ಕರ್ನಾಟಕದಲ್ಲಿ ರೈಲ್ವೆ ಸಂಪರ್ಕ ಹೆಚ್ಚಿಸಲು ಕ್ರಮ: ಅಶ್ವಿನಿ ವೈಷ್ಣವ್
ಕರ್ನಾಟಕದಲ್ಲಿ ರೈಲ್ವೆ ಸಂಪರ್ಕ ಹೆಚ್ಚಿಸಲು ಭಾರತೀಯ ರೈಲ್ವೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು , ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಪ್ರಶ್ನೆಗೆ ಲೋಕಸಭೆಯಲ್ಲಿ ಉತ್ತರಿಸಿದ ಸಚಿವರು, ಕರ್ನಾಟಕದ ಅನೇಕ ಯೋಜನೆಗಳು ಭೂಸ್ವಾಧೀನ ಪ್ರಕ್ರಿಯೆಯಿಂದ ವಿಳಂಬವಾಗುತ್ತಿದೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ–ಹರಿಹರ ಹೊಸಮಾರ್ಗ ಯೋಜನೆ 50:50ರ ವೆಚ್ಚ ಹಂಚಿಕೆ ಆಧಾರದ ಮೇಲೆ , ಮಂಜೂರು ಮಾಡಲಾಗಿದ್ದು, ಕರ್ನಾಟಕ ಸರ್ಕಾರ 832 ಕೋಟಿ ರೂಪಾಯಿ ವೆಚ್ಚದಲ್ಲಿ ಉಚಿತವಾಗಿ ಭೂಮಿ ಒದಗಿಸಬೇಕಾಗಿದೆ. ಈ ಯೋಜನೆಗೆ 488 ಹೆಕ್ಟೇರ್ ವಿಸ್ತೀರ್ಣದ ಭೂಮಿ ಸ್ವಾಧೀನಪಡಿಸಿಕೊಳ್ಳುವಂತೆ , ಕರ್ನಾಟಕ ಸರ್ಕಾರಕ್ಕೆ ಕೋರಿದ್ದರೂ ವೆಚ್ಚ ಹಂಚಲು ಮತ್ತು ಭೂಮಿಯನ್ನು ಉಚಿತವಾಗಿ ನೀಡಲು ಹಿಂದೇಟು ಹಾಕುತ್ತಿದೆ. ಇದರಿಂದ ಯೋಜನೆ ಸ್ಥಗಿತಗೊಂಡಿದೆ ಎಂದರು.
ಕರ್ನಾಟಕದಲ್ಲಿ ಪೂರ್ಣವಾಗಿ 42 ಸಾವಿರದ 515 ಕೋಟಿ ರೂಪಾಯಿ ವೆಚ್ಚದ 3 ಸಾವಿರದ 264 ಕಿಲೋ ಮೀಟರ್ ಉದ್ದದ 25 ಯೋಜನೆಗಳು ಮಂಜೂರಾಗಿದ್ದು, ಅವುಗಳಲ್ಲಿ 1 ಸಾವಿರದ 394 ಕಿಲೋ ಮೀಟರ್ ಉದ್ದದ ಮಾರ್ಗ, ಕಾರ್ಯಾರಂಭ ಮಾಡಿದೆ. ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ 21 ಸಾವಿರದ 310 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.