು ತೊಲಗಿಸಲೇ ಬೇಕು ಎಂದು ಹೇಳಿದ್ದರು.

ಸ್ವಾತಂತ್ರ‍್ಯ ದೊರೆತು ಇಷ್ಟು ವರ್ಷಗಳಾದರೂ ಅಸಮಾನತೆಯನ್ನು ಸಂಪೂರ್ಣವಾಗಿ ತೊಲಗಿಸಲು ನಮಗೆ ಸಾಧ್ಯವಾಗಿಲ್ಲ. ಸಮಾನತೆಯನ್ನು, ಸಮಾನ ಅವಕಾಶ ಒದಗಿಸುವ ನಿಟ್ಟಿನಲ್ಲಿ ನಾವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ಕೈಗೊಂಡಿದ್ದೇವೆ. ರಾಜ್ಯದಲ್ಲಿ ಸುಮಾರು 7ಕೋಟಿ ಜನಸಂಖ್ಯೆಯಿದ್ದು, ಸುಮಾರು 2ಕೋಟಿಯಷ್ಟು ಕುಟುಂಬಗಳಿವೆ. ಇವರೆಲ್ಲರಿಗೂ ಸಮಾನ ಅವಕಾಶ ಒದಗಿಸುವುದು ನಮ್ಮ ಕರ್ತವ್ಯ.

ಪ್ರತಿಯೊಬ್ಬರ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಸ್ಥಿತಿಗತಿ ಗೊತ್ತಾದರೆ ಮಾತ್ರ ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಸಾಧ್ಯವಿದೆ. ದತ್ತಾಂಶ ಸರಿಯಾಗಿ ಗೊತ್ತಾದರೆ ಮಾತ್ರ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯ.

ಗ್ಯಾರಂಟಿ ಯೋಜನೆಗಳ ಮೂಲಕ ಅಸಮಾನತೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಲು ಪ್ರಯತ್ನ ಮಾಡಿದ್ದೇವೆ. ನಾವು ಹಿಂದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಭಾಗ್ಯ ಯೋಜನೆಗಳ ಮೂಲಕ ಸಹ ಇದನ್ನು ಸಾಧಿಸಲು ಪ್ರಯತ್ನಿಸಿದ್ದೇವೆ. ಹಿಂದುಳಿದವರ ಬಡತನ, ನಿರುದ್ಯೋಗ, ಅನಕ್ಷರತೆ ಹೋಗಬೇಕಾದರೆ ವಿಶೇಷ ಪ್ರಯತ್ನದ ಅಗತ್ಯವಿದೆ ಎಂಬುವುದನ್ನು ನಾವು ತಿಳಿದಿದ್ದೇವೆ. ಈ ಹಿನ್ನೆಲೆಯಲ್ಲಿ 7ಕೋಟಿ ಜನರ ಸಾಮಾಜಿಕ ಶೈಕ್ಷಣಿಕ ಪರಿಸ್ಥಿತಿಯನ್ನು ತಿಳಿದುಕೊಳ್ಳುವ ಉದ್ದೇಶದಿಂದ ಮಧುಸೂಧನ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ಸಮೀಕ್ಷೆ ಕಾರ್ಯ ಕೈಗೊಳ್ಳಲಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";