ಬೆಂಗಳೂರು,ಆ.1 :ಧರ್ಮಸ್ಥಳದಲ್ಲಿ ಹೆಣಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಊಹಾ-ಪೋಹದ ಸುದ್ದಿಗಳ ಬಗ್ಗೆ ಗೃಹ ಇಲಾಖೆ ನಿಗಾ ಇಟ್ಟಿದೆ. ಇಂತಹ ಸುದ್ದಿಗಳಿಂದ ಸಮಾಜದ ಭಾವನೆಗಳಿಗೆ ಧಕ್ಕೆಯಾದರೆ ಕೋಮು ಸೂಕ್ಷ್ಮತೆ ಮೇಲೂ ಪ್ರಭಾವ ಬೀರಿದರೆ ಈ ಪ್ರಚೋದನಕಾರಿ ಪೋಸ್ಟ್‌ಗಳನ್ನು ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಬೆಂಗಳೂರಿನಲ್ಲಿ
ಸುದ್ಧಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಈ ಹಿಂದೆ ದಕ್ಷಿಣ ಕನ್ನಡದಲ್ಲೂ ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಭಾಷಣವನ್ನು ಹಾಕಲಾಗುತ್ತಿತ್ತು ಈಗ ಕಾನೂನು ಕ್ರಮ ಕೈಗೊಂಡ ನಂತರ ಇದು ಕಡಿಮೆಯಾಗಿದೆ ಎಂದು ಅವರು ಧರ್ಮಸ್ಥಳ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖಾ ತಂಡ ವರದಿ ಸಲ್ಲಿಸುವವರೆಗೂ ನಾವು ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಹೇಳಿದರು.
ಧರ್ಮಸ್ಥಳ ಪ್ರಕರಣದ ಎಸ್‌ಐಟಿ ಮುಖ್ಯಸ್ಥರಾಗಿರುವ ಪ್ರಣವ್ ಮೊಹಂತಿ ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಆನ್‌ಲೈನ್ ಜೂಜು, ಗ್ಯಾಂಬ್ಲಿಂಗ್ ಎಲ್ಲ ಅವರ ವ್ಯಾಪ್ತಿಗೆ ಬರುತ್ತದೆ. ಇದನ್ನು ನಿಯಂತ್ರಣ ಸಂಬಂಧ ಚರ್ಚೆ ಮಾಡಲು ಅವರು ನನ್ನನ್ನು ಭೇಟಿಯಾಗಿದ್ದರು. ಧರ್ಮಸ್ಥಳ ವಿಚಾರದ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದರು.
ಎಸ್‌ಐಟಿ ಮುಖ್ಯಸ್ಥರಾಗಿರುವ ಪ್ರಣವ್ ಮೊಹಾಂತಿ ಅವರನ್ನು ಕೇಂದ್ರ ಸೇವೆಗೆ ಕಳುಹಿಸುವಂತೆ ಪತ್ರ ಬಂದಿಲ್ಲ. ಕೇಂದ್ರ ಸೇವೆಗೆ ಅರ್ಹರಾಗಿರುವ ಪಟ್ಟಿಯನ್ನು ಮಾತ್ರ ಕೇಂದ್ರ ಸರ್ಕಾರ ಸಿದ್ಧಗೊಳಿಸಿದೆ. ಇಷ್ಟಾದರೂ ಈ ಬಗ್ಗೆ ಗೊಂದಲದ ಸುದ್ದಿಗಳನ್ನು ಸೃಷ್ಟಿಲಾಗುತ್ತಿದೆ ಎಂದು ಗೃಹ ಸಚಿವರು ಅಸಮಾಧಾನ ಹೊರ ಹಾಕಿದರು.
ಒಳಮೀಸಲಾತಿ ಜಾರಿಗೆ ಆಗ್ರಹಿಸಿ ನಡೆದಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಳಮೀಸಲಾತಿ ಜಾರಿ ಪ್ರಕ್ರಿಯೆ ಒಂದು ಹಂತಕ್ಕೆ ಬಂದಿದೆ. ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿ ಸಲ್ಲಿಕೆಯಾಗಬೇಕಿದೆ. ಈ ಎಲ್ಲ ಹಿನ್ನೆಲೆಯಲ್ಲಿ ನಾಳೆ ನಾನು ಕಾಂಗ್ರೆಸ್‌ನ ಪರಿಶಿಷ್ಟ ಸಮುದಾಯದ ಶಾಸಕರ ಸಭೆ ಕರೆದಿದ್ದೇನೆ. ಅಲ್ಲಿ ಕೆಲ ವಿಚಾರಗಳ ಚರ್ಚೆಯಾಗಲಿದೆ ಎಂದರು.
ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ಸರ್ಕಾರ ತಗಾದೆ ತೆಗೆದಿರುವುದು ಸರಿಯಲ್ಲ. ಈ ಬಗ್ಗೆ ನಮ್ಮ ಜಲಸಂಪನ್ಮೂಲ ಸಚಿವರು ಸೂಕ್ತ ಉತ್ತರ ಕೊಡಲು ಸಮರ್ಥರಿದ್ದಾರೆ. ಏನೇ ಇರಲಿ ರಾಜ್ಯದ ಹಿತಾಸಕ್ತಿ ಕಾಪಾಡಲು ಏನೆಲ್ಲ ಬೇಕೋ ಆ ಕ್ರಮಗಳನ್ನು ಕಐಗೊಳ್ಳುತ್ತೇವೆ ಎಂದು ಹೇಳಿದರು.
ಬೆಂಗಳೂರಿನ ಆನೇಕಲ್‌ನಲ್ಲಿ ಬಾಲಕನೊಬ್ಬನ ಅಪಹರಣ,ಹಂತಕರ ಗುಂಡೇಟಿನ ಬಗ್ಗೆ ಮಾಹಿತಿ ಇಲ್ಲ, ಮಾಹಿತಿ ಪಡೆದುಕೊಂಡಪ್ರತಿಕ್ರಿಯಿಸುತ್ತೇನೆ ಎಂದು ಅವರು ಹೇಳಿದರು.