ಮಕ್ಕಳ ಶಿಕ್ಷಣ ಕಲಿಕೆಗೆ ಹೆಚ್ಚು ಒತ್ತು: ಸಚಿವ ಎಸ್.ಮಧು ಬಂಗಾರಪ್ಪ
ಬಳ್ಳಾರಿ,ಜೂ.16
ರಾಜ್ಯದ ಎಲ್ಲಾ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.
ಸೋಮವಾರ, ನಗರದ ಬಿಪಿಎಸ್ಸಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ಕಾಪಾಡುವಲ್ಲಿ ನಮ್ಮ ಸರ್ಕಾರವು ಬದ್ಧವಾಗಿದೆ. ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಿಶೇಷ ಜವಾಬ್ದಾರಿ ವಹಿಸಲಾಗಿದ್ದು, ಶಾಲಾ ಸಮಯ ಹೊರತುಪಡಿಸಿ, ಸಂಜೆ ಸಮಯದಲ್ಲೂ ಮಕ್ಕಳಿಗೆ ವಿಶೇಷ ತರಗತಿಗಳ ಮೂಲಕ ಅಭ್ಯಾಸಿಸಲು ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದರು.
ಪರೀಕ್ಷಾ ಪಾವಿತ್ರö್ಯತೆ ಕಾಪಾಡಲು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ, ವೆಬ್ ಕಾಸ್ಟಿಂಗ್ ಮಾಡಲಾಗುತ್ತಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಕ್ಕಳಿಗೆ ಪರೀಕ್ಷೆ ಎದುರಿಸಲು ಮೂರು ಬಾರಿ ಅವಕಾಶ ನೀಡಲಾಗಿದೆ. ಇಲ್ಲಿಯೂ ಉತ್ತೀರ್ಣರಾಗದಿದ್ದರೆ ಅಂತಹ ಮಕ್ಕಳಿಗೆ ಶಾಲೆಗಳಲ್ಲಿ ಪುನಃ ಪ್ರವೇಶಾತಿ ಪಡೆಯಲು ಅವಕಾಶ ನೀಡಲಾಗಿದೆ. ಅಲ್ಲಿಯೂ ಸಹ ಎಲ್ಲಾ ಮಕ್ಕಳಂತೆ ಬಟ್ಟೆ, ಪುಸ್ತಕ, ಶೂ ಹಾಗೂ ಇತರೆ ಸೌಲಭಗಳನ್ನು ಸಹ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈಗಾಗಲೇ ರಾಜ್ಯದಲ್ಲಿ ಎರಡನೇ ಹಂತದ ಪರೀಕ್ಷೆಗಳು ಮುಕ್ತಾಯಗೊಂಡಿದ್ದು, ಇದರಲ್ಲಿ ಅನುತ್ತೀರ್ಣರಾದ ಮತ್ತು ಶೇಕಡವಾರು ಫಲಿತಾಂಶ ಹೆಚ್ಚಿಸಿಕೊಳ್ಳಲು ನೋಂದಾಯಿಸಿಕೊAಡ ಮಕ್ಕಳಲ್ಲಿ ಒಟ್ಟಾರೆ 84 ಸಾವಿರ ಮಕ್ಕಳು (ಶೇ.98.25 ರಷ್ಟು) ಉತ್ತೀರ್ಣರಾಗಿದ್ದಾರೆ ಎಂದು ಸಚಿವರು ವಿವರಿಸಿದರು.
ರಾಜ್ಯದ ಶಾಲೆಗಳಲ್ಲಿ ಮುಖಚಹರೆ ಆಧಾರಿತ ಹಾಜರಾತಿ ಕಡ್ಡಾಯವಾಗಿ ಮಾಡಲಾಗುತ್ತಿದ್ದು, ಈಗಾಗಲೇ ಈ ಕುರಿತು ಪ್ರಾಯೋಗಿಕ ಹಂತ ನಡೆಸಲಾಗಿದೆ ಎಂದರಲ್ಲದೇ, ಅಜೀಂ ಪ್ರೇಮ್ ಜೀ, ಇನ್ಫೋಸಿಸ್ ಹಾಗೂ ವಿವಿಧ ಸಂಸ್ಥೆಗಳ ಸಿಎಸ್ಆರ್ ಅನುದಾನ ಬಳಸಿಕೊಂಡು ಮಕ್ಕಳ ಆರೋಗ್ಯದ ಪೌಷ್ಟಿಕತೆ, ಗುಣಮಟ್ಟ ಶಿಕ್ಷಣಕ್ಕೆ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದವರು ಸಹ ಶಾಲೆಗೆ ಕೊಡುಗೆ ನೀಡಬೇಕು ಎಂದರು.
