ಮಡಿಕೇರಿ: ಮಡಿಕೇರಿ ದಸರಾಗೆ ತನ್ನದೇ ಆದ ಇತಿಹಾಸವಿದ್ದು, ಧಾರ್ಮಿಕ ಹಾಗೂ ಸಾಂಸ್ಕೃತಿಕತೆಯ ಜೊತೆಗೆ ಸಾಮರಸ್ಯ ಮತ್ತು ಸಹೋದರತ್ವ ಒಳಗೊಂಡಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ಬಣ್ಣಿಸಿದ್ದಾರೆ.
ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಮಂಗಳವಾರ ನಡೆದ ವಿಜಯದಶಮಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದಸರಾ ಹಬ್ಬವು ಪ್ರತಿಯೊಬ್ಬರಲ್ಲಿ ಐಕ್ಯತೆ ಮತ್ತು ಭ್ರಾತೃತ್ವವನ್ನು ಒಳಗೊಂಡಿದೆ. ದಸರಾದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವುದು ವಿಶೇಷವಾಗಿದೆ ಎಂದು ವಿಧಾನಸಭಾಧ್ಯಕ್ಷರು ನುಡಿದರು.
ರಾಷ್ಟ್ರದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದ್ದು, ಅವುಗಳನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಬರಲು ಎಲ್ಲರೂ ಪ್ರಯತ್ನಿಸಬೇಕು. ದ್ವೇಷ, ಅಸೂಯೆ, ಅಸಹನೆ, ಅಸಹಿಷ್ಟುತೆಯಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಎಲ್ಲರೂ ಭ್ರಾತೃತ್ವದಿಂದ ಬದುಕಿದಾಗ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯ ಎಂದು ಯು.ಟಿ.ಖಾದರ್ ಅವರು ಪ್ರತಿಪಾದಿಸಿದರು.
ಪ್ರತಿಯೊಬ್ಬ ಮನುಷ್ಯರಿಗೂ ಒಂದೇ ರೀತಿಯ ಅಂಗಾಂಗಗಳನ್ನು ದೇವರು ಸೃಷ್ಟಿಸಿರುತ್ತಾನೆ. ಕಪ್ಪು, ಬಿಳುಪು ಅಥವಾ ಕಂದು ಬಣ್ಣ ಇರಬಹುದು. ಮನುಷ್ಯನ ಅಂಗಾಂಗ ರಚನೆ ಒಂದೇ ರೀತಿ ಇರುತ್ತದೆ. ಆದ್ದರಿಂದ ಎಲ್ಲರೂ ಸಹೋದರತ್ವದಿಂದ ಬದುಕು ನಡೆಸುವಂತಾಗಬೇಕು. ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಮಾತನಾಡಿ ಪ್ರಸಕ್ತ ವರ್ಷದಲ್ಲಿ ಬರ ಇದ್ದರೂ ಸಹ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಡಿಕೇರಿ ದಸರಾಗೆ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಮಡಿಕೇರಿ ದಸರಾದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವುದು ವಿಶೇಷವಾಗಿದೆ. ದಸರಾ ಯಶಸ್ಸಿಗೆ ಎಲ್ಲರೂ ಕೈಜೋಡಿಸಿರುವುದು ಶ್ಲಾಘನೀಯ ಕಾರ್ಯ ಎಂದರು.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿ ಈ ಬಾರಿ ಮಳೆ ಕಡಿಮೆ ಆದ ಕಾರಣ ಬರ ಎಂದು ಘೋಷಣೆಯಾಗಿದೆ. ಆದಷ್ಟು ಇತಿ ಮಿತಿಯಲ್ಲಿ ಕಾರ್ಯಕ್ರಮವನ್ನು ಆಯೊಜಿಸಬೇಕು ಎಂದು ಮುಖ್ಯಮಂತ್ರಿಯವರು ಮತ್ತು ಉಪ ಮುಖ್ಯಮಂತ್ರಿ ಅವರು ಸಲಹೆ ಮಾಡಿದ್ದರು. ಆದರೂ ಮಡಿಕೇರಿ ದಸರಾಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿಯವರು ಮತ್ತು ಉಪ ಮುಖ್ಯಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ದಸರಾ ಕಾರ್ಯಕ್ರಮಕ್ಕೆ ಬಿಡುಗಡೆಯಾದ ಅನುದಾನಲ್ಲಿ 20-30 ಲಕ್ಷ ರೂ ಉಳಿಸಿ, ಗಾಂಧಿ ಮೈದಾನದಲ್ಲಿ ಶಾಶ್ವತ ವೇದಿಕೆ ನಿರ್ಮಾಣ ಮಾಡಲು ಪ್ರಯತ್ನಿಸಲಾಗುವುದು ಎಂದು ಶಾಸಕರಾದ ಡಾ.ಮಂತರ್ ಗೌಡ ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
ಪ್ರತಿಯೊಬ್ಬ ನಾಗರಿಕರಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರಸ್ತೆ ಹೀಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಆದ್ಯತೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಕೃಷಿ ಜೊತೆಗೆ ಪ್ರವಾಸೋದ್ಯಮವನ್ನು ಸಹ ಅಭಿವೃದ್ಧಿ ಪಡಿಸಬೇಕಿದೆ ಎಂದು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತರಾದ ಜಿ.ಚಿದ್ವಿಲಾಸ್ ಅವರು ಮಾತನಾಡಿ ಮಡಿಕೇರಿ ದಸರಾ ಆಚರಣೆ ಸಂಬಂಧಿಸಿದಂತೆ ಮೈಸೂರು ದಸರಾ ಮಾದರಿಯಲ್ಲಿ ಬಜೆಟ್‍ನಲ್ಲಿ ಅನುದಾನ ಪ್ರಕಟಿಸುವಂತಾಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿಯಬೇಕು ಎಂದು ಕೋರಿದರು.
