18 ವರ್ಷಗಳ ಬಳಿಕ ಶಿಲ್ಪಾ ಶೆಟ್ಟಿ ಕನ್ನಡ ಸಿನಿಮಾದಲ್ಲಿ ನಟಿಸಲು ಒಪ್ಪಿದ್ದೇಕೆ? ಪ್ರೇಮ್ ಹೇಳಿದ ಆ ಒಂದು ಸೀನ್ ಗೆ ಒಪ್ಪಿದ ಶಿಲ್ಪಾ ಶೆಟ್ಟಿ
ಈ ವರ್ಷ ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ‘ಕೆಡಿ: ದಿ ವಿಲನ್’ ಕೂಡ ಒಂದು. ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ ಈ ಸಿನಿಮಾ ಈಗಾಗಲೇ ಹವಾ ಹುಟ್ಟಾಕಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಪ್ರಚಾರವನ್ನು ಶುರುವಾಗಿದೆ. ಬೇರೆ ನಗರಗಳಿಗೆ ತೆರಳಿ ಟೀಸರ್ ಲಾಂಚ್ ಮಾಡಿದೆ ಚಿತ್ರತಂಡ.
ಜೋಗಿ ಪ್ರೇಮ್ ಸಿನಿಮಾ ಅಂದರೇನೆ ಹಾಗೇ. ಇನ್ನೂ ಸಿನಿಮಾ ಬಿಡುಗಡೆ ಆಗಿರಲ್ಲ. ಅಷ್ಟರಲ್ಲೇ ಕ್ರೇಜ್ ಶುರುವಾಗಿಬಿಡುತ್ತೆ. ಇದಕ್ಕೆ ಪ್ರಮುಖ ಕಾರಣ ಸ್ಟಾರ್ ಕಾಸ್ಟ್. ಈ ಬಾರಿ ‘ಕೆಡಿ’ ಸಿನಿಮಾಗೆ ಬಾಲಿವುಡ್‌ನಿಂದ ಸಂಜಯ್ ದತ್ ಹಾಗೂ ಶಿಲ್ಪಾ ಶೆಟ್ಟಿಯನ್ನು ಪ್ರಮುಖ ಪಾತ್ರಕ್ಕಾಗಿ ಕರೆದುಕೊಂಡು ಬಂದಿದ್ದಾರೆ. ಅದರಲ್ಲೂ ಶಿಲ್ಪಾ ಶೆಟ್ಟಿ ಈ ಸಿನಿಮಾ ಬಗ್ಗೆ ಥ್ರಿಲ್ ಆಗಿದ್ದಾರೆ. ಪ್ರೇಮ್ ಕಥೆ ಹೇಳಿದ ಶೈಲಿಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಶಿಲ್ಪ ಶೆಟ್ಟಿಗೆ ‘ಕೆಡಿ’ ಮೊದಲ ಕನ್ನಡ ಸಿನಿಮಾವೇನಲ್ಲ. ಈ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ‘ಪ್ರೀತ್ಸೋದ್ ತಪ್ಪಾ’, ‘ಒಂದಾಗೋಣ ಬಾ’ ಈ ಎರಡು ಸಿನಿಮಾಗಳಲ್ಲಿ ನಟಿಸಿದ್ದರು. 2005ರಲ್ಲಿ ಉಪೇಂದ್ರ ನಟಿಸಿದ ‘ಆಟೋ ಶಂಕರ್’ ಸಿನಿಮಾದಲ್ಲಿ ನಟಿಸಿದ್ದೇ ಕೊನೆ. ಆ ಬಳಿಕ ಮತ್ತೆ ಕನ್ನಡ ಚಿತ್ರರಂಗದ ಕಡೆ ಮುಖ ಮಾಡಿರಲಿಲ್ಲ. ಮತ್ತೊಂದು ಕನ್ನಡ ಸಿನಿಮಾ ಮಾಡುವುದಕ್ಕೆ ಅಸಲಿ ಕಾರಣವೇನು? ಪ್ರೇಮ್ ಹೇಳಿದ ಒಂದು ಸೀನ್ ಶಿಲ್ಪಾ ಶೆಟ್ಟಿ ಈ ಸಿನಿಮಾವನ್ನು ಒಪ್ಪಿಕೊಳ್ಳುವಂತೆ ಮಾಡಿತ್ತು. ಅದ್ಯಾವ ಸೀನ್ ಅನ್ನೋದನ್ನು ಖುದ್ದು ಶಿಲ್ಪಾ ಶೆಟ್ಟಿಯೇ ‘ಕೆಡಿ’ ಟೀಸರ್ ಲಾಂಚ್ ವೇಳೆ ರಿವೀಲ್ ಮಾಡಿದ್ದರು.
‘ಆಟೋ ಶಂಕರ್’ ಬಳಿಕ ಒಂದೇ ಕನ್ನಡ ಸಿನಿಮಾವನ್ನು ಒಪ್ಪಿಕೊಳ್ಳದ ಶಿಲ್ಪಾ ಶೆಟ್ಟಿಗೆ ‘ಕೆಡಿ’ಯಲ್ಲೂ ನಟಿಸುವುದಕ್ಕೆ ಇಷ್ಟವಿರಲಿಲ್ಲ. ಆ ವೇಳೆ ಶಿಲ್ಪಾ ಶೆಟ್ಟಿ ಪೆಟ್ಟು ಮಾಡಿಕೊಂಡು ವೀಲ್ ಚೇರ್‌ನಲ್ಲಿ ಇದ್ದರು. ಆ ವೇಳೆ ಪ್ರೇಮ್ ತಮ್ಮ ಸಿನಿಮಾದಲ್ಲಿ ನಟಿಸುವಂತೆ ಹಿಂದೆ ಬಿದ್ದಿದ್ದರು. ಹೀಗಾಗಿ ಕಥೆ ಕೇಳುವುದಕ್ಕಷ್ಟೇ ಶಿಲ್ಪಾ ಶೆಟ್ಟಿ ಒಪ್ಪಿಕೊಂಡಿದ್ದರು. ಆದರೆ, ಪ್ರೇಮ್ ಹೇಳಿದ ಕತೆ ಅವರನ್ನು ನಿರ್ಧಾರವನ್ನು ಬದಲಿಸಿತ್ತು.