ದೇಶದ ಭವಿಷ್ಯವು ಮಕ್ಕಳ ಶಿಕ್ಷಣದ ಬುನಾದಿಯಲ್ಲಿದೆ. ಹಾಗಾಗಿ ನಮ್ಮ ಸರ್ಕಾರವು ಶಾಲೆಗಳಿಗೆ ಮೂಲಭೂತ ಸೌಕರ್ಯ, ಗುಣಮಟ್ಟ ಶಿಕ್ಷಣದ ಬೋಧನೆಗೆ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು. ಇದಕ್ಕೆ ಮುಖ್ಯಮಂತ್ರಿಯವರು ಸಮ್ಮತಿ ನೀಡಿದ್ದಾರೆ ಎಂದು ತಿಳಿಸಿದರು.
ನೀತಿ ಶಿಕ್ಷಣ ಅಳವಡಿಕೆ:
ಮಕ್ಕಳಲ್ಲಿ ನೀತಿ ಶಿಕ್ಷಣ ಬಹುಮುಖ್ಯವಾಗಿದ್ದು, ಪ್ರಸ್ತುತದಿಂದಲೇ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಒಂದರಿAದ ಹತ್ತನೇಯ ತರಗತಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ 2 ದಿನ ಮಾನವೀಯ ಮೌಲ್ಯಗಳ ಕುರಿತು ನೀತಿ ಶಿಕ್ಷಣ ಬೋಧಿಸಲಾಗುತ್ತಿದೆ. ಇದಕ್ಕೆ ನಮ್ಮ ಸರ್ಕಾರವು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಈ ಬಾರಿ ಬಜೆಟ್ ನಲ್ಲಿ ಶಾಲಾ ಶಿಕ್ಷಣ ಇಲಾಖೆಗೆ 41 ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ. 1008 ಶಾಲೆಗಳಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿ ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿ ಶಾಲೆಗಳ ಶಿಥಿಲ ಕೊಠಡಿಗಳ ದುರಸ್ತಿಗೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳು ಸಾಕಷ್ಟು ಪ್ರಭಾವ ಬೀರುತ್ತಿವೆ. ಈ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ ಲಭಿಸುತ್ತಿದ್ದು, ದಾಖಲಾತಿಗೆ ಬೇಡಿಕೆ ಹೆಚ್ಚುತ್ತಿದೆ. ಮಕ್ಕಳ ಭವಿಷ್ಯಕ್ಕೆ ಎಲ್ಲಾ ಸೌಲಭ್ಯ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಭಯಭೀತರಾಗಬಾರದು. ಈ ಹಿಂದೆ ಅವಕಾಶದ ಕೊರತೆಯಿಂದ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದರು. ಈಗ ಎಲ್ಲಾ ರೀತಿಯ ಅನುವು ಮಾಡಿಕೊಡಲಾಗುತ್ತಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದ ಶಾಲೆಯ ಮಕ್ಕಳನ್ನು ಮುಂಚೂಣಿಗೆ ತರಲು ರಾಜ್ಯ ಸರ್ಕಾರ ಸಾಕಷ್ಟು ಕೆಲಸ ಮಾಡುತ್ತಿದೆ. ವಿಶೇಷ ಅನುದಾನ ನೀಡಲಾಗಿದೆ. ಶಿಕ್ಷಕರ ನೇಮಕಾತಿಯಲ್ಲಿ ಹೆಚ್ಚಿನ ಶಿಕ್ಷಕರನ್ನು ಇಲ್ಲಿಗೆ ನೀಡಲಾಗುತ್ತಿದೆ ಎಂದು ಹೇಳಿದ ಸಚಿವ ಮಧು ಬಂಗಾರಪ್ಪ ಅವರು, ಗಡಿಭಾಗದ ಶಾಲೆಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಪ್ರವೇಶಾತಿ ಪಡೆದು, ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕು. ಇದರಿಂದ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪುವುದಿಲ್ಲ. ಇದಕ್ಕೆ ಬೇಕಾದ ಎಲ್ಲಾ ಸೌಲಭ್ಯ ರಾಜ್ಯ ಸರ್ಕಾರ ನೀಡಲಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಬಿಪಿಎಸ್ಸಿ ವಿದ್ಯಾಸಂಸ್ಥೆಯ ಅಧ್ಯಕ್ಷ ಮಹಿಪಾಲ್ ಸೇರಿದಂತೆ ವಿವಿಧ ಮುಖಂಡರು ಹಾಗೂ ಇತರರು ಹಾಜರಿದ್ದರು.
