ಡಿಕೆಶಿಗೆ 100 ಶಾಸಕರ ಬೆಂಬಲ : ಪಕ್ಷಕ್ಕೆ ಶಾಸಕ ಇಕ್ಬಾಲ್ ಹುಸೇನ್ ಎಚ್ಚರಿಕೆ!
ಬೆಂಗಳೂರು: ಕಾಂಗ್ರೆಸ್ ಪಕ್ಷದೊಳಗೆ “ಅಸಮಾಧಾನ” ಮತ್ತು ನಾಯಕತ್ವ ಬದಲಾವಣೆಯ ಬಗ್ಗೆ ಊಹಾಪೋಹಗಳ ನಡುವೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಒನ್ ಟು ಒನ್ ಸಭೆ ಮುಂದುವರೆಸಿರುವಂತೆಯೇ ಡಿಕೆ ಶಿವಕುಮಾರ್ ಪರವಾಗಿರುವ 100 ಶಾಸಕರು, ಸಿಎಂ ಬದಲಾವಣೆ ಬಯಸಿದ್ದಾರೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.
ಹಾಲಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಉಳಿದ ಅವಧಿಗೆ ಡಿಕೆ ಶಿವಕುಮಾರ್ ಗೆ ಅವಕಾಶ ನೀಡಬೇಕು. ಇದು ನನ್ನೊಬ್ಬನ ಇಚ್ಚೆ ಅಲ್ಲ. ಸುಮಾರು 100 ಶಾಸಕರು ಸಿಎಂ ಬದಲಾವಣೆ ಪರವಾಗಿದ್ದು, ಈ ಕ್ಷಣಕ್ಕಾಗಿ ಅನೇಕ ಶಾಸಕರು ಕಾಯುತ್ತಿದ್ದಾರೆ ಎಂದು ಅವರು ತಿಳಿಸದ್ದಾರೆ.
ಅವರು ಉತ್ತಮ ಆಡಳಿತ ಬಯಸಿದ್ದು, ಡಿಕೆ ಶಿವಕುಮಾರ್ ಮುಂದಿನ ಸಿಎಂ ಆಗಬೇಕು ಎಂಬುದು ಅವರ ಆಪೇಕ್ಷೆಯಾಗಿದೆ. ಹಾಗಾಗೀ ಅವರ ಪರವಾಗಿ ನಿಲ್ಲಲು ಸಿದ್ಧರಾಗಿದ್ದಾರೆ. ಈಗ ಮುಖ್ಯಮಂತ್ರಿ ಬದಲಾವಣೆಯಾಗದಿದ್ರೆ 2028ರಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಇಕ್ಬಾಲ್ ಹುಸೇನ್, ಸುರ್ಜೇವಾಲ ಜೊತೆಗಿನ ಇಂದಿನ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುತ್ತೇನೆ. ಈಗ ಮುಖ್ಯಮಂತ್ರಿ ಬದಲಾವಣೆಯಾಗದಿದ್ರೆ 2028ರಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಪಕ್ಷದ ಹಿತದೃಷ್ಟಿಯಿಂದ ಇದು ಈಗ ಅಗತ್ಯವಾಗಿದೆ ಎಂದರು.
ಸಿಎಂ ಸ್ಥಾನದ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಖರ್ಗೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹುಸೇನ್, ಕಾಂಗ್ರೆಸ್ ಶಿಸ್ತಿನ ಪಕ್ಷವಾಗಿದೆ. ನಾವು ಯಾವಾಗಲೂ ಹೈಕಮಾಂಡ್ ಗೌರವಿಸುತ್ತೇವೆ. ಆದರೆ, ನಾವು ವಾಸ್ತವಾಂಶವನ್ನು ಹೇಳಬೇಕಾಗುತ್ತದೆ ಎಂದು ಹೇಳಿದರು.