IND vs ENG : ಶತಕ ಸಿಡಿಸಿ ಧೋನಿ, ವಿರಾಟ್ ದಾಖಲೆ ಚೂರು ಮಾಡಿದ ಶುಭಮನ್ ಗಿಲ್!
ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡು ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ ಟೀಮ್ ಇಂಡಿಯಾದ ನಾಲ್ಕನೇ ನಾಯಕ ಎಂಬ ದಾಖಲೆಗೆ ಶುಭಮನ್ ಗಿಲ್ ಪಾತ್ರರಾಗಿದ್ದಾರೆ. ಆ ಮೂಲಕ ಮೊಹಮ್ಮದ್ ಅಝರುದ್ದಿನ್ , ವಿರಾಟ್ ಕೊಹ್ಲಿ ಇರುವ ಎಲೈಟ್ ಲಿಸ್ಟ್‌ಗೆ ಶುಭಮನ್ ಗಿಲ್ ಸೇರಿಕೊಂಡಿದ್ದಾರೆ.
ಶತಕ ಸಿಡಿಸಿ ಧೋನಿ, ಕೊಹ್ಲಿ ದಾಖಲೆ ಸರಿಗಟ್ಟಿದ ಶುಭಮನ್ ಗಿಲ್!
ಎಂಎಸ್ ಧೋನಿ, ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ ಶುಭಮನ್ ಗಿಲ್.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರು ಸತತ ಎರಡು ಶತಕಗಳನ್ನು ಸಿಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನ ನಾಯಕತ್ವ ವಹಿಸಿಕೊಂಡ ನಂತರ ಗಿಲ್ ಅವರಿಗೆ ಬ್ಯಾಟಿಂಗ್ ಸಮಸ್ಯೆ ಕಾಡಲಿದೆ ಎಂದು ಹಲವು ಕ್ರಿಕೆಟ್ ವಿಶ್ಲೇಷಕರು ಹೇಳಿದ್ದರು. ಆದರೆ ಕಳೆದೆರಡು ಪಂದ್ಯಗಳಲ್ಲಿ ಶತಕ ಸಿಡಿಸುವ ಮೂಲಕ ಕ್ರಿಕೆಟ್ ದಿಗ್ಗಜರಾದ ಮೊಹಮ್ಮದ್ ಅಝರುದ್ದಿನ್ , ವಿರಾಟ್ ಕೊಹ್ಲಿ ಇರುವ ಎಲೈಟ್ ಲಿಸ್ಟ್‌ಗೆ ಸೇರ್ಪಡೆಯಾಗಿರುವುದಲ್ಲದೆ, ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಅವರ ಶತಕಗಳ ದಾಖಲೆ ಸರಿಗಟ್ಟಿದ್ದಾರೆ.
ಆಂಗ್ಲರ ನಾಡಿನಲ್ಲಿ ಶುಭಮನ್ ಗಿಲ್ ಈ ಹಿಂದೆ ಬ್ಯಾಟಿಂಗ್ ಸಮಸ್ಯೆ ಎದುರಿಸಿದ್ದರು ಹಾಗೂ ಅವರು ಕೇವಲ 14.66ರ ಸರಾಸರಿಯಲ್ಲಿ ರನ್ ಗಳಿಸಿದ್ದರು. ಆದರೆ ಪ್ರಸ್ತುತ ಟೆಸ್ಟ್ ಸರಣಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದು, ಹಲವು ದಾಖಲೆಗಳನ್ನು ಬರೆದಿದ್ದಾರೆ. ಅಲ್ಲದೆ ಇಂಗ್ಲೆಂಡ್ ಪಿಚ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ನಾಯಕರ ಸಾಲಿನಲ್ಲಿ ನಿಂತಿದ್ದಾರೆ.
IND vs ENG: ಶುಭಮನ್ ಗಿಲ್ ಶತಕ; ಉತ್ತಮ ಸ್ಥಿತಿಯಲ್ಲಿ ಭಾರತ
ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಭಾರತದ ನಾಯಕರು
* 2- ಮೊಹಮ್ಮದ್ ಅಝರುದ್ದಿನ್
* 2- ವಿರಾಟ್ ಕೊಹ್ಲಿ
* 2- ಶುಭಮನ್ ಗಿಲ್
ಇಂಗ್ಲೆಂಡ್ ವಿರುದ್ಧ ಶುಭಮನ್ ಗಿಲ್ ಗಳಿಸಿದ ಸತತ 3ನೇ ಶತಕ ಇದಾಗಿದ್ದು, ಭಾರತ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆದಿದ್ದ ಸರಣಿಯ ಕೊನೆಯ ಪಂದ್ಯದಲ್ಲೂ ಬಲಗೈ ಬ್ಯಾಟ್ಸ್‌ಮನ್ ಸೆಂಚುರಿ ಬಾರಿಸಿದ್ದರು.
ಎಂಎಸ್ ಧೋನಿ ದಾಖಲೆ ಸರಿಗಟ್ಟಿದ ಗಿಲ್
ಟೀಮ್ ಇಂಡಿಯಾದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಮ್ಮ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 16 ಶತಕ (6 ಟೆಸ್ಟ್ , 10 ಏಕದಿನ) ಬಾರಿಸಿದ್ದರು, ಆದರೆ ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶತಕ ಸಿಡಿಸಿದ ಶುಭಮನ್ ಗಿಲ್, ತಮ್ಮ ಶತಕಗಳ ಸಂಖ್ಯೆಯನ್ನು 16ಕ್ಕೆ (7 ಟೆಸ್ಟ್ , 8 ಏಕದಿನ, 1 ಟಿ20ಐ) ಹೆಚ್ಚಿಸಿಕೊಳ್ಳುವ ಮೂಲಕ ಎಂಎಸ್‌ಡಿಯ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ.
IND vs ENG: ʻಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ಬೇಕಿತ್ತಾ?ʼ-ರವಿಶಾಸ್ತ್ರಿ ಟೀಕೆ!
ಬೃಹತ್ ಮೊತ್ತದತ್ತ ಭಾರತ
ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ ಆರಂಭದಲ್ಲೇ ಕನ್ನಡಿಗ ಕೆಎಲ್ ರಾಹುಲ್ (2 ರನ್) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಎರಡನೇ ವಿಕೆಟ್‌ಗೆ ಜೊತೆಗೂಡಿದ ಯಶಸ್ವಿ ಜೈಸ್ವಾಲ್ (87 ರನ್), ಕರುಣ್ ನಾಯರ್ (31 ರನ್) 80 ರನ್‌ಗಳ ಜೊತೆಯಾಟದಿಂದ ತಂಡವನ್ನು ಆರಂಭಿಕ ಆಘಾತದಿಂದ ಪಾರುಮಾಡಿದರು. ಆದರೆ ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದ ರಿಷಭ್ ಪಂತ್ (25 ರನ್) ಹಾಗೂ ನಿತೀಶ್ ಕುಮಾರ್ ರೆಡ್ಡಿ (1 ರನ್) ಅವರ ವಿಕೆಟ್‌ಗಳನ್ನು 3 ರನ್ ಅಂತರದಲ್ಲೇ ಭಾರತ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಯಕ ಶುಭಮನ್ ಗಿಲ್ (114* ರನ್) ಹಾಗೂ ರವೀಂದ್ರ ಜಡೇಜಾ (41* ರನ್) ಅವರ ಮುರಿಯದ 99 ರನ್‌ಗಳ ಜೊತೆಯಾಟದಿಂದ ಮೊದಲ ದಿನದಾಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 310 ರನ್ ಗಳಿಸಿದೆ.