ಚಿತ್ರನಟ ಅಭಿಷೇಕ್ ಅಂಬರೀಶ್ ಮಾತನಾಡಿ ನಮ್ಮ ಕುಟುಂಬ ಮತ್ತು ಕೊಡಗು ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ. ನಮ್ಮ ತಂದೆಯವರು ಕೊಡಗು ಜಿಲ್ಲೆಯನ್ನು ಹೆಚ್ಚು ಗೌರವಿಸುತ್ತಿದ್ದರು. ಕಾವೇರಿ ನದಿ ಉಗಮ ಸ್ಥಾನ ತಲಕಾವೇರಿಯಲ್ಲಿ ಹುಟ್ಟುವುದು ವಿಶೇಷ. ಆ ನಿಟ್ಟಿನಲ್ಲಿ ಕೊಡಗು ಒಂದು ರೀತಿ ಹೆಚ್ಚು ಪ್ರೀತಿಪಾತ್ರವಾದ ಜಿಲ್ಲೆಯಾಗಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷರು ಹಾಗೂ ನಗರ ದಸರಾ ಸಮಿತಿ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕರಗ ಉತ್ಸವದೊಂದಿಗೆ ಮಡಿಕೇರಿ ದಸರಾ ಆರಂಭವಾಗುತ್ತದೆ. ದಶ ಮಂಟಪಗಳ ಶೋಭಾಯಾತ್ರೆ ಮಡಿಕೇರಿ ದಸರಾ ವಿಶೇಷವಾಗಿದೆ ಎಂದರು.
ರಾಜರ ಕಾಲದಿಂದಲೂ ಮಡಿಕೇರಿ ದಸರಾ ಆಚರಿಸಿಕೊಂಡು ಬರಲಾಗಿದೆ. ಈ ಹಿಂದೆ ತನ್ವೀರ್ ಶೇಠ್ ಅವರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಸರ್ಕಾರದಿಂದ 10 ಲಕ್ಷ ರೂ. ಬಿಡುಗಡೆ ಮಾಡಿಸಿದ್ದರು. ಅವರ ಅವಧಿಯಿಂದ ಮಡಿಕೇರಿ ದಸರಾಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತ ಬಂದಿದೆ ಎಂದು ಅವರು ತಿಳಿಸಿದರು.
ಮಡಿಕೇರಿ ದಸರಾಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನಗರ ದಸರಾ ಸಮಿತಿ ಹೀಗೆ ಎಲ್ಲರೂ ಕೈಜೋಡಿಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಾಂಸ್ಕೃತಿಕ, ಜಾನಪದ, ಮಹಿಳಾ ಮತ್ತು ಮಕ್ಕಳ, ಯುವ, ಕ್ರೀಡಾ, ಕವಿಗೋಷ್ಠಿ ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ಸು ಆಗಿದೆ ಎಂದರು.
ಹೈಕೋರ್ಟ್ ಹಿರಿಯ ವಕೀಲರಾದ ಚಂದ್ರಮೌಳಿ ಅವರು ಮಾತನಾಡಿ ದಸರಾ ಹಬ್ಬಗೆ ಎಲ್ಲರೂ ಶ್ರಮಿಸಿದ್ದು, ಹಲವು ಸಂಘ ಸಂಸ್ಥೆಗಳು ಸಹ ಕೈಜೋಡಿಸಿವೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಪೌರಾಯುಕ್ತರಾದ ವಿಜಯ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ, ನಗರದಸರಾ ಸಮಿತಿ ಕಾರ್ಯಾಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಜಿ ಅರುಣ್ ಶೆಟ್ಟಿ, ಇತರರು ಇದ್ದರು.