ಬೆಂಗಳೂರು: ಬಡವರಿಗೆ ಮನೆ ಹಂಚಿಕೆ ಮಾಡಲು ಹಣ ಪಡೆದಿದ್ದೇನೆಂದು ಸಾಬೀತು ಮಾಡಿದರೆ ತಕ್ಷಣವೇ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ವಸತಿ ಸಚಿವ ಜಮೀರ್ ಅಹಮದ್ ಖಾನ್ ಇಂದಿಲ್ಲಿ ಸವಾಲು ಹಾಕಿದ್ದಾರೆ.
ಪಕ್ಷದ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಆರೋಪ ಮಾಡಿದ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರಿಗೆ ಕೊಡುವ ಮನೆಗೆ ಹಣ ಪಡೆದು ಬದುಕುವ ದರಿದ್ರ ನನಗೆ ಬಂದಿಲ್ಲ ಎಂದು ಕಿಡಿಕಾರಿದರು.
ನಮ್ಮ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ, ಆದರೆ, ನಮ್ಮ ಶಾಸಕರೇ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸುವುದಾಗಿ ತಿಳಿಸಿದರು.
ತನಿಖಾ ವರದಿ ನಂತರ ಒಂದು ವೇಳೆ ಯಾರಾದರೂ ತಪ್ಪು ಮಾಡಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ನಾನು ಪಾಟೀಲರ ಬಳಿಯೂ ಮಾತನಾಡುತ್ತೇನೆ ಎಂದರು.
ನಾನಾಗಲೀ, ಅಧಿಕಾರಿಗಳಾಗಲೀ ಮನೆ ನೀಡಲು ಹಣ ಪಡೆದಿದ್ದಾರೆಂದು ಪಾಟೀಲ್ ಆರೋಪ ಮಾಡಿಲ್ಲ, ಅವರು, ಯಾರ ಹೆಸರೂ ಹೇಳಿಲ್ಲ, ಪಂಚಾಯತ್ ಮಟ್ಟದಲ್ಲಿ ಈ ದಂಧೆ ನಡೆದಿದೆ ಎಂದು ಮಾಹಿತಿ ಕೊಟ್ಟರೆ ಕ್ರಮ ಕೈಗೊಳ್ಳುತ್ತೇನೆ.
ನಾನು ಪ್ರವಾಸದಲ್ಲಿದ್ದ ಕಾರಣ ಇದಕ್ಕೆ ತಕ್ಷಣಕ್ಕೆ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ, ಆದರೆ, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಎಲ್ಲಾ ಮಾಹಿತಿ ನೀಡಿದ್ದೇನೆ. ಮೊದಲನೆಯದಾಗಿ ಮನೆಗಳ ಹಂಚಿಕೆ ಪಂಚಾಯತ್ಗೆ ಅಧಿಕಾರ, ಅವರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದೇ ಅಂತಿಮ.
ಈ ಬಗ್ಗೆ ನಮ್ಮ ಪಕ್ಷದ ಮತ್ತೊಬ್ಬ ಶಾಸಕ ಗೋಪಾಲಕೃಷ್ಣ ಅವರಿಗೆ ಪೂರ್ಣ ಮಾಹಿತಿ ಇಲ್ಲ, ಅರಿಯದೆ ನನ್ನ ರಾಜೀನಾಮೆ ಕೇಳಿದ್ದಾರೆ, ಪಂಚಾಯತ್ ಅಲ್ಲದೆ, ಸ್ಥಳೀಯ ಶಾಸಕರು ನೀಡುವ ಶಿಫಾರಸಿನ ಆಧಾರದ ಮೇಲೂ ಆಶ್ರಯ ಮತ್ತಿತರ ಯೋಜನೆಗಳ ಮನೆಗಳ ಹಂಚಿಕೆ ಆಗಲಿದೆ ಎಂದರು.