ಸಾಗರ : ರಾಜ್ಯದಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಸ್ಥಿತಿಗತಿ ಅತ್ಯಂತ ಶೋಚನಿಯಮಯವಾಗಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ ಎದ್ದು ಕಾಣುತ್ತಿದ್ದು, ಶಾಲೆಗಳು ಮುಚ್ಚಿಹೋಗುವ ಪರಿಸ್ಥಿಯಲ್ಲಿವೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಣಕಂದೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಕಥೆ ರಾಜ್ಯದ ಇತರೇ ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳಿಂತ ಬೇರೆಯೇನಿಲ್ಲ. ರಾಜ್ಯ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿನ ಈ ಶಾಲೆಯು ಮೂಲಭೂತ ಸೌಕರ್ಯಗಳಿಲ್ಲಿದೆ, ಅಲ್ಲಿನ ವಿದ್ಯಾರ್ಥಿಗಳು ತೊಳಲಾಡುತ್ತಿದ್ದಾರೆ.
ಇಂಗ್ಲೀಷ್ ಮಾಧ್ಯಮದ ವ್ಯಾಮೋಹಕ್ಕೆ ಬಿದ್ದಿರುವ ಪೋಷಕರು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿಲ್ಲ. ಇನ್ನೂ ಸಮಾಜದ ಅಂಚಿನಲ್ಲಿರುವ ಬಡ ಗ್ರಾಮೀಣ ಪೋಷಕರು ಗತ್ಯಂತರವಿಲ್ಲದೇ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಬೇಕಾಗಿದೆ. ಈ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಮೊದಲೇ ಕಡಿಮೆ ಅದರಲ್ಲಿ, ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸದೆ ಇರುವುದರಿಂದ ಇರುವ ವಿದ್ಯಾರ್ಥಿಗಳು ಕೂಡಾ ಗುಣಮಟ್ಟದ ವಿದ್ಯಾಭ್ಯಾಸ ಪಡೆಯುವುದು ಹೇಗೆ ಎಂದು ಚಿಂತಿಸುವಂತಾಗಿದೆ.
ಮಣಕಂದೂರು ಗ್ರಾಮದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 1ರಿಂದ 5 ರವರೆಗೆ ಒಟ್ಟು 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಶಾಲೆಯಲ್ಲಿ ಮಕ್ಕಳಿಗೆ ಅಗತ್ಯ ಮೂಲ ಸೌಲಭ್ಯಗಳೇ ಇಲ್ಲ. ಶಾಲಾ ಕಟ್ಟಡ ಸಂಪೂರ್ಣವಾಗಿ ಶಿಥಿಲವಾಗಿದ್ದು, ಮಳೆ ಬಂದರೇ, ಶಾಲೆಯ ತುಂಬಾ ಮಳೆ ನೀರು ನಿಲ್ಲುತ್ತದೆ. ಮಳೆ ನೀರಿನಲ್ಲಯೇ ವಿದ್ಯಾರ್ಥಿಗಳು ಪಾಠ ಕೇಳಬೇಕಾದ ದುಸ್ಥಿತಿಯಿದೆ. ಶೌಚಾಲಯ, ಬೆಂಚ್ ವ್ಯವಸ್ಥೆ ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯಗಳ ಕೊರತೆ ಇರುವ ಈ ಸರ್ಕಾರಿ ಶಾಲೆಗೆ ಕಾಂಪೆÇೀಡ್ ಗೋಡೆ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲದಂತಾಗಿದೆ.
ವಿದ್ಯಾರ್ಥಿಗಳ ಪಾಲಕರು ಹಾಗೂ ಗ್ರಾಮಸ್ಥರು ಶಾಲೆಯ ದುಸ್ಥಿತಿ ಕುರಿತು ಅನೇಕ ಬಾರಿ ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕೂಡ ಯಾವುದೆ ಕ್ರಮ ಕೈಗೊಂಡಿಲ್ಲ. ಇದರಿಂದ ಬೇಸತ್ತ ಪೋಷಕರು, ತಾವೇ ಸ್ವತಃ ಮರದ ಕಂಬಗಳನ್ನು ನೆಟ್ಟು ತಡೆಗೋಡೆ ನಿರ್ಮಿಸಲು ಮುಂದಾಗಿದ್ದಾರೆ.
ಶೈಕ್ಷಣಿಕ ವರ್ಷ ಆರಂಭವಾಗಿ ಒಂದು ತಿಂಗಳು ಕಳೆಯುತ್ತಾ ಬಂದರೂ ಕೂಡ ಇದುವರೆಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿನ ಶಾಲೆಗೆ ಭೇಟಿ ನೀಡಿಲ್ಲ. ಶಾಲೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಶಿಕ್ಷಣ ಮಂತ್ರಿಗಳ ತವರಿನಲ್ಲಿ ಸರ್ಕಾರಿ ಶಾಲೆಯ ಪರಿಸ್ಥಿತಿ ಈ ರೀತಿ ಇರುವುದು ದುರ್ದೈವದ ಸಂಗತಿ. ಶಿಕ್ಷಣ ಸಚಿವ ಮಧು ಬಂಗಾರಪ್ಪರವರು ಈ ಕೂಡಲೇ ಶಾಲೆಯ ದುಸ್ಥಿತಿ ಕಡೆ ಗಮನ ಹರಿಸಿ, ಮಣಕಂದೂರು ಗ್ರಾಮದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಿ ಎನ್ನುತ್ತಾರೆ ಗ್ರಾಮದ ಜನರು.