ಬೆಂಗಳೂರು; ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು, ಡಾ. ವಿಷ್ಣುವರ್ಧನ್ ಹಾಗೂ ಬಹುಭಾಷಾ ನಟಿ ಬಿ. ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ನೀಡಲು ರಾಜ್ಯ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು. ನಾಡಿನ ಹೆಮ್ಮೆಯ ಕವಿ ಕುವೆಂಪು ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಬೇಕು ಎಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.
ಸೆಪ್ಟೆಂಬರ್ 18 ರಂದು ವಿಷ್ಣುವರ್ಧನ್ ಅವರ ಜನ್ಮ ದಿನವಿದ್ದು, ಅಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಕಾರ್ಯಕ್ರಮದ ರೂಪುರೇಷೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತೀರ್ಮಾನಿಸುತ್ತದೆ ಎಂದರು.
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ವರ್ಧನ್ ಸ್ಮಾರಕ ನಿರ್ಮಿಸುವ ಬಗ್ಗೆ ಚರ್ಚೆಯಾಗಿಲ್ಲ. ಆದರೆ ಮುಖ್ಯಮಂತ್ರಿ ಅವರ ಜೊತೆ ಅವರ ಕುಟುಂಬದವರು ಮತ್ತು ಅಭಿಯಾನಿಗಳು ಈಗಾಗಲೇ ಚರ್ಚೆ ನಡೆಸಿದ್ದಾರೆ ಎಂದರು. ಸ್ಥಳೀಯ ಸಂಸ್ಥೆಗಳಲ್ಲಿ ಮತಪತ್ರ ಬಳಕೆ ಕುರಿತಂತೆ ಇಂದಿನ ಸಭೆಯಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ವಿವಿಧ ಇಲಾಖೆಗಳು, ನಿಗಮ, ಮಂಡಳಿಗಳಲ್ಲಿ ಲಕ್ಷಾಂತರ ಕೆಲಸಗಾರರು ನೌಕರರು ಎಂದು ಕರೆಸಲ್ಪಡುವವರು ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸೇವಾ ಭದ್ರತೆ ಮತ್ತು ಇತರ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಕುರಿತು ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಿ ಸಚಿವ ಸಂಪುಟಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸಚಿವ ಸಂಪುಟದ ಉಪಸಮಿತಿ ರಚಿಸಲಾಗುವುದು ಎಂದರು.
ರಾಜ್ಯದ ಎಲ್ಲಾ ಕಾರ್ಮಿಕರ ಹಿತದೃಷ್ಟಿಯಿಂದ ವಿವಿಧ ಇಲಾಖೆಗಳು ಮತ್ತು ಇಲಾಖೆಗಳ ಅಧಿನದಲ್ಲಿರುವ ನಿಗಮ, ಮಂಡಳಿಗಳಲ್ಲಿ ಹೊರಗುತ್ತಿಗೆ ನೌಕರರ ನೇಮಕಾತಿಗಳ ಬಗ್ಗೆ ಸೂಕ್ತ ನಿರ್ಣಯವನ್ನು ಸಚಿವ ಸಂಪುಟದ ಉಪಸಮಿತಿ ಕೈಗೊಳ್ಳಲಿದೆ. ಹೊರಗುತ್ತಿಗೆ ನೌಕರರು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಹಾಗೂ ಅಪಾಯಕಾರಿ ಸೇವೆ ಸಲ್ಲಿಸುವ ನೌಕರರ ಹಿತರಕ್ಷಣೆ ಮಾಡುವ ದೃಷ್ಟಿಯಿಂದ ಸಚಿವ ಸಂಪುಟ ಉಪಸಮಿತಿ ಶಿಫಾರಸ್ಸಿನ ಆಧಾರದ ಮೇಲೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.
ಕರ್ನಾಟಕ ಉಪ ಖನಿಜ ರಿಯಾಯಿತಿ ತಿದ್ದುಪಡಿ ನಿಯಮಗಳು – 2025 ಅನುಮೋದನೆ ನೀಡಲಾಗಿದೆ. ಜೊತೆಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಅನುಸರಿಸುವ ಕುರಿತು ಎರಡು ಮೂರು ಬದಲಾವಣೆ ಮಾಡಲಾಗುವುದು. ವೇದಿಕೆಯಲ್ಲಿ ಕನಿಷ್ಠ 9 ಮತ್ತು ಗರಿಷ್ಠ 13 ಮಂದಿ ಇರುವಂತೆ ಅತಿಥಿಗಳ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಲಾಗುವುದು. ಈ ಬಗ್ಗೆ ಇಲಾಖಾ ಸಚಿವರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಇದು ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಿಗೂ ಅನ್ವಯವಾಗುತ್ತದೆ. ಯಾರನ್ನೂ ಕಡೆಗಣಿಸುವುದಿಲ್ಲ. ವಾಸ್ತವಾಂಶಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿಗಳಿಗಾಗಿ ಅವಶ್ಯವಿರುವ ಜಮೀನಿಗೆ ಪರಿಹಾರ ನೀಡಲು ಮತ್ತು ಭೂಸ್ವಾಧೀನ ಕೈಗೊಳ್ಳಲು ರಾಜ್ಯ ಸರ್ಕಾರದ ಮಟ್ಟದಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲು ಇದೇ 16 ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ ಎಂದು ಸಚಿವ ಎಚ್.ಕೆ ಪಾಟೀಲ ತಿಳಿಸಿದರು.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ತ್ವರಿತವಾಗಿ ಕೈಗೊಳ್ಳುವ ಕುರಿತಂತೆ ಒಪ್ಪಂದದ ಐತೀರ್ಪು ರಚಿಸಲು ಏಕರೂಪದ ದರ ನಿಗದಿಪಡಿಸಲು ಹಾಗೂ ಇನ್ನಿತರ ಆಡಳಿತಾತ್ಮಕ ವಿಷಯಗಳಿಗೆ ಅನುಮೋದನೆ ನೀಡುವ ಕುರಿತು ವಿಸ್ತೃತವಾದ ಹಾಗೂ ಸಕಾರಾತ್ಮಕ ಚರ್ಚೆ ನಡೆದಿದೆ ಎಂದು ತಿಳಿಸಿದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯ ಸುಂಕ ಸಂಗ್ರಹಣೆಯನ್ನು ಹೆಚ್ಚಿಸಲು “ಕಾರ್ಮಿಕ ಸೆಸ್ ಟ್ರಾಕಿಂಗ್ ಅಂಡ್ ಮಾನಿಟರಿಂಗ್ ಸಿಸ್ಟಮ್ ಸಾಪ್ಟ್ ವೇರ್” ಎಂಬ ನೂತನ ತಂತ್ರಾಂಶವನ್ನು ರೂ.28.19 ಕೋಟಿಗಳ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲಾಗುವುದು. ಕಟ್ಟಡ ನಕ್ಷೆಗಳಿಗೆ ಅನುಮೋದನೆ ನೀಡುವ ಸಂದರ್ಭದಲ್ಲಿ ಕಟ್ಟಡ ಒಳಭಾಗದ ಒಳಾಂಗಣದ ಅಂದಾಜು ಪಟ್ಟಿಯಲ್ಲಿ ಅಳವಡಿಸಿಕೊಳ್ಳದೇ ಅನುಮೋದನೆ ನೀಡುವುದರಿಂದ ಶೇ.1 ರಷ್ಟು ಸುಂಕವು ಮಂಡಳಿಗೆ ಬರುತ್ತಿಲ್ಲ. ಆದ್ದರಿಂದ ಸುಂಕ ಮೊತ್ತವನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಅಗತ್ಯವಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.