—————–
ಪ್ರತಿದಿನ ತಪ್ಪದೇ ಶಾಲೆಗೆ ಬರಬೇಕು: ಸಚಿವ ಎಸ್.ಮಧುಬಂಗಾರಪ್ಪ
ಬಳ್ಳಾರಿ,ಜೂ.16
ಮಕ್ಕಳು ದಿನಾಲೂ ಶಾಲೆಗೆ ಬರಬೇಕು. ಯಾವುದೇ ಕಾರಣಕ್ಕೂ ಶಾಲೆಗೆ ತಪ್ಪಿಸಬಾರದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಅವರು ಹೇಳಿದರು.
ನಗರದ ಪಟೇಲ್ ನಗರ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, 7 ತರಗತಿಯ ಮಕ್ಕಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಮನೆಯಲ್ಲಿ ಶಾಲೆಗೆ ಹೋಗಲು ಅಡ್ಡಿಪಡಿಸಿದರೆ, ನಾನು ತಪ್ಪದೇ ಶಾಲೆಗೆ ಹೋಗುತ್ತೇನೆ ಎಂದು ಹೇಳಬೇಕು. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಬೇಕು. ಆರೋಗ್ಯದಿಂದಿರಬೇಕು. ಶಿಕ್ಷಣ ಪಡೆದುಕೊಂಡು ಉನ್ನತ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂದು ಸಚಿವರು ಆಶಿಸಿದರು.
ಸಂವಿಧಾನ ಪೀಠಿಕೆ ಪ್ರಸ್ತುತಪಡಿಸಿದ ರಿತಿಕಾ:
ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಯಾರೂ ಹೇಳುತ್ತೀರಾ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಎಸ್.ಮಧು ಬಂಗಾರಪ್ಪ ಅವರು ಕೇಳಿದಾಗ, ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ರಿತಿಕಾ ಅವರು ಸಂವಿಧಾನ ಪೀಠಿಕೆಯನ್ನು ವಿಸ್ತಾರವಾಗಿ ವಾಚನ ಮಾಡಿದರು.
ಮಕ್ಕಳೊಂದಿಗೆ ಊಟ ಸವಿದ ಸಚಿವರು:
ಶಾಲೆಯ ವಿವಿಧ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಬಳಿಕ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದರು. ಊಟದಲ್ಲಿ ಅನ್ನ, ಸಾಂಬಾರು ಜೊತೆಗೆ ಉಪ್ಪಿನಕಾಯಿ ಮತ್ತು ಮೊಟ್ಟೆ ನೀಡಲಾಗಿತ್ತು. ಇದೇ ವೇಳೆ ಊಟದ ರುಚಿಯ ಬಗ್ಗೆ ಮಕ್ಕಳ ಅಭಿಪ್ರಾಯ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್, ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ್ ಶಂಕರ್, ಡಿಡಿಪಿಐ ಬಿ.ಉಮಾದೇವಿ, ವಿಷಯ ಪರಿವೀಕ್ಷಕಿ ವೇದಾವತಿ, ಶಾಲೆಯ ಮುಖ್ಯಗುರುಗಳಾದ ಜಯಶ್ರೀ ಸೇರಿದಂತೆ ಬಿಇಒ, ಎಸ್ಡಿಎಂಸಿ ಅಧ್ಯಕ್ಷರು, ಶಾಲಾ ಶಿಕ್ಷಕರು, ಶಾಲಾ ಶಿಕ್ಷಕರು ಹಾಗೂ ಇತರರು ಇದ್ದರು.
ಮಕ್ಕಳ ಶಿಕ್ಷಣ ಕಲಿಕೆಗೆ ಹೆಚ್ಚು ಒತ್ತು: ಸಚಿವ ಎಸ್.ಮಧು ಬಂಗಾರಪ್ಪ !
ಮಕ್ಕಳ ಶಿಕ್ಷಣ ಕಲಿಕೆಗೆ ಹೆಚ್ಚು ಒತ್ತು: ಸಚಿವ ಎಸ್.ಮಧು ಬಂಗಾರಪ್ಪ !
